ಫೀಫಾ ವಿಶ್ವಕಪ್ 2022ಗಾಗಿ ಬಲಿಷ್ಠ ತಂಡ ಘೋಷಿಸಿದ ಬ್ರೆಜಿಲ್
ರಿಯೋ ಡಿ ಜನೈರೋ, ನವೆಂಬರ್ 8: ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಫುಟ್‌ಬಾಲ್‌ನ ಅತಿ ದೊಡ್ಡ ಹಬ್ಬ ಫೀಫಾ ವಿಶ್ವಕಪ್‌ಗೆ ಕತಾರ್ ಸಜ್ಜಾಗಿದೆ. ವಿಶ್ವಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದೆನಿಸಿರುವ ಬ್ರೆಜಿಲ್ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
26 ಮಂದಿ ಸದಸ್ಯರ ತಂಡದಲ್ಲಿ 9 ಮಂದಿ ಫಾರ್ವಡ್ ಆಟಗಾರರಿದ್ದು, ಆಕ್ರಮಣವೇ ತಂಡದ ಗುರಿ ಎಂಬುದನ್ನು ಮತ್ತೊಮ್ಮೆ ಕೋಚ್ ಟಿಟೆ ಸಾರಿದ್ದಾರೆ. 30 ವರ್ಷ ವಯಸ್ಸಿನ ಸ್ಟಾರ್ ಆಟಗಾರ ನೇಮಾರ್ ಅಲ್ಲದೆ ಯುವ ಪ್ರತಿಭೆಗಳಾದ ವಿನಿಸಿಯಸ್ ಜ್ಯೂನಿಯರ್, ಗ್ಯಾಬ್ರಿಯಲ್ ಮಾರ್ಟಿನೆಲ್ಲಿ ಹಾಗೂ ರೊಡ್ರಿಗೋ ಅಲ್ಲದೆ 39 ವರ್ಷ ವಯಸ್ಸಿನ ಡ್ಯಾನಿ ಆಲ್ವೇಸ್(ಬಾರ್ಸಿಲೋನಾದ ಮಾಜಿ ಆಟಗಾರ) ಕೂಡಾ ಇದ್ದು ತಂಡ ಸಮತೋಲನದಿಂದ ಕೂಡಿದೆ.
9 ಮಂದಿ ಮುಂಪಡೆ ಆಟಗಾರರು, 8 ಮಂದಿ ರಕ್ಷಣಾ ಪಡೆ ಆಟಗಾರರು ಹಾಗೂ 6 ಮಂದಿ ಮಿಡ್ ಫೀಲ್ಡರ್ಸ್ ಹೊಂದಿದೆ.

ರಿಯೋದ ಬ್ರೆಜಿಲ್ ಸಾಕರ್ ಕಾನ್ಫೆಡರೇಷನ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಕೋಚ್ ಟಿಟೆ, ''2018ರಿಂದ ಸುಮಾರು 55 ಆಟಗಾರರನ್ನು ತಂಡಕ್ಕಾಗಿ ಪರಿಗಣಿಸಲಾಗಿತ್ತು, ಅಂತಿಮವಾಗಿ 26 ಮಂದಿ ತಂಡವನ್ನು ಕಟ್ಟಲಾಗಿದೆ'' ಎಂದರು.
ಕತಾರ್‌ನಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ 2022ರಲ್ಲಿ ಬ್ರೆಜಿಲ್ 'ಜಿ' ಗುಂಪಿನಲ್ಲಿದೆ. ಇದೇ ಗುಂಪಿನಲ್ಲಿ ಸೆರ್ಬಿಯಾ, ಸ್ವಿಟ್ಜರ್ಲೆಂಡ್ ಹಾಗೂ ಕೆಮರೂನ್ ಕೂಡಾ ಇದೆ.
ನಾಲ್ಕು ವರ್ಷಗಳ ಹಿಂದೆ ರಷ್ಯಾದಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲೂ ಬ್ರೆಜಿಲ್ ಜೊತೆಗೆ ಸೆರ್ಬಿಯಾ ಹಾಗೂ ಸ್ವಿಟ್ಜರ್ಲೆಂಡ್ ಇದ್ದದ್ದು ವಿಶೇಷ. ಕಳೆದ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ಸ್‌ನಲ್ಲಿ ಬೆಲ್ಜಿಯಂ ವಿರುದ್ಧ ಬ್ರೆಜಿಲ್ ಸೋಲು ಕಂಡಿತ್ತು.

