Champions Trophy: ಮಾರ್ಚ್ 1ರಂದು ಭಾರತ, ಪಾಕಿಸ್ತಾನ ಫೈಟ್
ವೆಸ್ಟ್‌ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ರೋಹಿತ್ ಪಡೆ ಇನ್ನೇನು ಕೆಲವೇ ಘಂಟೆಗಳಲ್ಲಿ ಭಾರತಕ್ಕೆ ಆಗಮಿಸಲಿದೆ. ಈ ಮಧ್ಯೆ ಚಾಂಪಿಯನ್ಸ್ ಟ್ರೋಫಿಯ ತಾತ್ಕಾಲಿಕ ವೇಳಾ ಪಟ್ಟಿ ಪ್ರಕಟವಾಗಿದೆ.
ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ಟೇಜ್ ಪಂದ್ಯಕ್ಕೆ ತಾತ್ಕಲಿಕವಾಗಿ ಮೂಹರ್ತ ಫಿಕ್ಸ್ ಆಗಿದೆ. ಈ ಪಂದ್ಯಕ್ಕೆ ಮಾರ್ಚ್ 1 ರಂದು ಲಾಹೋರ್ ಅತಿಥ್ಯ ನೀಡಲಿದೆ. ಈ ತಾತ್ಕಾಲಿಕ ವೇಳಾ ಪಟ್ಟಿಗೆ ಇನ್ನು ಬಿಸಿಸಿಐ ಒಪ್ಪಿಗೆ ನೀಡಿಲ್ಲ ಎಂದು ಐಸಿಸಿಯಿಂದ ತಿಳಿದು ಬಂದಿದೆ.

ಕರಡು ವೇಳಾಪಟ್ಟಿ ಸಿದ್ಧ
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂದರೆ PCB ಚಾಂಪಿಯನ್ಸ್ ಟ್ರೋಫಿ 2025 ರ ಕರಡು ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ ಮತ್ತು ಅದನ್ನು ICC ಗೆ ಸಲ್ಲಿಸಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನು ಪಾಕಿಸ್ತಾನ ಪಡೆದುಕೊಂಡಿದೆ. ಮುಂದಿನ ವರ್ಷ ಮಾರ್ಚ್ 1 ರಂದು ಲಾಹೋರ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ತನ್ನ ತಂಡದ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಪಿಸಿಬಿ ಫಿಕ್ಸ್ ಮಾಡಿದೆ. ಆದರೆ, ಇದರಲ್ಲಿ ಭಾಗವಹಿಸಲು ಮತ್ತು ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಇನ್ನೂ ಒಪ್ಪಿಗೆ ನೀಡಿಲ್ಲ ಎಂಬುದು ಕ್ಯಾಚ್.
ಎಷ್ಟು ದಿನಗಳ ಕಾಲ ನಡೆಯಲಿದೆ ಟೂರ್ನಿ?
ಇತ್ತೀಚೆಗೆ, ಐಸಿಸಿ ಸಮಾರಂಭದಲ್ಲಿ, ಮುಖ್ಯಸ್ಥ ಕ್ರಿಸ್ ಟೆಟ್ಲಿ ಇಸ್ಲಾಮಾಬಾದ್‌ನಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಭೇಟಿಯಾದರು. ಪಿಸಿಬಿ ಪ್ರಕಾರ, ಪಂದ್ಯಾವಳಿಯು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯುತ್ತದೆ, ಮಾರ್ಚ್ 10 ರಂದು ಮೀಸಲು ದಿನವಾಗಿರುತ್ತದೆ. ಅಂದರೆ ಫೈನಲ್‌ಗೆ ಇನ್ನೂ ಒಂದು ದಿನ ಕಾಯ್ದಿರಿಸಲಾಗಿದೆ. ಸೆಮಿಫೈನಲ್ ಸೇರಿದಂತೆ ಭಾರತದ ಎಲ್ಲಾ ಪಂದ್ಯಗಳು ಲಾಹೋರ್‌ನಲ್ಲಿ ನಡೆಯಲಿವೆ.
ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ
ಚಾಂಪಿಯನ್ಸ್ ಟ್ರೋಫಿಗಾಗಿ ಎರಡು ಗುಂಪುಗಳನ್ನು ಮಾಡಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಈ ಎರಡು ತಂಡಗಳಲ್ಲದೆ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಕೂಡ ಈ ಗ್ರುಪ್‌ನಲ್ಲಿ ಸ್ಥಾನ ಪಡೆದಿವೆ. ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ.
ಪಾಕಿಸ್ತಾನವು 2023 ರಲ್ಲಿ ಏಷ್ಯಾ ಕಪ್ ಅನ್ನು ಕೊನೆಯದಾಗಿ ಆಯೋಜಿಸಿತ್ತು, ಇದನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗಿತ್ತು. ಈ ಅವಧಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತು. ಆಟಗಾರರು ಪಾಕಿಸ್ತಾನಕ್ಕೆ ಹೋಗಲು ಸರ್ಕಾರ ನಿರಾಕರಿಸಿದ್ದರಿಂದ ಈ ರೀತಿ ತೀರ್ಮಾನವನ್ನು ಮಾಡಲಾಗಿತ್ತು. ಬಿಸಿಸಿಐ ಈ ವಿಷಯದ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತನಾಡಿದ ಬಳಿಕ ಐಸಿಸಿಗೆ ತನ್ನ ನಿರ್ಧಾರವನ್ನು ತಿಳಿಸಲಿದೆ.
ಯಾವ ಅಂಗಳದಲ್ಲಿ ಎಷ್ಟು ಪಂದ್ಯ?
ಐಸಿಸಿಗೆ ಪಿಸಿಬಿ ನೀಡಿದ ಪ್ರಸ್ತಾವನೆಯಂತೆ ಲಾಹೋರ್‌ನಲ್ಲಿ 7, ಕರಾಚಿಯಲ್ಲಿ 3 ಮತ್ತು ರಾವಲ್ಪಿಂಡಿಯಲ್ಲಿ 5 ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿ ಕರಾಚಿಯಲ್ಲಿ ಆರಂಭವಾಗಲಿದ್ದು, ಎರಡು ಸೆಮಿಫೈನಲ್ ಪಂದ್ಯಗಳು ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಫೈನಲ್ ಲಾಹೋರ್‌ನಲ್ಲಿ ನಡೆಯಲಿದೆ.












Click it and Unblock the Notifications