Ben Stokes: ದೇವರ ಕೃಪೆಯಿಂದ ನಾನಿನ್ನೂ ಬದುಕಿದ್ದೇನೆ: ಅಚ್ಚರಿ ಹೇಳಿಕೆ ಕೊಟ್ಟ ಬೆನ್ ಸ್ಟೋಕ್ಸ್
Ben Stokes: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ಮುಂಬರುವ ತವರಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಮಾಧ್ಯಮ ಸಂವಾದವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಅವರ ಮುಖದಲ್ಲಿನ ಬದಲಾವಣೆ ಎಲ್ಲರ ಗಮನ ಸೆಳೆದಿದೆ. ಟೊಯೋಟಾ ಯುಕೆ ಸಂಸ್ಥೆಯು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸಹಯೋಗದೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಈ ಆಲ್‌ರೌಂಡರ್ ಎಂದಿಗಿಂತಲೂ ಹೆಚ್ಚು ತೆಳ್ಳಗೆ ಕಾಣಿಸಿಕೊಂಡಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಇಂಗ್ಲೆಂಡ್ ತಂಡದ ಮೂರೂ ಮಾದರಿಯ ಕ್ರಿಕೆಟ್ ಪಂದ್ಯಗಳಿಗಾಗಿ ಸಿದ್ಧಪಡಿಸಲಾದ ಹೊಸ 'ಕ್ಯಾಸ್ಟೋರ್' ಕಿಟ್‌ಗಳನ್ನು ಅನಾವರಣಗೊಳಿಸಲು ಈ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಆದಿಲ್ ಉಸ್ಮಾನ್ ರಶೀದ್, ಮಾರ್ಕ್ ವುಡ್, ಗಸ್ ಅಟ್ಕಿನ್ಸನ್ ಮತ್ತು ಬೆನ್ ಡಕೆಟ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಕಾಣಿಸಿಕೊಂಡಿದ್ದಾರೆ. ಆದರೆ, ಎಲ್ಲರ ಗಮನ ಸೆಳೆದದ್ದು ಮಾತ್ರ ಬೆನ್ ಸ್ಟೋಕ್ಸ್ ಅವರ ತೆಳ್ಳಗೆ ಆಗಿರುವುದು. ಅವರ ಈ ಹೊಸ ರೂಪವು ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಅಭ್ಯಾಸದ ವೇಳೆ ಮುಖಕ್ಕೆ ತಗುಲಿದ ಬಾಲ್
ಈ ವರ್ಷದ ಆರಂಭದಲ್ಲಿ ಅಭ್ಯಾಸದ ವೇಳೆ ಕ್ರಿಕೆಟ್ ಬಾಲ್ ಬಲವಾಗಿ ತಗುಲಿದ ಕಾರಣ ಬೆನ್ ಸ್ಟೋಕ್ಸ್ ಮುಖದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಯಾವುದೇ ದೊಡ್ಡ ಮಟ್ಟದ ಹಾನಿ ಇಲ್ಲದೆ ಪ್ರಾಣಾಪಾಯದಿಂದ ಪಾರಾಗಿರುವುದು ತಮ್ಮ ಅದೃಷ್ಟ ಎಂದು ಅವರು ತಿಳಿಸಿದ್ದಾರೆ.
ಬೆನ್ ಸ್ಟ್ರೋಕ್ ಹೇಳಿದ್ದೇನು?
"ಚೆಂಡು ನೇರವಾಗಿ ನನ್ನ ಮುಖಕ್ಕೆ ಬಂದು ಬಡಿಯಿತು. ನಾನು ತಲೆಯನ್ನು ಪಕ್ಕಕ್ಕೆ ತಿರುಗಿಸದಿದ್ದರೆ, ಕೇವಲ ಒಂದೆರಡು ಇಂಚು ಅತ್ತ-ಇತ್ತ ಆಗಿದ್ದರೂ ಸಹ ಇಂದು ನಾನು ಈ ಸಂದರ್ಶನ ನೀಡಲು ಇಲ್ಲಿ ಇರುತ್ತಿರಲಿಲ್ಲವೇನೋ. ಇಲ್ಲಿ ಕೆನ್ನೆಯ ಮೂಳೆಯ ಕೆಳಗೆ ತುಂಬಾ ಹೊಡೆಯ ಬಿದ್ದಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದೇನೆ. ದೇವರ ಕೃಪೆಯಿಂದ ನಾನಿನ್ನೂ ಇಲ್ಲಿದ್ದೇನೆ ಮತ್ತು ಈಗ ಎಲ್ಲವೂ ಸರಿಯಾಗಿದೆ," ಎಂದು ಹೇಳಿದ್ದಾರೆ.
