India VS Pakistan: ಪಾಕಿಸ್ತಾನ ವಿರುದ್ಧ 8 ವರ್ಷಗಳ ಸೇಡು ತೀರಿಸಿಕೊಳ್ಳುತ್ತಾ ಭಾರತ?
ಭಾರತ & ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಕ್ರಿಕೆಟ್ ಕದನ ಇದೀಗ ಆರಂಭವಾಗಿದೆ. ಈ ಮ್ಯಾಚ್ ನೋಡಲು ಇಡೀ ಜಗತ್ತೇ ಕಾದು ಕುಳಿತಿತ್ತು. ಟಾಸ್ ಗೆದ್ದು ಪಾಕಿಸ್ತಾನ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಭಾರತ ಮೊದಲು ಬೌಲಿಂಗ್ ದಾಳಿ ಶುರು ಮಾಡಿದ್ದು, ಅತಿ ಬೇಗನೆ ಪಾಕಿಸ್ತಾನ ಪಡೆಯನ್ನ ಆಲೌಟ್ ಮಾಡುವ ಹುಮ್ಮಸ್ಸು ಹೊಂದಿದೆ. ಆದರೆ ಇದೆಲ್ಲವನ್ನೂ ಮೀರಿ ಭಾರತ ತಂಡದ ಎದೆಯಲ್ಲಿ 8 ವರ್ಷ ಹಿಂದಿನ ಸೇಡು ಇನ್ನೂ ಹಾಗೇ ಉಳಿದಿದೆ.
ಅದು 2017ರ ಜೂನ್ 18, ಅಂದು ಭಾರತ & ಪಾಕಿಸ್ತಾನ ನಡುವೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯ ನಡೆಯುತ್ತಿತ್ತು. ಲಂಡನ್‌ನಲ್ಲಿ ನಡೆಯುತ್ತಿದ್ದ ಈ ಪಂದ್ಯದಲ್ಲಿ ಭಾರತ ಸುಲಭವಾಗಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಟಾಸ್ ಗೆದ್ದು ಬ್ಯಾಟಿಂಗ್ ಬಿಟ್ಟುಕೊಟ್ಟ ಭಾರತೀಯ ಪಡೆಗೆ ಪಾಕಿಸ್ತಾನ ತಂಡ ದೊಡ್ಡ ಆಘಾತ ನೀಡಿತ್ತು. ಬರೋಬ್ಬರಿ 338 ರನ್ ಗಳಿಸುವ ಮೂಲಕ ಬೃಹತ್ ಮೊತ್ತ ಕಲೆಹಾಕಿತ್ತು. ಹೀಗಿದ್ದರೂ ಭಾರತ ತಂಡ ಈ ಮ್ಯಾಚ್ ಗೆದ್ದೇ ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಲ್ಲಿ ಕೋಟಿ ಕೋಟಿ ಅಭಿಮಾನಿಗಳು ಇದ್ದರು.

72 ರನ್‌ಗೆ 6 ವಿಕೆಟ್ ಪತನ!
339 ರನ್‌ಗಳ ಬೃಹತ್ ಗುರಿ ಬೆನ್ನುಹತ್ತಿದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ 0 ರನ್ ಇದ್ದಾಗಲೇ ಮೊದಲ ಆಘಾತ ಎದುರಾಗಿತ್ತು. ರೋಹಿತ್ ಶರ್ಮಾ ಬಹು ಬೇಗನೇ ವಿಕೆಟ್ ಒಪ್ಪಿಸಿದ್ದರು. ಆ ನಂತರ ಬಂದ ಎಲ್ಲಾ ಆಟಗಾರರೂ ಪೆವಿಲಿಯನ್ ಪರೇಡ್ ನಡೆಸಿಬಿಟ್ಟರು. ಹೀಗೆ ನೋಡ ನೋಡುತ್ತಲೇ ಭಾರತ ತಂಡವು 72 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು. ಆಗಲೇ ಹಾರ್ದಿಕ್ ಪಾಂಡ್ಯ ಅದ್ಭುತ ಇನ್ನಿಂಗ್ಸ್ ಆಡಿದ್ದರು.
ಹಾರ್ದಿಕ್ ಪಾಂಡ್ಯ ಅದ್ಭುತ ಹೋರಾಟ
ಭಾರತ ತಂಡಕ್ಕೆ ಅಂದು ನೆರವಾಗಿದ್ದು ಹಾರ್ದಿಕ್ ಪಾಂಡ್ಯ ಅವರ ಅದ್ಭುತವಾದ ಬ್ಯಾಟಿಂಗ್. ಕೇವಲ 43 ಬಾಲ್ ಆಡಿ 6 ಸಿಕ್ಸರ್ ಬಾರಿಸಿದ್ದೂ ಅಲ್ಲದೆ 4 ಬೌಂಡರಿ ಗಳಿಸಿ 76 ರನ್ ಚಚ್ಚಿ ಬಿಸಾಡಿದರು. ಆ ನಂತರ ಮತ್ತೆ ಭಾರತ ತಂಡದ ಪತನ ಶುರುವಾಗಿ ಕೊನೆಗೂ 30.3 ಓವರ್ ಆಡಿ ತನ್ನ ಆಟವನ್ನು ಭಾರತ ತಂಡ ಮುಗಿಸಿತ್ತು. ಈ ಮೂಲಕ 339 ರನ್‌ಗಳ ಬೃಹತ್ ಗುರಿ ಬೆನ್ನುಹತ್ತಿದ್ದ ಭಾರತೀಯ ಕ್ರಿಕೆಟ್ ತಂಡ ಕೇವಲ 158 ರನ್‌ಗೆ ಆಲೌಟ್ ಆಗಿತ್ತು. ಆದರೆ ಈಗ 8 ವರ್ಷಗಳ ಆ ಸೇಡನ್ನು ಭಾರತ ತೀರಿಸಿಕೊಳ್ಳುತ್ತಾ? ಎನ್ನುವ ಪ್ರಶ್ನೆ ಮೂಡಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಉಸಿರು ಬಿಗಿ ಹಿಡಿದುಕೊಂಡು ಕಾಯುತ್ತಿದ್ದಾರೆ.












Click it and Unblock the Notifications