Virat Kohli: ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿ ಭಾರತದ ಶ್ರೀಮಂತ ಕ್ರಿಕೆಟಿಗ ಎನಿಸಿಕೊಂಡ ಅಜಯ್ ಜಡೇಜಾ
ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಇದೀಗ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿ ಭಾರತ ಶ್ರೀಮಂತ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ನಿವೃತ್ತಿಯಾದ ಬಳಿಕ ಅಜಯ್ ಜಡೇಜಾ ಶ್ರೀಮಂತರಾಗಲು ಅವರ ಕುಟುಂಬ ಕಾರಣವಾಗಿದೆ. ಅಜಯ್ ಜಡೇಜಾ ಅವರನ್ನು ಗುಜರಾತ್‌ನ ಜಾಮ್‌ನಗರ ರಾಯಲ್ ಸಿಂಹಾಸನದ ಉತ್ತರಾಧಿಕಾರಿ ಘೋಷಣೆ ಮಾಡಿದ ಬಳಿಕ ಅವರ ಆಸ್ತಿ ಮೌಲ್ಯ ಹೆಚ್ಚಾಗಿದೆ.
ದಸರಾ ಹಬ್ಬದ ಸಂದರ್ಭದಲ್ಲಿ ನವನಗರದ ಮಹಾರಾಜ ಜಂಸಾಹೇಬ್ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾರನ್ನು ಜಾಮ್ ನಗರದ ರಾಯಲ್ ಸಿಂಹಾಸನದ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದರು. ಈ ಘೋಷಣೆಯಿಂದ ಅಜಯ್ ಜಡೇಜಾ ₹1,450 ಕೋಟಿಗೂ ಹೆಚ್ಚು ಆಸ್ತಿಯನ್ನು ಪಡೆಯಲಿದ್ದು, ಅವರನ್ನು ಭಾರತದ ಶ್ರೀಮಂತ ಕ್ರಿಕೆಟಿಗನ ಸ್ಥಾನದಲ್ಲಿ ನಿಲ್ಲಿಸಿದೆ.

ಸದ್ಯ ಕ್ರಿಕೆಟ್ ಜಗತ್ತಿನ ಸೂಪರ್ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಅಜಯ್ ಜಡೇಜಾ ಭಾರತದ ಶ್ರೀಮಂತ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರ ಆಸ್ತಿ ಮೌಲ್ಯ ₹1,000 ಕೋಟಿ ಎಂದು ಅಂದಾಜಿಸಲಾಗಿದೆ. ಈವರೆಗೂ ಕೊಹ್ಲಿ ಭಾರತದ ಶ್ರೀಮಂತ ಕ್ರಿಕೆಟಿಗ ಎನಿಸಿಕೊಂಡಿದ್ದರು. ಇದೀಗ ಅಜಯ್ ಜಡೇಜಾ ಶ್ರೀಮಂತ ಕ್ರಿಕೆಟಿಗನಾಗಿದ್ದಾರೆ.
ಕ್ರಿಕೆಟ್ ಕ್ಷೇತ್ರಕ್ಕೆ ಜಾಮ್‌ನಗರ ರಾಜಮನೆತನದ ಕೊಡುಗೆ
ಜಾಮ್ ನಗರ ರಾಜಮನೆತನಕ್ಕೆ ಮತ್ತು ಕ್ರಿಕೆಟ್ ಜಗತ್ತಿಗೆ ತಲೆ ತಲಾಂತರದಿಂದ ಕೂಡ ನಂಟಿದೆ. ದೇಶೀಯ ಟೂರ್ನಿಗಳಾದ ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಫಿ ಹೆಸರುಗಳು ಅಜಯ್ ಜಡೇಜಾ ಅವರ ಸಂಬಂಧಿಕರಾದ ಕೆಎಸ್ ರಂಜಿತ್‌ಸಿನ್‌ಜಿ ಮತ್ತು ಕೆಎಸ್ ದುಲೀಪ್‌ಸಿನ್‌ಜಿ ಅವರಿಂದ ಬಂದಿದೆ.
1992 ರಿಂದ 2000 ದವರೆಗೆ ಅಜಯ್ ಜಡೇಜಾ ಭಾರತಕ್ಕಾಗಿ ಆಡಿದ್ದಾರೆ. 196 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು 15 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅಜಯ್ ಜಡೇಜಾ ರಾಜಮನೆತನಕ್ಕೆ ಸೇರಿದವರು. ಅವರ ತಂದೆ ದೌಲತ್‌ಸಿಂಗ್‌ಜಿ ಜಡೇಜಾ ಜಾಮ್ ನಗರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರು.
ಅಜಯ್ ಜಡೇಜಾರನ್ನು ಉತ್ತರಾಧಿಕಾರಿಯನ್ನಾಗಿ ಘೋಷಣೆ ಮಾಡಿದ ಬಳಿಕ ಸಾರ್ವಜನಿಕೆ ಹೇಳಿಕೆ ನೀಡಿರುವ ಮಹಾರಾಜ ಜಂ ಸಾಹೇಬ್ ತಮ್ಮ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. "ದಸರಾ ಹಬ್ಬವು ಪಾಂಡವರು ವನವಾಸ ಮುಗಿಸಿ ಗೆಲುವು ಸಾಧಿಸಿದ ದಿನವನ್ನು ಸೂಚಿಸುತ್ತದೆ. ಈ ವಿಶೇಷವಾದ ದಿನದಂದು ನನ್ನ ಸಂದಿಗ್ಧತೆಗೆ ಪರಿಹಾರ ಸಿಕ್ಕಿದೆ. ನನ್ನ ಉತ್ತರಾಧಿಕಾರಿಯಾಗಲು ಒಪ್ಪಿಕೊಂಡ ಅಜಯ್ ಜಡೇಜಾ ಅವರಿಗೆ ಧನ್ಯವಾದಗಳು, ಜಾಮ್ ನಗರದ ಜನರಿಗೆ ಸೇವೆ ಮಾಡುವ ಜವಾಬ್ದಾರಿಯನ್ನು ಅಜಯ್ ಜಡೇಜಾ ವಹಿಸಿಕೊಂಡಿರುವುದು ವರದಾನವಾಗಿದೆ" ಎಂದು ಹೇಳಿದ್ದಾರೆ.
ಜಾಮ್ ನಗರದ ಮಹರಾಜಾನಾಗಿ ಜನ ಸೇವೆ ಮಾಡಲು ಕ್ರಿಕೆಟಿಗ ಅಜಯ್ ಜಡೇಜಾ ಸಜ್ಜಾಗಿದ್ದಾರೆ. ಸಿಂಹಾಸನದ ಉತ್ತರಾಧಿಕಾರಿಯಾದರೂ ಕ್ರಿಕೆಟ್ ಜೊತೆಗಿನ ಅವರ ನಂಟು ಹೀಗೆ ಮುಂದುವರೆಯಲಿದೆ.












Click it and Unblock the Notifications