ಏಷ್ಯಾಕಪ್ 2022: ಬಾಂಗ್ಲಾ ವಿರುದ್ಧ ಅಪ್ಘಾನಿಸ್ತಾನಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ
ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿದ್ದ ಅಫ್ಘಾನಿಸ್ತಾನ ಎರಡನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಕೂಡ ಭರ್ಜರಿಯಾಗಿ ಜಯ ಸಾಧಿಸುವ ಮೂಲಕ ಏಷ್ಯಾಕಪ್‌ನಲ್ಲಿ ಸೂಪರ್ 4 ಹಂತ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ.
ಯುಎಇಯ ಶಾರ್ಜಾದ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಆಲ್‌ರೌಂಡ್ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ಬಾಂಗ್ಲಾ ದೇಶದ ವಿರುದ್ಧ 7 ವಿಕೆಟ್‌ಗಳ ಜಯ ದಾಖಲಿಸಿತು. ಆಡಿದ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲ ಅಫ್ಘಾನಿಸ್ತಾನ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ಅಫ್ಘಾನಿಸ್ತಾನ ಬೌಲರ್ ಗಳ ದಾಳಿಗೆ ಸಿಕ್ಕಿ ಪರದಾಡಿತು. ಅಫ್ಘನ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಬಾಂಗ್ಲಾ ಅಗ್ರ ಆಟಗಾರರ ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಬಾಂಗ್ಲಾ ಆರಂಭಿಕ ಆಟಗಾರ ಮುಹಮ್ಮದ್ ನಯೀಮ್, ಅನಾಮುಲ್ ಹಕ್, ಆಲ್ ರೌಂಡರ್ ಶಕೀಬ್ ಅಲ್ ಹಸನ್ ಮುಜೀಬ್‌ಗೆ ವಿಕೆಟ್ ಒಪ್ಪಿಸಿದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಬಾಂಗ್ಲಾ ನಂತರ ಚೇತರಿಸಿಕೊಳ್ಳಲೇ ಇಲ್ಲ.

ಅಫ್ಘನ್ ಬೌಲಿಂಗ್ ದಾಳಿಗೆ ಕುಸಿದ ಬಾಂಗ್ಲಾ
ಮೊದಲ 5.2 ಓವರ್ ಗಳಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಬಾಂಗ್ಲಾ ತಂಡವನ್ನು ನಂತರ ಅಫ್ಘಾನಿಸ್ತಾನ ಬೌಲರ್ ಗಳು ಕಾಡಿದರು. ಅಫ್ಘಾನಿಸ್ತಾನದ ಪರ ಮುಜೀಬ್ ಉರ್ ರೆಹಮಾನ್ 4 ಓವರ್ ಗಳಲ್ಲಿ ಕೇವಲ 16 ನೀಡಿ 3 ವಿಕೆಟ್ ಪಡೆದರು.
ಪವರ್ ಪ್ಲೇ ಮುಗಿದ ನಂತರ ದಾಳಿಗೆ ಇಳಿದ ರಶೀದ್ ಖಾನ್ ಆಫಿಪ್ ಹೊಸೈನ್‌ರನ್ನು ಔಟ್ ಮಾಡಿದರು. ನಂತರ ಉತ್ತಮವಾಗಿ ರನ್ ಗಳಿಸುತ್ತಿದ್ದ ಮಹಮ್ಮದುಲ್ಲಾರನ್ನು ರಶೀದ್ ಖಾನ್ ಔಟ್ ಮಾಡಿ ಬಾಂಗ್ಲಾ ರನ್ ಗಳಿಕೆಗೆ ಕಡಿವಾಣ ಹಾಕಿದರು. ರಶೀದ್ ಖಾನ್ 4 ಓವರ್ ಗಳಲ್ಲಿ 22 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು.

