Virat Kohli & Rohit Sharma: ಕೊಹ್ಲಿ, ರೋಹಿತ್‌ಗೆ ಅವಮಾನ ಮಾಡಿದ ಆಸ್ಟ್ರೇಲಿಯಾ ಮಾಧ್ಯಮಗಳು
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಪಂದ್ಯ ರೋಚಕ ಘಟ್ಟ ತಲುಪಿದೆ. 333 ರನ್‌ಗಳ ಮುನ್ನಡೆ ಪಡೆದಿರುವ ಆಸ್ಟ್ರೇಲಿಯಾ ಐದನೇ ದಿನ ಬ್ಯಾಟಿಂಗ್ ಮುಂದುವರೆಸಲಿದೆ. ಕೊನೆಯ ದಿನ ಭಾರತ ಈ ಬೃಹತ್ ಮೊತ್ತವನ್ನು ಚೇಸ್ ಮಾಡುತ್ತಾ ಇಲ್ಲ ಡ್ರಾ ಮಾಡಿಕೊಳ್ಳಲು ಆಡುತ್ತಾ ಅಥವಾ ಆಸ್ಟ್ರೇಲಿಯಾ ಭಾರತವನ್ನು ಬೇಗ ಆಲೌಟ್ ಮಾಡಿ ಪಂದ್ಯ ಗೆಲ್ಲುತ್ತಾ ಎನ್ನುವ ಕುತೂಹಲ ಹೆಚ್ಚಾಗಿದೆ. ಭಾರತ ಆಸ್ಟ್ರೇಲಿಯಾ ನಡುವಿನ ಪಂದ್ಯ ಎಂದರೆ ಅಲ್ಲಿ ಆಟಗಾರರ ನಡುವೆ ಮಾತಿನ ಚಕಮಕಿ ಸಾಮಾನ್ಯ ಆದರೆ ಈ ಬಾರಿ ಅಲ್ಲಿನ ಮಾಧ್ಯಮಗಳು ಕೂಡ ಭಾರತೀಯ ಆಟಗಾರರನ್ನು ಟಾರ್ಗೆಟ್ ಮಾಡಿದ್ದು ಅವಹೇಳನ ಮಾಡುತ್ತಿವೆ.
ಆಸ್ಟ್ರೇಲಿಯಾ ಮಾಧ್ಯಮಗಳಿಗೆ ವಿರಾಟ್ ಕೊಹ್ಲಿ ಎಂದರೆ ಸಾಕಷ್ಟು ಪ್ರೀತಿ! ಕೊಹ್ಲಿ ವರ್ತನೆ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳು ಹಲವು ಬಾರಿ ಕಿಡಿ ಕಾರಿವೆ. ಆದರೆ ಕೊಹ್ಲಿ ತನಗೆ ಕೊಟ್ಟಿದ್ದನ್ನು ವಾಪಸ್ ಕೊಟ್ಟಿದ್ದಾರೆ. ಪದೇ ಪದೇ ಸ್ಲೆಡ್ಜಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯನ್ನರನ್ನು ಅಡಗಿಸಿದ್ದೇ ವಿರಾಟ್ ಕೊಹ್ಲಿ, ಇದೇ ಕಾರಣಕ್ಕೆ ಕೊಹ್ಲಿಯನ್ನು ಕಂಡರೆ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಸಿಟ್ಟು, ಇತ್ತೀಚೆಗೆ ಕೊಹ್ಲಿ ಕುಟುಂಬದ ಜೊತೆ ಇದ್ದಾಗ ಮಕ್ಕಳ ವಿಡಿಯೋ ಮಾಡಿದ್ದಕ್ಕೆ ಪತ್ರಕರ್ತೆ ಮೇಲೆ ಕೊಹ್ಲಿ ರೇಗಿದ್ದರು. ಇದು ಕೂಡ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಸಿಟ್ಟು ತರಿಸಿತ್ತು.