ಬೆನ್ ಸ್ಟೋಕ್ಸ್ ಮುಖದಲ್ಲಿ ಬದಲಾವಣೆ
ಈ ಗಾಯ ಮತ್ತು ಚೇತರಿಕೆಯ ಅವಧಿಯು ಅವರ ದೈಹಿಕ ಸ್ಥಿತಿಯ ಮೇಲೆ ಗಮನಾರ್ಹ ಪರಿಣಾಮ ಬೀರಿದಂತೆ ತೋರುತ್ತಿದೆ. ಇತ್ತೀಚಿನ ವಿಡಿಯೋದಲ್ಲಿ ಈ ಆಲ್-ರೌಂಡರ್ ಹಿಂದೆಂದಿಗಿಂತಲೂ ಬಹಳ ತೆಳ್ಳಗೆ ಕಾಣುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇಂಗ್ಲೆಂಡ್ ತಂಡವು ಅತ್ಯಂತ ಪ್ರಮುಖವಾದ ತವರು ಸರಣಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಬೆನ್ ಸ್ಟೋಕ್ಸ್ ಅವರ ಮುಖದಲ್ಲಿ ಬದಲಾವಣೆ ಕಂಡುಬಂದಿದೆ. ಮುಂಬರುವ ಜೂನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಟೋಕ್ಸ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದ ಬೆನ್ ಸ್ಟೋಕ್ಸ್
ಇಂಗ್ಲೆಂಡ್ ತಂಡವು ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಹೀನಾಯ ಸೋಲನುಭವಿಸಿತ್ತು. ಇದೀಗ ಹೊಸ ಸರಣಿಯನ್ನು ಎದುರಿಸುತ್ತಿದೆ. ಈ ಸೋಲಿನ ಹೊರತಾಗಿಯೂ, ಬೆನ್ ಸ್ಟೋಕ್ಸ್ ಅವರಿಗೆ ಮಂಡಳಿ ಬೆಂಬಲ ಸೂಚಿಸಿದೆ ಮತ್ತು ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುತ್ತಿದ್ದಾರೆ. ಆಶಸ್ ಸರಣಿಯಲ್ಲಿ ಅವರು 184 ರನ್ ಗಳಿಸುವುದರ ಜೊತೆಗೆ 15 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದರು.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳ ನಂತರ, ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ ಮತ್ತೊಂದು 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಎದುರಿಸಲಿದೆ. ಆಶಸ್ ಸರಣಿಯ ಸೋಲಿನಿಂದ ಚೇತರಿಸಿಕೊಳ್ಳಲು ಮತ್ತು ತವರಿನಲ್ಲಿ ಮತ್ತೊಮ್ಮೆ ಬಲಿಷ್ಠ ತಂಡವಾಗಿ ಹೊರಹೊಮ್ಮಲು ಇಂಗ್ಲೆಂಡ್‌ಗೆ ಈ ಟೆಸ್ಟ್ ಸರಣಿಗಳು ಅತ್ಯಂತ ನಿರ್ಣಾಯಕವಾಗಿವೆ ಅಂತಲೇ ಹೇಳಲಾಗುತ್ತದೆ. ಒಟ್ಟಿಲ್ಲಿ ಬೆನ್ ಸ್ಟೋಕ್ಸ್ ಪ್ರಾಣಾಪಾಯದಿಂದ ಪಾರಾಗಿ ಮತ್ತೆ ಕ್ರಿಕೆಟ್ ತಂಡವನ್ನು ಮುನ್ನಡೆಸಲು ಸಜ್ಜಾಗುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.












Click it and Unblock the Notifications