ಸಾಧಾರಣ ಮೊತ್ತ ಕಲೆಹಾಕಿದ ಬಾಂಗ್ಲಾ ತಂಡ
ಆರಂಭದಲ್ಲೇ ಕುಸಿತ ಕಂಡು ಕಂಗಾಲಾದ ಬಾಂಗ್ಲಾ ತಂಡಕ್ಕೆ ಮಹಮುದುಲ್ಲಾ ಮತ್ತು ಮೊಸಾದಕ್ ಹುಸೇನ್ ಕೊಂಚ ಚೇತರಿಕೆ ನೀಡಿದರು. ಅಫ್ಘನ್ ಬೌಲರ್ ಗಳನ್ನು ಎಚ್ಚರಿಕೆಯಿಂದ ಎದುರಿಸಿದ ಮುಹಮದುಲ್ಲಾ 27 ಎಸೆತಗಳಲ್ಲಿ 25 ರನ್ ಗಳಿಸಿದರೆ, ಇನ್ನಿಂಗ್ಸ್ ಕೊನೆಯವರೆಗೂ ಬ್ಯಾಟ್ ಮಾಡಿದ ಮೊಸದ್ದೆಕ್ ಹುಸೇನ್ 31 ಎಸೆತಗಳಲ್ಲಿ 4 ಬೌಂಡರ್ ಒಂದು ಸಿಕ್ಸರ್ ಬಾರಿಸುವ ಮೂಲಕ 48 ರನ್ ಗಳಿಸಿದರು.
ಅಂತಿಮ ಓವರ್ ಗಳಲ್ಲಿ ಕೆಲವು ರನ್ ಕಲೆ ಹಾಕುವಲ್ಲಿ ಯಶಸ್ವಿಯಾದ ಬಾಂಗ್ಲಾ ತಂಡ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು.

ಎಚ್ಚರಿಕೆಯ ಆಟವಾಡಿದ ಅಫ್ಘಾನಿಸ್ತಾನ
ಬೌಲರ್ ಗಳಿಗೆ ಸಹಕಾರಿಯಾಗಿದ್ದ ಪಿಚ್‌ನಲ್ಲಿ ಅಫ್ಘಾನಿಸ್ತಾನ ಆರಂಭಿಕ ಆಟಗಾರರದ ಹಜರತ್ ಉಲ್ಲಾ ಜಝೈ ಮತ್ತು ರಹಮುಲ್ಲಾ ಗುರ್ಬಜ್ ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಆರಂಭಿಸಿದರು. ಆದರೆ 4.1 ಓವರ್ ನಲ್ಲಿ ಅಫ್ಘಾನಿಸ್ತಾನ ಮೊದಲ ವಿಕೆಟ್ ಕಳೆದುಕೊಂಡಿತು ಹಮುಲ್ಲಾ ಗುರ್ಬಜ್ 11 ರನ್ ಗಳಿಸಿ ಔಟಾದರು.
ಮತ್ತೊಬ್ಬ ಆರಂಭಿಕ ಆಟಗಾರ ಹಜರತ್ ಉಲ್ಲಾ 26 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ಆಗ ಅಫ್ಘಾನಿಸ್ತಾನ ತಂಡದ ಮೊತ್ತ 9.2 ಓವರ್ ಗಳಲ್ಲಿ 45 ರನ್ ಆಗಿತ್ತು. 12.6 ಓವರ್ ಗಳಲ್ಲಿ ತಂಡದ ಮೊತ್ತ 62 ರನ್‌ಗಳಾಗಿದ್ದಾಗ 3ನೇ ವಿಕೆಟ್ ಕಳೆದುಕೊಂಡಾಗ ಅಫ್ಘಾನಿಸ್ತಾನಕ್ಕೆ ಸೋಲಿನ ಭೀತಿ ಎದುರಾಗಿತ್ತು.

ಅಂತಿಮ ಓವರ್ ಗಳಲ್ಲಿ ನಜೀಬುಲ್ಲಾ ಮ್ಯಾಜಿಕ್
ಕೊನೆಯ ಆರು ಓವರ್ ಗಳಲ್ಲಿ ಅಫ್ಘಾನಿಸ್ತಾನ ಗೆಲ್ಲಲು 63 ರನ್ ಗಳ ಅಗತ್ಯವಿತ್ತು ಅಂತಿಮ ಓವರ್ ಗಳಲ್ಲಿ ಭರ್ಜರಿಯಾಗಿ ಬ್ಯಾಟ್ ಮಾಡಿದ ನಜಿಬುಲ್ಲಾ ಝದ್ರಾನ್ ಬಾಂಗ್ಲಾ ಬೌಲರ್ ಗಳ ಬೆವರಿಳಿಸಿದರು. 17 ಎಸೆತಗಳಲ್ಲಿ 1 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು. ನಜಿಬುಲ್ಲಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅಫ್ಘಾನಿಸ್ತಾನ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಜಯ ಸಾಧಿಸಿ ಸಂಭ್ರಮಿಸಿತು.
ಪ್ರಮುಖ ಮೂರು ವಿಕೆಟ್ ಪಡೆದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾರದರು.












Click it and Unblock the Notifications