ಕಳೆದ ವಿಶ್ವಕಪ್ ಸೇರಿದಂತೆ 6 ವರ್ಷಗಳಿಂದ ಬ್ರೆಜಿಲ್ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿರುವ ಟಿಟೆ(61ವರ್ಷ) ಅವರು ಈ ಬಾರಿಯ ವಿಶ್ವಕಪ್ ನನ್ನ ಕೊನೆ ವಿಶ್ವಕಪ್ ಎಂದಿದ್ದು, ಈ ಬಾರಿ ತಂಡಕ್ಕೆ ಯಶಸ್ಸು ತಂದು ಕೊಡುವ ವಿಶ್ವಾಸ ಹೊಂದಿದ್ದಾರೆ.
ಫೀಫಾ ವಿಶ್ವಕಪ್ 2022: ಬ್ರೆಜಿಲ್ ತಂಡ
ಗೋಲ್ ಕೀಪರ್ಸ್: ಅಲಿಸನ್ (ಲಿವರ್ ಪೂಲ್), ಎಡರ್ಸನ್ (ಮ್ಯಾಂಚೆಸ್ಟರ್ ಸಿಟಿ), ವೆವರ್ಟನ್ (ಪಲ್ಮರಸ್)
ಡಿಫೆಂಡರ್ಸ್: ಡ್ಯಾನಿ ಆಲ್ವೆಸ್(ಯಾವುದೇ ಕ್ಲಬ್ ಪರ ಆಡುತ್ತಿಲ್ಲ), ಮಾರ್ಕ್ವಿನೋಸ್(ಪ್ಯಾರೀಸ್ ಸೈಂಟ್ ಜರ್ಮೈನ್), ಥಿಯಾಗೋ ಸಿಲ್ವಾ (ಚೆಲ್ಸಿಯಾ), ಎಡರ್ ಮಿಲಿತಾಯೋ (ರಿಯಲ್ ಮ್ಯಾಡ್ರೀಡ್), ಡ್ಯಾನಿಲೋ(ಯುವೆಂಟಸ್), ಅಲೆಕ್ಸ್ ಸ್ಯಾಂಡ್ರೋ(ಯುವೆಂಟಸ್)
ಮಿಡ್ ಫೀಲ್ಡರ್ಸ್: ಕ್ಯಾಸೆಮಿರೋ(ಮ್ಯಾಂಚೆಸ್ಟರ್ ಯುನೈಟೆಡ್), ಫ್ರೆಡ್ (ಮ್ಯಾಂಚೆಸ್ಟರ್ ಯುನೈಟೆಡ್), ಫ್ಯಾಬಿನ್ಹೋ (ಲಿವರ್ ಪೂಲ್), ಬ್ರೂನೋ ಗಿಮಾರೇಸ್ (ನ್ಯೂ ಕ್ಯಾಸಲ್), ಲೂಕಾಸ್ ಪಾಕ್ವೆಟಾ(ವೆಸ್ಟ್ ಹ್ಯಾಮ್), ಎವರ್ಟನ್ ರಿಬೈರೋ(ಫ್ಲಾಮೆಂಗೋ)
ಫಾರ್ವರ್ಡ್ಸ್: ನೇಮಾರ್ (ಪಿಎಸ್ ಜಿ), ವಿನಿಸಿಯಸ್ ಜ್ಯೂನಿಯರ್ (ರಿಯಲ್ ಮ್ಯಾಡ್ರಿಡ್), ರಿಚಾರ್ಲಿಸನ್ (ಟೊಟೆನ್‌ಹ್ಯಾಮ್), ರಾಫಿನ್ಹಾ (ಬಾರ್ಸಿಲೋನಾ), ಅಂಟೋನಿ(ಮ್ಯಾಂಚೆಸ್ಟರ್ ಯುನೈಟೆಡ್), ಗ್ಯಾಬ್ರಿಯೆಲ್ ಜೀಸಸ್ (ಆರ್ಸೆನಲ್), ಗ್ಯಾಬ್ರಿಯೆಲ್ ಮಾರ್ಟಿನೆಲ್ಲಿ (ಆರ್ಸೆನಲ್), ಪೆಡ್ರೋ (ಫ್ಲಾಮೆಂಗೋ), ರೋಡ್ರಿಗೋ (ರಿಯಲ್ ಮ್ಯಾಡ್ರಿಡ್)












Click it and Unblock the Notifications