Ind vs Aus: ಭಾರತಕ್ಕೆ 265 ರನ್‌ಗಳ ಗುರಿ ನೀಡಿದ ಆಸ್ಟ್ರೇಲಿಯಾ
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ 2025 ರ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿದ್ದು ಭಾರತಕ್ಕೆ 265 ರನ್‌ಗಳ ಗುರಿ ನೀಡಿದೆ. 49.3 ಓವರ್ ಗಳಲ್ಲಿ ಆಸ್ಟ್ರೇಲಿಯಾ 264 ರನ್‌ಗಳಿಗೆ ಆಲೌಟ್ ಆಗಿದೆ. ಸ್ಟೀವ್ ಸ್ಮಿತ್ ಮತ್ತು ಅಲೆಕ್ಸ್ ಕ್ಯಾರಿ ಅರ್ಧಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದರು.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಬಳಿಕ ಟ್ರಾವಿಸ್ ಹೆಡ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. 33 ಎಸೆತಗಳಲ್ಲಿ 5 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ 39 ರನ್ ಗಳಿಸಿ ಅಪಾಯಕಾರಿಯಾಗಿದ್ದಾಗ ವರುಣ್ ಚಕ್ರವರ್ತಿ ಅವರನ್ನು ಔಟ್ ಮಾಡುವ ಮೂಲಕ ಭಾರತದ ಆತಂಕ ದೂರ ಮಾಡಿದರು.

ಹೆಡ್ ಔಟಾದ ಬಳಿಕ ನಾಯಕ ಸ್ಟೀವ್ ಸ್ಮಿತ್ ತಾಳ್ಮೆಯ ಬ್ಯಾಟಿಂಗ್ ಮಾಡಿದರು. 96 ಎಸೆತಗಳಲ್ಲಿ 73 ರನ್ ಗಳಿಸಿದರೆ, ಮಾರ್ನಸ್ ಲ್ಯಾಬುಸ್ಚಾಗ್ನೆ 29 ರನ್ ಗಳಿಸಿದರು. ಜೋಸ್ ಇಂಗ್ಲಿಸ್ 11 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರೆ. ಅಲೆಕ್ಸ್ ಕ್ಯಾರಿ 57 ಎಸೆತಗಳಲ್ಲಿ 61 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ಸವಾಲಿನ ಮೊತ್ತ ಕಲೆಹಾಕಲು ಪ್ರಮುಖ ಕೊಡುಗೆ ನೀಡಿದರು.
ಭಾರತದ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದುಕೊಂಡರು. ದುಬೈ ಕ್ರೀಡಾಂಗಣದಲ್ಲಿ ಇದು ಸವಾಲಿನ ಮೊತ್ತವಾಗಿದ್ದು ಭಾರತದ ಬ್ಯಾಟರ್ ಎಚ್ಚರಿಕೆಯಿಂದ ಆಡಿದರೆ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಸಾಧ್ಯತೆ ಇದೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಆಸ್ಟ್ರೇಲಿಯಾ: ಕೂಪರ್ ಕಾನೊಲಿ, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ತನ್ವೀರ್ ಸಂಘ.
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.












Click it and Unblock the Notifications