ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡ ಅಭಿವೃದ್ಧಿ: ಸಂಸದ ಅನಂತಕುಮಾರ ಹೆಗಡೆ ಮಾತು

By ಶಿರಸಿ ಪ್ರತಿನಿಧಿ
|
Google Oneindia Kannada News

ಶಿರಸಿ, ಅಕ್ಟೋಬರ್ 05; ಉತ್ತರ ಕನ್ನಡ ಜಿಲ್ಲೆ ಪ್ರಸ್ತುತ ಹಲವು ಅವಕಾಶಗಳಿಗೆ ತೆರೆದುಕೊಳ್ಳುತ್ತಿದೆ. ಬೃಹತ್ ಯೋಜನೆಗಳು ಜಿಲ್ಲೆಗೆ ಬರುತ್ತಿದ್ದು, ಜಿಲ್ಲೆಯ ಅಭಿವೃದ್ಧಿಯ ಕುರಿತಾಗಿ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ತಮ್ಮ ಮನದಾಳ‌ ಬಿಚ್ಚಿಟ್ಟಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮುಂದಿನ ಐದು- ಹತ್ತು ವರ್ಷಗಳಲ್ಲಿ ಉತ್ತರ ಕನ್ನಡ ಹೇಗಾಗಲಿದೆ? ಮತ್ತು ಅದಕ್ಕಾಗಿ ಜಿಲ್ಲೆಯ ಜನರು ಹೇಗೆ ತಯಾರಿರಬೇಕೆಂಬುದನ್ನು ತೆರೆದಿಟ್ಟಿದ್ದಾರೆ. ಫೇಸ್‌ ಬುಕ್‌ನಲ್ಲಿ ಈ ಕುರಿತ ವಿಡಿಯೋವನ್ನು ಅವರು ಹಾಕಿದ್ದಾರೆ.

 ಸಾಗರಮಾಲಾ: ಯೋಜನೆ ತ್ವರಿತಗೊಳಿಸಲು ಕೇಂದ್ರ ಸಚಿವರಿಗೆ ಸಂಸದ ಅನಂತಕುಮಾರ ಹೆಗಡೆ ಪತ್ರ ಸಾಗರಮಾಲಾ: ಯೋಜನೆ ತ್ವರಿತಗೊಳಿಸಲು ಕೇಂದ್ರ ಸಚಿವರಿಗೆ ಸಂಸದ ಅನಂತಕುಮಾರ ಹೆಗಡೆ ಪತ್ರ

"ಸಾಗರಮಾಲಾ ಯೋಜನೆಯಡಿ ಕಾರವಾರದಲ್ಲಿ ಬೃಹತ್ ಪ್ರಮಾಣದ ಬಂದರು ಮಾಡಬೇಕೆಂದು ಕೇಂದ್ರ ಸರ್ಕಾರ ತೀರ್ಮಾನ ಮಾಡಿತು. ಅದಕ್ಕೆ ವಿರೋಧ ಶುರುವಾಯಿತು. ಸಾಗರಮಾಲಾ ಯೋಜನೆಯಡಿಯಲ್ಲಿ ಇಡೀ‌ ಜಿಲ್ಲೆಯನ್ನು ಜೋಡಿಸುವ ಬೃಹತ್ ಹೆದ್ದಾರಿಗಳ ಸಮುಚ್ಛಯ ನಿರ್ಮಿಸಲು ತೀರ್ಮಾನವಾಯಿತು, ಅದಕ್ಕೂ ವಿರೋಧ ವ್ಯಕ್ತವಾಯಿತು. ಹೊನ್ನಾವರದಲ್ಲಿ ಬಂದರು ಕೆಲಸ ಪ್ರಾರಂಭವಾಗಿದೆ, ಅಲ್ಲೂ ವಿರೋಧ. ಇನ್ನೇನು ಬೇಲೇಕೇರಿ ಕೆಲಸ ಶುರುವಾಗಲಿಕ್ಕಿದೆ, ಗೊತ್ತಿಲ್ಲ ಮುಂದೆ ಏನಾಗುತ್ತದೆಂದು. ಒಟ್ಟಾರೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತುಂಬಾ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡು ಬರಬೇಕೆಂದು ತೀರ್ಮಾನ ಮಾಡಿದ ಹೊಸ್ತಿಲಲ್ಲೇ ಅಲ್ಲಲ್ಲಿ ಈ ರೀತಿಯ ಅಭಿವೃದ್ಧಿ ವಿರೋಧಿ ಗುಂಪುಗಳು ಕೆಲಸವನ್ನು ಶುರು ಮಾಡಿ ತಮ್ಮ ಚಟುವಟಿಕೆಗಳನ್ನು ಜಾಸ್ತಿ ಮಾಡಿವೆ" ಎಂದು ಹೇಳಿದ್ದಾರೆ.

