RCB vs CSK: ಶಿವಂ ದುಬೆ ವಿರುದ್ಧ ಸಿಎಸ್‌ಕೆ ಫ್ಯಾನ್ಸ್ ಆಕ್ರೋಶ; ಅವಾಚ್ಯ ಶಬ್ದಗಳಲ್ಲಿ ನಿಂದನೆ
ಆರ್‌ಸಿಬಿ ಸಿಎಸ್‌ಕೆ ನಡುವಿನ ಪಂದ್ಯ ಎಂದರೆ ಐಪಿಎಲ್‌ನಲ್ಲಿ ಅದು ರೋಚಕ ಹಣಾಹಣಿ. ಗೆದ್ದವರು ಸ್ವಲ್ಪ ಹೆಚ್ಚಾಗಿ ಸಂಭ್ರಮಿಸಿದರೆ, ಸೋತ ತಂಡದ ಅಭಿಮಾನಿಗಳು ಬೇಸರಗೊಳ್ಳುವುದು ಸಹಜ.
ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲನುಭವಿಸಿತು. 27 ರನ್‌ಗಳಿಂದ ಗೆದ್ದ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಿದರೆ, ಸಿಎಸ್‌ಕೆ ಟೂರ್ನಿಯಿಂದಲೇ ಹೊರಬಿದ್ದಿದೆ.

ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಎಂದು ಅಭಿಮಾನಿಗಳು ಭಾವಿಸಿದ್ದರು. ಧೋನಿ ನಿವೃತ್ತಿ ಘೋಷಣೆ ಮಾಡದೇ ಇದ್ದರೂ, ಮುಂದಿನ ಐಪಿಎಲ್‌ನಲ್ಲಿ ಆಡುವ ಬಗ್ಗೆ ಖಚಿತತೆ ಇಲ್ಲ, ಅವರು ಕಪ್ ಗೆದ್ದು ನಿವೃತ್ತಿ ಹೊಂದಲಿ ಎನ್ನುವುದು ಸಿಎಸ್‌ಕೆ ಅಭಿಮಾನಿಗಳ ಬಯಕೆಯಾಗಿತ್ತು, ಆದರೆ ಆರ್ ಸಿಬಿ ವಿರುದ್ಧ ಸೋತದ್ದು ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಶಿವಂ ದುಬೆ ವಿರುದ್ಧ ಆಕ್ರೋಶ
218 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ ತಂಡಕ್ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು 201 ರನ್ ಗಳಿಸಿದ್ದರೂ ಸಾಕಿತ್ತು, ಪಂದ್ಯ ಸೋತರು ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತಿದ್ದರು. ಗಾಯಕ್ವಾಡ್ ಮೊದಲ ಎಸೆತದಲ್ಲಿ ಗೋಲ್ಡನ್ ಡಕ್‌ಗೆ ಔಟಾದ ಕಾರಣ ಸಿಎಸ್‌ಕೆ ಚೇಸ್ ಅತ್ಯಂತ ಕೆಟ್ಟ ಆರಂಭವನ್ನು ಪಡೆಯಿತು. ಈ ಆರಂಭಿಕ ಹಿನ್ನಡೆಯಿಂದ ತಂಡವು ಚೇತರಿಸಿಕೊಳ್ಳಲಿಲ್ಲ, ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಕುಸಿಯುತ್ತಿರುವ ಬ್ಯಾಟಿಂಗ್ ಲೈನ್-ಅಪ್ ನಡುವೆ, ಎಲ್ಲಾ ಕಣ್ಣುಗಳು ಶಿವಂ ದುಬೆಯತ್ತ ತಿರುಗಿದವು, ಅವರು ಸಿಎಸ್‌ಕೆ ತಂಡದ ಪ್ರಮುಖ ಬ್ಯಾಟರ್ ಆಗಿದ್ದರು.
ಮಧ್ಯಮ ಕ್ರಮಾಂಕದ ಬ್ಯಾಟರ್ ಶಿವಂ ದುಬೆ 15 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದ್ದು, ತಂಡಕ್ಕೆ ಹಿನ್ನಡೆಯಾಯಿತು. ಈ ಮೊದಲು ತಮ್ಮ ಬ್ಯಾಟಿಂಗ್‌ನಿಂದ ಸಿಎಸ್‌ಕೆ ಅಭಿಮಾನಿಗಳಿಂದ ಹೊಗಳಿಸಿಕೊಳ್ಳುತ್ತಿದ್ದ ಅವರು ಈಗ ತನ್ನ ತಂಡದ ಅಭಿಮಾನಿಗಳಿಂದಲೇ ಟೀಕೆ, ನಿಂದನೆಗಳನ್ನು ಎದುರಿಸುತ್ತಿದ್ದಾರೆ.
ಎಷ್ಟು ಪಂದ್ಯಗಳನ್ನು ಗೆಲ್ಲಿಸಿದಿರಿ ಎನ್ನುವುದು ಲೆಕ್ಕಕ್ಕೆ ಬರುವುದಿಲ್ಲ ಆದರೆ ಒಂದು ಪಂದ್ಯದಲ್ಲಿ ಸೋಲಿಗೆ ಕಾರಣವಾದರೆ, ಈ ರೀತಿ ಟೀಕೆ ನಿಂದನೆಗಳನ್ನು ಎದುರಿಸಬೇಕಾಗುತ್ತದೆ.
ಕೆಲವರು ಶಿವಂ ದುಬೆ ಅವರನ್ನು ದ್ರೋಹಿ ಎಂದು ನಿಂದಿಸಿದರೆ, ಮತ್ತೆ ಹಲವರು ಫಿಕ್ಸರ್ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಆತ ಇನ್ನೂ ಆರ್ ಸಿಬಿ ತಂಡಕ್ಕಾಗಿ ಆಡುತ್ತಿದ್ದಾನೆ ಎಂದು ಜರಿದಿದ್ದಾರೆ.












Click it and Unblock the Notifications