ನಾಲ್ಕನೇ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್ ವೇಳೇ ಸ್ಯಾಮ್ ಕೋನ್‌ಸ್ಟಾಸ್ ವಿರುದ್ಧ ಕೊಹ್ಲಿ ಜಗಳ ಮಾಡಿಕೊಂಡ ಬಳಿಕ ಆಸ್ಟ್ರೇಲಿಯಾ ಮಾಧ್ಯಮಗಳು ಕೊಹ್ಲಿ ಬಗ್ಗೆ ಅವಹೇಳನಕಾರಿ ವರದಿ ಪ್ರಸಾರ ಮಾಡುತ್ತಿವೆ. ಮೊದಲು ಕೊಹ್ಲಿಯನ್ನು ಜೋಕರ್ ಎಂದು ಅವಮಾನಿಸಲಾಗಿತ್ತು, ಈಗ ಆಸ್ಟ್ರೇಲಿಯಾದ ಟ್ಯಾಬ್ಲಾಯ್ಡ್ ಒಂದು ಸ್ಯಾಮ್ ಕೋನ್‌ಸ್ಟಾಸ್‌ರ ಇನ್ನಿಂಗ್ಸ್ ಉಲ್ಲೇಖಿಸಿ "ವಿರಾಟ್, ನಾನು ನಿಮ್ಮ ತಂದೆ" ಎಂದು ಶೀರ್ಷಿಕೆ ನೀಡಿದ್ದು ಕೀಳು ಮಟ್ಟವನ್ನು ತೋರಿಸಿವೆ.
ಸ್ಯಾಮ್ ಕೋಸ್ಟಾಸ್ ಜೊತೆಗಿನ ಜಗಳದ ಬಳಿಕ ಐಸಿಸಿ ದಂಡ ವಿಧಿಸಿದ್ದನ್ನು ಉಲ್ಲೇಖಿಸಿದ ದಿ ವೆಸ್ಟ್ ಆಸ್ಟ್ರೇಲಿಯನ್ ಪತ್ರಿಕೆಯು ಕೊಹ್ಲಿಯನ್ನು ಜೋಕರ್ ಎಂದು ಕರೆದಿತ್ತು. ವಿರಾಟ್ ಕೊಹ್ಲಿ ಮಾತ್ರವಲ್ಲ ಈಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೇಲೆ ಕೂಡ ಮುಗಿಬಿದ್ದಿದ್ದು, ಕ್ರೈ ಬೇಬಿ ಎಂದು ಕರೆದಿದೆ. ರೋಹಿತ್ ಶರ್ಮಾರನ್ನು ಅಳುತ್ತಿರುವ ಮಗುವಿನ ರೀತಿ ಬಿಂಬಿಸುವ ಚಿತ್ರವನ್ನು ಹಂಚಿಕೊಂಡಿದ್ದು ಕ್ಯಾಪ್ಟನ್ ಕ್ರೈ ಬೇಬಿ ಎಂದು ಶೀರ್ಷಿಕೆ ನೀಡಿದೆ.
ಆಸ್ಟ್ರೇಲಿಯಾ ಮಾಧ್ಯಮಗಳು ಅನಗತ್ಯವಾಗಿ ಭಾರತೀಯ ಆಟಗಾರರನ್ನು ಗುರಿಯಾಗಿಸಿ ಟೀಕೆ ಮಾಡುತ್ತಿರುವುದು ಮಾಜಿ ಕ್ರಿಕೆಟಿಗರ ಕೋಪಕ್ಕೆ ಕಾರಣವಾಗಿದೆ. ಮೈದಾನದಲ್ಲಿ ಏನೇ ಆದರೂ ಅದಕ್ಕೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾಧ್ಯಮಗಳಿಗೆ ಟೀಕಿಸುವ ಅಧಿಕಾರವಿದೆ ಆದರೆ ಅದಕ್ಕೂ ಒಂದು ಮಿತಿ ಇರುತ್ತದೆ. ಟೀಕೆಗೂ ಅವಹೇಳನಕ್ಕೂ ಸಾಕಷ್ಟು ವ್ಯತ್ಯಾಸವಿದ್ದು ಮಾಧ್ಯಮಗಳು ಅದನ್ನು ಅರ್ಥ ಮಾಡಿಕೊಳ್ಳಲಿ ಎಂದು ಆಗ್ರಹಿಸಲಾಗಿದೆ.












Click it and Unblock the Notifications