Maharaja Trophy: ಚೇತನ್-ಮಯಾಂಕ್ ಅಬ್ಬರ; ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್‌ಗೆ ಭರ್ಜರಿ ಗೆಲುವು
ಮಹಾರಾಜ ಟ್ರೋಫಿ ಕೆಎಸ್‌ಸಿಎ 2024 ಪಂದ್ಯಾವಳಿಗೆ ಇಂದಿನಿಂದ ಭರ್ಜರಿ ಆರಂಭ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲೇ ಬೆಂಗಳೂರು ಬ್ಲಾಸ್ಟರ್ಸ್ ತಂಡ ಗೆಲುವಿನ ಆರಂಭ ಪಡೆದುಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ 9 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದೆ. ಬೆಂಗಳೂರು ಬ್ಲಾಸ್ಟರ್ಸ್ ಬ್ಯಾಟಿಂಗ್ ಬೌಲಿಂಗ್ ಎರಡೂ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು. ನಾಯಕ ಮಯಾಂಕ್ ಅಗರ್ವಾಲ್ ಮತ್ತು ಆರಂಭಿಕ ಬ್ಯಾಟರ್ ಎಲ್‌ಆರ್ ಚೇತನ್ ಸ್ಫೋಟಕ ಬ್ಯಾಟಿಂಗ್ ಮಾಡಿದರು.
ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗಾ ಮಿಸ್ಟಿಕ್ಸ್ 16.4 ಓವರ್ ಗಳಲ್ಲಿ 116 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ನಾಯಕ ದೇವದತ್ ಪಡಿಕ್ಕಲ್ 9 ಎಸೆತಗಳಲ್ಲಿ 20 ರನ್ ಗಳಿಸುವ ಉತ್ತಮ ಆರಂಭ ಪಡೆದರೂ, ಬೇಗನೆ ವಿಕೆಟ್ ಒಪ್ಪಿಸಿದರು. ಲುವ್ನಿತ್ ಸಿಸೋಡಿಯಾ 7 ಎಸೆತಗಳಲ್ಲಿ 14 ರನ್ ಗಳಿಸಿದರು. ಇವರಿಬ್ಬರು ಔಟಾದ ಬಳಿಕ ಗುಲ್ಬರ್ಗಾ ಬ್ಯಾಟರ್ ಗಳು ಸತತವಾಗಿ ಔಟಾದರು.

ಅನೀಶ್ ಕೆವಿ 4 ರನ್, ಸಮರನ್ 8 ರನ್, ಶರತ್ ಬಿಆರ್ 13 ರನ್, ಪ್ರವೀಣ್ ದುಬೆ 19 ರನ್, ಯಶೋವರ್ಧನ್ ಪರಂತಪ್ 11 ರನ್ ಗಳಿಸಿದರು. ವಿಜಯ್ ಕುಮಾರ್ ವೈಶಾಖ್ ಸೊನ್ನೆಗೆ ಔಟಾದರೆ, ಪೃಥ್ವಿರಾಜ್ ಶೆಖಾವತ್ 10 ರನ್ ಗಳಿಸಿದರು. ಬೆಂಗಳೂರು ಬ್ಲಾಸ್ಟರ್ಸ್ ಪರವಾಗಿ ಆದಿತ್ಯ ಗೋಯಲ್ 4 ಓವರ್ ಗಳಲ್ಲಿ 43 ರನ್ ನೀಡಿ 3 ವಿಕೆಟ್ ಪಡೆದುಕೊಂಡರು. ಲಾವಿಶ್ ಕೌಶಲ್, ನವೀನ್ ಎಂಜಿ ಮತ್ತು ಮೋಹ್ಸಿನ್ ಖಾನ್ ತಲಾ 2 ವಿಕೆಟ್ ಪಡೆದರು. ಶುಭಾಂಗ್ ಹೆಗಡೆ ಒಂದು ವಿಕೆಟ್ ಪಡೆದರು.
ಮಯಾಂಕ್, ಚೇತನ್ ಭರ್ಜರಿ ಬ್ಯಾಟಿಂಗ್
117 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ 11.2 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಬೆನ್ನಟ್ಟುವ ಮೂಲಕ 9 ವಿಕೆಟ್‌ಗಳಿಂದ ಸುಲಭ ಗೆಲುವು ಸಾಧಿಸಿತು. ಎಲ್‌ಆರ್ ಚೇತನ್ 34 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ 53 ರನ್ ಗಳಿಸಿದರು. ನಾಯಕ ಮಯಾಂಕ್ ಅಗರ್ವಾಲ್ 29 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 47 ರನ್ ಗಳಿಸಿದರು. ಇವರಿಬ್ಬರ ಉತ್ತಮ ಬ್ಯಾಟಿಂಗ್ ನೆರವಿನಿಂದ ಉದ್ಘಾಟನಾ ಪಂದ್ಯದಲ್ಲೇ ಭರ್ಜರಿ ಗೆಲುವು ಸಾಧಿಸಿದೆ.












Click it and Unblock the Notifications