MP Anant Kumar Hegde Shared His Vision On Development Of Uttara Kannada

ಅಭಿವೃದ್ಧಿ ಅರಗಿಸಿಕೊಳ್ಳುವ ಸಾಮರ್ಥ್ಯವಿದೆಯಾ; "ಬಹುಸಂಖ್ಯಾತ ಉತ್ತರ ಕನ್ನಡದ ಜನರಿಗೆ ಈ ಜಿಲ್ಲೆಯಲ್ಲಿ ಹೊಸ ಅಭಿವೃದ್ಧಿ ಕಾಣಬೇಕೆಂಬ, ಆರ್ಥಿಕ ಚಟುವಟಿಕೆ ಬೆಳೆಯಬೇಕೆಂಬ ಹಂಬಲವಿದೆ. ಆದರೆ ಎಲ್ಲಿಂದಲೂ ಆ ಧ್ವನಿ ಕೇಳುತ್ತಿಲ್ಲ. ನಕಾರಾತ್ಮಕ ಶಕ್ತಿಗಳು ಸಕ್ರಿಯವಾಗಿವೆ, ಬಲವಾಗಿ ಅವು ಕೂಗನ್ನೆಬ್ಬಿಸಿವೆ. ಆದರೆ ಧನಾತ್ಮಕ ಶಕ್ತಿ ಯಾವುದೇ ಸದ್ದು ಮಾಡುತ್ತಿಲ್ಲ. ಈ ದೊಡ್ಡ ಪ್ರಮಾಣದ ಅಭಿವೃದ್ಧಿ ಯೋಜನೆಗಳು ಜಿಲ್ಲೆಗೆ ಬಂದಾಗ ಅವುಗಳನ್ನು ಧಾರಣ ಮಾಡುವ ಸಾಮರ್ಥ್ಯ ನಮ್ಮಲ್ಲಿದೆಯೇ? ನಾನು ಪರಿಸರವಾದಿಗಳ ಸಾಮರ್ಥ್ಯದ ಬಗ್ಗೆ ಹೇಳುತ್ತಿಲ್ಲ, ಅದು ಬೇರೆ. ಪ್ರಜ್ಞಾವಂತ, ಔದ್ಯೋಗಿಕ ಸಮುದಾಯಕ್ಕೆ ಈ ಅಭಿವೃದ್ಧಿಯನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಇದೆಯಾ ಎನ್ನುವುದು ದೊಡ್ಡ ಪ್ರಶ್ನೆ" ಎಂದಿದ್ದಾರೆ.

 ಸಂಸತ್ ಕಲಾಪದಿಂದ ಕಾಂಗ್ರೆಸ್ ಪಲಾಯನ: ಸಂಸದ ಅನಂತಕುಮಾರ ಹೆಗಡೆ ಕಿಡಿ ಸಂಸತ್ ಕಲಾಪದಿಂದ ಕಾಂಗ್ರೆಸ್ ಪಲಾಯನ: ಸಂಸದ ಅನಂತಕುಮಾರ ಹೆಗಡೆ ಕಿಡಿ

