ಏಷ್ಯನ್ ಗೇಮ್ಸ್ 2026: ಭಾರತೀಯ ಕ್ರೀಡಾಪಟುಗಳಿಗೆ ವಿಶೇಷ ವ್ಯವಸ್ಥೆ

Asian Games 2026: ಏಷ್ಯನ್ ಗೇಮ್ಸ್ 2026ರಲ್ಲಿ ಪಾಲ್ಗೊಳ್ಳುವ ಭಾರತೀಯ ಕ್ರೀಡಾಪಟುಗಳಿಗಾಗಿ ಕೇಂದ್ರ ಸರ್ಕಾರವು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಜಪಾನ್‌ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ 20ನೇ ಏಷ್ಯನ್ ಗೇಮ್ಸ್ ನಡಿಯಲಿದೆ.

ಈ ಕೂಟದಲ್ಲಿ 45 ದೇಶಗಳಿಂದ ಸುಮಾರು 11,000 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ. 43 ಕ್ರೀಡೆಗಳ 71 ವಿಭಾಗಗಳಲ್ಲಿ ಒಟ್ಟು 469 ಸ್ಪರ್ಧೆಗಳು ನಡೆಯಲಿವೆ. ಕ್ರೀಡಾಂಗಣದ ಆವರಣದಲ್ಲಿ ವಸತಿ ಸೌಕರ್ಯದ ಕೊರತೆ ಇರುವ ಕಾರಣ, ಕ್ರೀಡಾ ಗ್ರಾಮದ ಹೊರಭಾಗದಲ್ಲಿ ಆಯೋಜಕರು ಪರ್ಯಾಯ ವಸತಿ ವ್ಯವಸ್ಥೆಗಳನ್ನು ಮಾಡಿದ್ದಾರೆ.

Asian Games 2026 Special Container Homes for Indian Athletes by Ministry of Sports Know details

ಇದರ ಭಾಗವಾಗಿ ನಗೋಯಾ ಬಂದರಿನಲ್ಲಿರುವ ಕ್ರೂಸ್ ನೌಕೆಯೊಂದನ್ನು ಐಷಾರಾಮಿ ತಂಗುದಾಣವಾಗಿ ಬದಲಾಯಿಸಲಾಗಿದೆ. ಇದರಲ್ಲಿ ಸುಮಾರು 4,600 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ತಂಗಲಿದ್ದಾರೆ. ಮತ್ತೊಂದೆಡೆ 2,400 ಜನರಿಗೆ ಗಾರ್ಡನ್ ಪಿಯರ್ ಪ್ರದೇಶದಲ್ಲಿ ನಿರ್ಮಿಸಲಾಗುವ ತಾತ್ಕಾಲಿಕ ಕಂಟೇನರ್ ವಸತಿಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಉಳಿದ ಕ್ರೀಡಾಪಟುಗಳು ಮತ್ತು ಸಿಬ್ಬಂದಿಗೆ ಪಂದ್ಯಾವಳಿಗಳು ನಡೆಯುವ ಕ್ರೀಡಾಂಗಣಗಳ ಸಮೀಪವಿರುವ ಹೋಟೆಲ್‌ಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗುವುದು.

ಕೊಠಡಿಗಳಾಗಿ ಪರಿವರ್ತನೆಯಾದ ಕಂಟೇನರ್‌ಗಳು

ಹಡಗುಗಳು ಅಥವಾ ಹೋಟೆಲ್‌ಗಳಲ್ಲಿ ತಂಗುವುದು ಭಾರತೀಯ ಕ್ರೀಡಾಪಟುಗಳಿಗೆ ಹೆಚ್ಚಿನ ತೊಂದರೆಯಾಗದಿದ್ದರೂ, ತಾತ್ಕಾಲಿಕ ಕಂಟೇನರ್ ವಸತಿಯು ಅವರಿಗೆ ಸಂಪೂರ್ಣ ಹೊಸ ಅನುಭವ ನೀಡಲಿದೆ. 40X8 ಅಡಿಗಳ ಸಣ್ಣ ಕಂಟೇನರ್‌ಗಳನ್ನು ನಾಲ್ಕು ಕ್ರೀಡಾಪಟುಗಳು ತಂಗಲು ಅನುಕೂಲವಾಗುವಂತೆ ತಾತ್ಕಾಲಿಕ ಕೊಠಡಿಗಳಾಗಿ ಮಾಡಲಾಗಿದೆ. ಸಾಮಾನ್ಯವಾಗಿ ದೊಡ್ಡ ಕೊಠಡಿಗಳಲ್ಲಿ ಇರಲು ಅಭ್ಯಾಸವಾಗಿರುವ ಭಾರತೀಯ ಆಟಗಾರರಿಗೆ, ಈ ಸಣ್ಣ ಕಂಟೇನರ್‌ಗಳಲ್ಲಿ ಇರುವುದು ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರದಿಂದ ಸೂಕ್ತ ವ್ಯವಸ್ಥೆ

ಆದ್ದರಿಂದ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿದೆ. ಈ ಕಂಟೇನರ್‌ಗಳಲ್ಲಿ ಹೊಂದಿಕೊಳ್ಳಲು ಮತ್ತು ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಅನುಕೂಲವಾಗುವಂತೆ, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಪಂಜಾಬ್‌ನ ಪಟಿಯಾಲ ಹಾಗೂ ಬೆಂಗಳೂರಿನ ಕೇಂದ್ರಗಳಲ್ಲಿ ಇದೇ ಮಾದರಿಯ ಕಂಟೇನರ್ ಕೊಠಡಿಗಳನ್ನು ನಿರ್ಮಿಸಿದೆ.

