Asia Cup 2023: ಎರಡು ವಾರಗಳಲ್ಲಿ ಭಾರತ-ಪಾಕಿಸ್ತಾನ ಮೂರು ಬಾರಿ ಮುಖಾಮುಖಿ?
ಏಷ್ಯಾಕಪ್ 2023ರ ಪಂದ್ಯಗಳ ಆಯೋಜನೆ ವಿವಾದ ಬಗೆಹರಿದಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆ ಮಾಡುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಐಡಿಯಾವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಒಪ್ಪಿಕೊಂಡಿದ್ದು, ನಿಗದಿಯಾಗಿರುವ ವೇಳಾಪಟ್ಟಿಯಲ್ಲೇ ಪಂದ್ಯಾವಳಿ ನಡೆಯಲಿದೆ.
ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು ಭಾರತ ಏಷ್ಯಾಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಪಾಕಿಸ್ತಾನದಲ್ಲಿ ಕೂಡ ನಾಲ್ಕು ಪಂದ್ಯಗಳು ನಡೆಯಲಿವೆ. ಪಾಕಿಸ್ತಾನ ತಂಡ ಶ್ರೀಲಂಕಾ, ನೇಪಾಳ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯಗಳನ್ನು ತವರಿನಲ್ಲಿ ಆಡಲಿದ್ದು, ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳು ಕೂಡ ಏಷ್ಯಾಕಪ್ ನೋಡಲು ಅವಕಾಶ ಸಿಕ್ಕಂತಾಗಿದೆ.

2023ರ ಆಗಸ್ಟ್ 31ರಂದು ಪಂದ್ಯಾವಳಿ ಆರಂಭವಾಗಲಿದ್ದು, ಸೆಪ್ಟೆಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಒಟ್ಟು 6 ದೇಶಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಪ್ರತಿಷ್ಠಿತ ಕಪ್‌ಗಾಗಿ ಸೆಣೆಸಲಿವೆ.
ಬಿಸಿಸಿಐ-ಪಿಸಿಬಿ ನಡುವೆ ಕಿತ್ತಾಟ
ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆಸಿದರೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದರಿಂದ ವಿವಾದ ಆರಂಭವಾಗಿತ್ತು, ಬಿಸಿಸಿಐ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ಪಾಖಿಸ್ತಾನ ಕ್ರಿಕೆಟ್ ಮಂಡಳಿ, ಭಾರತ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಬರದಿದ್ದರೆ, ತಾನು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಪಾಕಿಸ್ತಾನವನ್ನು ಕಳುಹಿಸುವುದಿಲ್ಲ ಎಂದು ಬೆದರಿಕೆ ಹಾಕಿತ್ತು.
ಆದರೆ, ಬಿಸಿಸಿಐ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ ತನ್ನ ವಾದಕ್ಕೆ ಬೆಲೆ ಇಲ್ಲ ಎಂದು ಅರಿತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪರ್ಯಾಯ ಚಿಂತನೆ ನಡೆಸಿತ್ತು, ಮೊದಲು ಪಾಕಿಸ್ತಾನ ಮತ್ತು ಯುಎಇನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಚಿಂತಿಸಲಾಗಿತ್ತಾದರೂ, ನಂತರ ಶ್ರೀಲಂಕಾಗೆ ಸ್ಥಳಾಂತರಿಸಲಾಗಿದೆ.
ಎರಡು ವಾರಗಳಲ್ಲಿ ಮೂರು ಬಾರಿ ಭಾರತ-ಪಾಕಿಸ್ತಾನ ಮುಖಾಮುಖಿ
ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಮತ್ತು ನೇಪಾಳ ತಂಡಗಳಿದ್ದು, ಬಿ ಗುಂಪಿನಲ್ಲಿ ಶ್ರೀಲಂಕಾ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಆಡಲಿವೆ. ಭಾರತ ಪಾಕಿಸ್ತಾನ ಒಂದೇ ಗುಂಪಿನಲ್ಲಿದ್ದು ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಗುಂಪು ಹಂತದಲ್ಲಿ ಭಾರತ ಪಾಕಿಸ್ತಾನ ಪಂದ್ಯ ನಡೆಯಲಿದೆ, ಎರಡೂ ತಂಡಗಳು ಸುಲಭವಾಗಿ ಸೂಪರ್ 4 ಹಂತ ತಲುಪಲಿದ್ದು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಒಂದು ವೇಳೆ ಎರಡೂ ತಂಡಗಳು ಫೈನಲ್ ತಲುಪುವಲ್ಲಿ ಯಶಸ್ವಿಯಾದರೆ 20 ದಿನಗಳ ಅಂತರದಲ್ಲಿ ಭಾರತ-ಪಾಕಿಸ್ತಾನ ನಡುವೆ ಮೂರು ಪಂದ್ಯಗಳು ನಡೆದಂತಾಗುತ್ತದೆ. ಇದು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುವುದಂತೂ ಖಂಡಿತ.
ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ಇರುವ ಕಾರಣ, ಈ ಬಾರಿಯ ಏಷ್ಯಾಕಪ್ ಪಂದ್ಯಾವಳಿ ಕೂಡ ಏಕದಿನ ಮಾದರಿಯಲ್ಲಿ ನಡೆಯಲಿದೆ. ಕಳೆದ ಬಾರಿ ಟಿ20 ಮಾದರಿಯಲ್ಲಿ ಏಷ್ಯಾಕಪ್ ಆಯೋಜನೆ ಮಾಡಲಾಗಿತ್ತು.












Click it and Unblock the Notifications