"ಅಭಿವೃದ್ಧಿಯ ಹೆದ್ದಾರಿ ಹಾಕಿಕೊಟ್ಟವರು ವಾಜಪೇಯಿ. ನಂತರದಲ್ಲಿ ಇವತ್ತಿನ ದಿನದಲ್ಲಿ ಅದಕ್ಕೆ ಮೋದಿಯವರ ನೇತೃತ್ವದಲ್ಲಿ ದೊಡ್ಡ ವೇಗ ಬಂದಿದೆ. ಇಡೀ ಜಗತ್ತು ನಮ್ಮ ಕಡೆ ನೋಡೋ ಹಾಗಾಗಿದೆ. ನಾವಿಲ್ಲಿ ಏನು ಚರ್ಚೆ ಮಾಡುತ್ತೇವೋ ಅದು ಪ್ರಶ್ನೆಯಲ್ಲ, ಜಗತ್ತಿನ ಆರ್ಥಿಕ ಅಭಿವೃದ್ಧಿಯ ಮುಂದಿನ ನಾಯಕ ಭಾರತ ಎನ್ನುವುದು ಜಗತ್ತಿಗೆ ಅನಿಸಿಬಿಟ್ಟಿದೆ. ಚೀನಾದ ಬಾಗಿಲು ಮುಚ್ಚಿದ ಬಳಿಕ ಜಗತ್ತಿಗೆ ಬೇರೆ ದಾರಿಯೇ ಇಲ್ಲ. ಬಲವಂತವಾಗಿ ಎಲ್ಲರೂ ಚೈನಾವನ್ನು ಮುಚ್ಚುತ್ತಿದ್ದಾರೆ. ಒಂದು ಕಾಲದಲ್ಲಿ ಚೀನಾ ಹಾಟ್ ಸ್ಪಾಟ್ ಆಗಿತ್ತು, ಭಾರತ ಒಂದು ಆಯ್ಕೆಯಾಗಿತ್ತು. ಅಲ್ಲಿದ್ದ ಕಾನೂನು, ಸರ್ವಾಧಿಕಾರ, ಕೆಲಸದ ವೇಗವನ್ನು ನೋಡಿ ಖುಷಿಯಾಗಿ ಎಲ್ಲರೂ ಅಲ್ಲಿಗೆ ಹೋಗಿದ್ದರು. ಆದರೆ ಈಗ ಅನಿಸಿದೆ ಅದು ಭ್ರಮೆ ಎಂದು. ಇಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿಯನ್ನು ಭಾಷಣದಲ್ಲಿ ಹೇಳುತ್ತಿದ್ದರು, ಆದರೆ ಗಮನಕ್ಕೆ ಬಂದಿರಲಿಲ್ಲ. ಚೀನಾ ಯಾವತ್ತು ಅವರನ್ನೇ ಮುಗಿಸಲು ಹೊಂಚು ಹಾಕಿತೋ ಅಂದು ಎಲ್ಲರಿಗೂ ಅನಿಸಿತು ಭಾರತವೇ ಬೆಟರ್ ಎಂದು. ಇವತ್ತು ಎಲ್ಲರೂ ನಮ್ಮ ಕಡೆ ನೋಡುತ್ತಿದ್ದಾರೆ" ಎಂದು ಹೇಳಿದ್ದಾರೆ.