ಕಂಟೇನರ್ ವಸತಿಗಳ ಉದ್ದೇಶ ಏನು?

ಏಷ್ಯನ್ ಗೇಮ್ಸ್ ಆರಂಭವಾಗುವ ಮುನ್ನವೇ ಭಾರತೀಯ ಅಥ್ಲೀಟ್‌ಗಳು ಈ ಸಣ್ಣ ಕೊಠಡಿಗಳಲ್ಲಿ ತಂಗಿ, ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲಿದ್ದಾರೆ. ಲಭ್ಯವಿರುವ ಸೀಮಿತ ಸೌಲಭ್ಯಗಳಲ್ಲೇ ಹೇಗೆ ಹೊಂದಿಕೊಂಡು ಇರಬೇಕು ಎಂಬುದನ್ನು ತರಬೇತಿ ನೀಡುವುದೇ ಈ ಕಂಟೇನರ್ ವಸತಿಗಳ ಮುಖ್ಯ ಉದ್ದೇಶವಾಗಿದೆ.

ಪಟಿಯಾಲ ಕೇಂದ್ರದಲ್ಲಿರುವ ಕಂಟೇನರ್‌ನಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ನಾಲ್ವರು ಅಥ್ಲೀಟ್‌ಗಳು ತಂಗಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ನಾಲ್ಕು ಹಾಸಿಗೆಗಳು, ಪ್ರತ್ಯೇಕ ವಾರ್ಡ್‌ ರೂಮ್‌ಗಳು, ಎಸಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಹಾಗೂ ಎಲೆಕ್ಟ್ರಿಕ್ ಕೆಟಲ್ ಒಳಗೊಂಡಿವೆ. ಅಡುಗೆ ಮಾಡಲು ಸಣ್ಣ ಕೊಠಡಿಯ ಜೊತೆಗೆ ಶೌಚಾಲಯದ ಸೌಕರ್ಯವನ್ನೂ ಕಲ್ಪಿಸಲಾಗಿದೆ.

ಜಪಾನ್‌ಗೆ ತಲುಪುವ ಮುನ್ನವೇ ಭಾರತೀಯ ಆಟಗಾರರನ್ನು ಮಾನಸಿಕವಾಗಿ ಸಿದ್ಧಗೊಳಿಸಲು ಈ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪಟಿಯಾಲ ಎನ್‌ಎಸ್ ಎನ್‌ಐಎಸ್‌ನ ವಿನೀತ್ ಕುಮಾರ್ ತಿಳಿಸಿದ್ದಾರೆ. ಅಲ್ಲಿನ ವಸತಿ ವ್ಯವಸ್ಥೆಗೆ ಹೊಂದಿಕೊಳ್ಳಲು ಹಾಗೂ ಎಂತಹದ್ದೇ ಸವಾಲುಗಳನ್ನು ಎದುರಿಸಲು ಸಜ್ಜಾಗಿರಲು ಈ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಆದರೆ ಈ ಕಂಟೇನರ್‌ಗಳನ್ನು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹೊಸದಾಗಿ ಖರೀದಿಸಿಲ್ಲ. ಕೊರೊನಾ ಸಮಯದಲ್ಲಿ ವೇಟ್‌ಲಿಫ್ಟಿಂಗ್ ಮತ್ತು ಅಥ್ಲೆಟಿಕ್ ಉಪಕರಣಗಳನ್ನು ಇಡಲು ಈ ಕಂಟೇನರ್‌ಗಳನ್ನು ತರಿಸಲಾಗಿತ್ತು. ಅವುಗಳನ್ನೇ ಈಗ ಪೂರ್ಣ ಪ್ರಮಾಣದ ವಸತಿ ಕೊಠಡಿಗಳನ್ನಾಗಿ ಮಾರ್ಪಡಿಸಲಾಗಿದೆ. ಕ್ರೀಡಾ ಸಚಿವಾಲಯ ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಜಂಟಿ ಸಮಿತಿಯು ಜಪಾನ್‌ನಲ್ಲಿ ನಡೆಸಿದ ಕ್ಷೇತ್ರ ಹಂತದ ಅಧ್ಯಯನದ ಆಧಾರದ ಮೇಲೆ ಈ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳಲು ರೂಪಿಸಿರುವ ಈ ಕಂಟೇನರ್ ಕೊಠಡಿಗಳ ಕಲ್ಪನೆಯನ್ನು ಕ್ರೀಡಾಪಟುಗಳು ಒಪ್ಪಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+