ಅಭಿವೃದ್ಧಿಯ ಹೆಬ್ಬಾಗಿಲು; "2023- 24ರಲ್ಲಿ ಅಂಕೋಲಾದ ನಾಗರಿಕ ವಿಮಾನ ನಿಲ್ದಾಣ ಶುರುವಾಗಲಿದೆ. 2022ಕ್ಕೆ ಹೊನ್ನಾವರ ಬಂದರು ಮುಗಿಯಬೇಕಿತ್ತು, ಸ್ವಲ್ಪ ಹೆಚ್ಚು ಕಡಿಮೆ ಆದ ಕಾರಣ 2023ಕ್ಕೆ ಮುಗಿಯಬಹುದು. ಕಾರವಾರದ್ದು ಕೂಡ ಕೋರ್ಟ್ ನಲ್ಲಿ ಬಹುತೇಕ ತೀರ್ಪು ಬಂದಂತಾಗಿದ್ದು, ಯಾವಾಗ ಬೇಕಾದರೂ ಪ್ರಕರಣ ಇತ್ಯರ್ಥವಾಗಬಹುದು. ಕಾರವಾರದಲ್ಲಿ, ಬೇಲೇಕೇರಿಯಲ್ಲೂ ಕೆಲಸ ಶುರುವಾಗಲಿದೆ. ಇದನ್ನು ನಾವು ಬೃಹತ್ ಬಂದರು ಸಂಕೀರ್ಣ ಎಂದು ಕರೆಯುತ್ತೇವೆ. ಮಂಗಳೂರಿನಲ್ಲೂ ಇಲ್ಲ, ಅಲ್ಲಿಯಕ್ಕಿಂತ ಅದೆಷ್ಟೋ ದೊಡ್ಡ ಬಂದರು ಸಮುಚ್ಛಯ ಉತ್ತರ ಕನ್ನಡಕ್ಕೆ ಬರುತ್ತದೆ. ಕರ್ನಾಟಕದ ನಿಜವಾದ ಅಭಿವೃದ್ಧಿಯ ಹೆಬ್ಬಾಗಿಲು ಎನ್ನುವುದಾದರೆ ಮುಂದಿನ ದಿನಗಳಲ್ಲಿ ಅದು ಉತ್ತರ ಕನ್ನಡವೇ" ಎಂದರು.

"ಅಭಿವೃದ್ಧಿ ದೊಡ್ಡ ಪ್ರಮಾಣದಲ್ಲಿ ಹರಿದುಬರುತ್ತಿದೆ. ಅಕ್ಷರಶಃ 5- 6 ಲಕ್ಷ ಸಾಗರವಾಸಿ ಜನಸಂಖ್ಯೆ ಉತ್ತರ ಕನ್ನಡಕ್ಕೆ ಬರಲಿದೆ. ಇದೆಲ್ಲದರ ಲಾಭ ನಮಗೂ ಆಗಬೇಕು. ಇದನ್ನು ಇನ್ಮುಂದೆ ತಡೆಯಲು ಸಾಧ್ಯವೇ ಇಲ್ಲ. ಇದು ಭಾರತದ ಇಚ್ಛಾಶಕ್ತಿ‌. ಇದರ ಲಾಭವನ್ನು ನಾವು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಯಾರೋ ಬಂದು ಲಾಭ ಪಡೆದು ಹೋಗುತ್ತಾರೆ. ಬೇಲೇಕೇರಿಯಲ್ಲಿ ವಿಮಾನ ನಿಲ್ದಾಣವಾದರೆ, ಬಂದರು ವಿಸ್ತರಣೆಯಾದರೆ ಅಲ್ಲಿ ಕಾರ್ಯನಿರ್ವಹಿಸಲು ತರಬೇತಿ ಪಡೆದ ಒಬ್ಬನೇ ಒಬ್ಬ ಹುಡುಗ ನಮ್ಮ ಜಿಲ್ಲೆಯಲ್ಲಿಲ್ಲ. ಲಕ್ಷಾಂತರ ಟನ್ ಉತ್ಪನ್ನಗಳು ಇಲ್ಲಿಂದ ರಫ್ತು- ಆಮದು ಆಗುತ್ತವೆ. ಕಂಟೇನರ್ ಸೌಲಭ್ಯಗಳಾಗುತ್ತವೆ. ಕಾರ್ಗೋ ಬಂದು ಹೋಗುತ್ತವೆ, ವ್ಯಾಪಾರಿ ಕೇಂದ್ರಗಳು ಬರುತ್ತವೆ. 40- 50 ಪಂಚತಾರಾ ಹೋಟೆಲ್ ಗಳು ಬರುತ್ತವೆ. ಇಷ್ಟು ಪ್ರಮಾಣದಲ್ಲಿ ಆದಾಗ ಮೇಲ್ನೋಟಕ್ಕೆ ಇಲ್ಲಿಗೆ ಬೇಕಾದವರನ್ನು ಪೂರೈಸುವ ಸಾಮರ್ಥ್ಯ ನಮ್ಮಲ್ಲಿಲ್ಲ" ಎಂದರು.

"ಆ ಸಾಮರ್ಥ್ಯ ವೃದ್ಧಿಸಿಕೊಳ್ಳಬಹುದು. ನಮ್ಮ ಜಿಲ್ಲೆಯ ಜನ ಹೊರಗೆ ಉತ್ತಮ ಕ್ಷೇತ್ರಗಳಲ್ಲಿದ್ದಾರೆ. ನಮ್ಮವರನ್ನು ಕರೆಯಬೇಕು ಇಲ್ಲಿ ಅವಕಾಶ ಇದೆ ಎಂದು. ಇದಕ್ಕಾಗಿ ನಮ್ಮ ಪ್ರಯತ್ನಗಳಾಗಬೇಕು. ಅವರನ್ನೆಲ್ಲ ಒಟ್ಟಿಗೆ ಸೇರಿಸಿ ನಮ್ಮ ಜಿಲ್ಲೆಯ ಅಭಿವೃದ್ಧಿ ನಮ್ಮ ಕೈಯಿಂದಲೇ ಆಗಬೇಕು, ಇವುಗಳ ಲಾಭ ನಮಗೇ ಆಗಬೇಕು. ಇದನ್ನು ಸದುಪಯೋಗಪಡಿಸಿಕೊಳ್ಳದಿದ್ದಲ್ಲಿ ನಮ್ಮ ಜಿಲ್ಲೆಗೆ ಬೇರೆಯವರು ಬಂದು ಕೂರುತ್ತಾರೆ" ಎಂದು ಸಂಸದರು ಹೇಳಿದ್ದಾರೆ.

ಗಾಳಿಯಲ್ಲಿ ರೈಲು ಬಿಡುವವರೇ ಹೆಚ್ಚು; "ಪರದೇಶಿಗಳ ಜಿಲ್ಲೆಯಾಗುತ್ತಿರುವ ಉತ್ತರ ಕನ್ನಡವನ್ನು ನಮ್ಮ ಜಿಲ್ಲೆಯ ಜನ ಕೈಗೆತ್ತಿಕೊಳ್ಳಬೇಕು. ಇಲ್ಲಿನ ಶಿಕ್ಷಣ ಸಂಸ್ಥೆಗಳು, ಬ್ಯಾಂಕಿಂಗ್ ಕ್ಷೇತ್ರಗಳು, ಇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಅಭಿವೃದ್ಧಿಯ ಬೆಳವಣಿಗೆಯಲ್ಲಿ‌ ನಮ್ಮ ಪಾಲು ಏನು ಎಂಬುವುದನ್ನು ಗುರುತಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅವಕಾಶಗಳು ನೂರಕ್ಕೆ ನೂರು ಬೇರೆಯವರ ಪಾಲಾಗಲಿದೆ. ಚುನಾವಣೆಗಳು ಬರುತ್ತವೆ, ಹೋಗುತ್ತವೆ; ಯಾರೋ ಬರುತ್ತಾರೆ, ಹೋಗುತ್ತಾರೆ. ಆದರೆ ಈ ಅವಕಾಶದಿಂದ ವಂಚಿತರಾದರೆ ಜಿಲ್ಲೆಯ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ. ಇದನ್ನು ಕೇವಲ ರಾಜಕಾರಣ ಅಂದುಕೊಳ್ಳಬೇಡಿ, ಇದು ಈ ಜಿಲ್ಲೆಯ ಪ್ರಜ್ಞಾವಂತರ ಜವಾಬ್ದಾರಿ. ಮುಂದಿನ ಐದು- ಹತ್ತು ವರ್ಷಗಳಲ್ಲಿ ಅಭಿವೃದ್ಧಿಯನ್ನು ನಮ್ಮ ಕೈಯಲ್ಲಿ ತೆಗೆದುಕೊಂಡರೆ ಈ ಜಿಲ್ಲೆ ನಮ್ಮ ಪಾಲಾಗಲಿದೆ, ಇಲ್ಲದಿದ್ದರೆ ಬೇರೆಯವರ ಪಾಲಾಗಲಿದೆ" ಎಂದು ಸಂಸದರು ಆತಂಕ ವ್ಯಕ್ತಪಡಿಸಿದರು.

"ಇಲ್ಲಿ ಎಲ್ಲವೂ ನಮ್ಮವರ ಕೈಯಲ್ಲಿರಬೇಕು. ಶಿರಸಿ- ಸಿದ್ದಾಪುರ- ಯಲ್ಲಾಪುರ ಜಿಲ್ಲೆಯ ಅಭಿವೃದ್ಧಿಯ‌ ಮೆದುಳಿನಂತೆ ಕಾರ್ಯನಿರ್ವಹಿಸಬೇಕು. ಶಿರಸಿಯಲ್ಲಿ ಬಂದರು ಕಟ್ಟಲಾಗುವುದಿಲ್ಲ, ಇಲ್ಲಿಯ ತನಕ ಸಮುದ್ರ ತರಲಾಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಯಾರಾದರೂ ಭರವಸೆ ಕೊಡುವವರಿದ್ದರೆ ಕೊಡಲಿ, ಆ ಪ್ರಶ್ನೆ ಬೇರೆ. ಇಲ್ಲಿ ವಿಮಾನ ನಿಲ್ದಾಣ ಮಾಡಲಾಗುವುದಿಲ್ಲ. ಹೆಚ್ಚೆಂದರೆ ರೈಲು ಬಿಡಬಹುದು. ಅದು ಕೂಡ ಗಾಳಿಯಲ್ಲಿ ರೈಲು ಬಿಡುವವರೇ ಹೆಚ್ಚಿದ್ದಾರೆ ಇಲ್ಲಿ" ಎಂದು ಹೇಳಿದರು.

Recommended Video

ಪಂಜಾಬ್ ಗೆ ಟಾಂಗ್ ಕೊಟ್ಟ RCB ಪಡೆ | Oneindia Kannada

"ಇನ್ವೆಸ್ಟ್ ಇಂಡಿಯಾ ಅಭಿಯಾನ ಮಾಡಿಕೊಂಡು ಭಾರತದಲ್ಲಿ ಬಂಡವಾಳ ಹೂಡುವಂತೆ ಹೇಗೆ ಜಗತ್ತಿನಾದ್ಯಂತ ಸಂಚರಿಸುತ್ತಿದ್ದೇವೋ, ಹಾಗೆ ಇನ್ವೆಸ್ಟ್ ಇನ್ ಉತ್ತರ ಕನ್ನಡಕ್ಕೆ ನಾವೇ ಹೋಗಬೇಕಾಗಿದೆ. ಆ ಸಾಮರ್ಥ್ಯ ನಮ್ಮಲ್ಲಿದೆ. ಇಚ್ಛಾಶಕ್ತಿ, ಕ್ರಿಯಾಶಕ್ತಿ ನಮ್ಮಲ್ಲಿದೆ. ಈ ಅವಕಾಶ ಪುನಃ ಬರಲ್ಲ. ಈಗ ಬಾಗಿಲಿಗೆ ಬಂದು ನಿಂತಿದೆ. ಮುಂದಿನ ಐದು ವರ್ಷ ಇವುಗಳ ಜುಟ್ಟು ನಮ್ಮ ಕೈಯಲ್ಲಿರಬೇಕು. ಎಲ್ಲರ ಸಕ್ರಿಯ ಪಾಲುಗಾರಿಕೆ ಉತ್ತರ ಕನ್ನಡ ಜಿಲ್ಲೆಯನ್ನು ತಲೆಮಾರುಗಳ ತನಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಇನ್ನೂ‌ ಜೀವಂತವಾಗಿಟ್ಟುಕೊಳ್ಳಲು ಬದ್ಧರಾಗಿದ್ದೇವೆ ಎಂಬುವ ವಾಗ್ದಾನವನ್ನು ಜಿಲ್ಲೆಯ ಜನರಿಂದ ನಿರೀಕ್ಷಿಸುತ್ತೇನೆ" ಎಂದು ಸಂಸದರು ತಿಳಿಸಿದ್ದಾರೆ.

English summary
In a face book video BJP MP Anant Kumar Hegde shred his vision on Uttara Kannad district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X