"ನಾನು ಕಾಣೆಯಾಗಿಲ್ಲ" ಎಂದು ಮತ್ತೆ ಶಿವರಾಮ್ ಹೆಬ್ಬಾರ್ ಪೋಸ್ಟ್
Recommended Video
ಶಿರಸಿ, ಜುಲೈ 18: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರಬೈಲ್ ಶಿವರಾಮ್ ಹೆಬ್ಬಾರ್ ಅವರು ಈಚೆಗಷ್ಟೆ ತಮ್ಮ ರಾಜೀನಾಮೆ ಕುರಿತು ತಮ್ಮ ಕ್ಷೇತ್ರದ ಮತದಾರರಿಗೆ ಪತ್ರವೊಂದನ್ನು ಬರೆದಿದ್ದರು. ಇದೀಗ ಮತ್ತೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದನ್ನು ಹರಿಬಿಟ್ಟಿದ್ದಾರೆ.
ಇದಕ್ಕೆ ಕಾರಣವಿದೆ. ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಹುಡುಕಿಕೊಡಿ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಮುಖರು ಬುಧವಾರ ಇಲ್ಲಿನ ಡಿವೈಎಸ್ ಪಿ ಕಚೇರಿಗೆ ಭೇಟಿ ನೀಡಿ, ದೂರು ದಾಖಲಿಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಅತೃಪ್ತರೊಂದಿಗೆ ಇರುವ ಶಾಸಕರನ್ನು ಹುಡುಕಿಕೊಡಿ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ನೇತೃತ್ವದಲ್ಲಿ, ಕಾರ್ಯಕರ್ತರು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಅವರಿಗೆ ದೂರು ನೀಡಿದ್ದರು.
ಹತ್ತು ದಿನಗಳಿಂದ ಶಾಸಕರು ಕಾಣೆಯಾಗಿದ್ದು, ನಮ್ಮ ಸಂಪರ್ಕಕ್ಕೂ ಸಿಕ್ಕಿಲ್ಲ. ಕ್ಷೇತ್ರದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಶಾಸಕರನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಪಹರಣ ಮಾಡಿ, ಅಕ್ರಮ ಹಾಗೂ ಬಲವಂತವಾಗಿ ಕೂಡಿ ಹಾಕಿರಬಹುದೆಂಬ ಸಂಶಯವಿದೆ. ಶಾಸಕರ ಉಪಸ್ಥಿತಿ ಕ್ಷೇತ್ರಕ್ಕೆ ತೀರಾ ಅಗತ್ಯವಾಗಿರುವ ಕಾರಣ, ದೂರು ಸ್ವೀಕರಿಸಿದ ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಶಿವರಾಮ ಹೆಬ್ಬಾರರನ್ನು ಹುಡುಕಿಕೊಡಬೇಕು ಎಂದು ಮನವಿ ಮಾಡಿದ್ದರು.

ಅದಕ್ಕೆ ಶಿವರಾಮ್ ಹೆಬ್ಬಾರ್ ತಮ್ಮ ಫೇಸ್ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಕಾಣೆಯಾಗಿದ್ದೇನೆ, ಹುಡುಕಿಕೊಡಿ ಎಂಬ ಅಭೂತಪೂರ್ವ ರಾಜಕೀಯ ಕಾಳಜಿಯನ್ನು ಭೀಮಣ್ಣ ತೋರಿದ್ದಾರೆ! ಅವರ ಈ ಮನವಿಯ ಹಿಂದಿನ ವಿಶೇಷ ಕಾಳಜಿ ಆಶ್ಚರ್ಯಕರ" ಎಂದಿದ್ದಾರೆ.
"ನಾನು ಕೆಲ ದಿನಗಳಿಂದ ಕ್ಷೇತ್ರದಿಂದ ಹೊರಗಿದ್ದರೂ ಕಾರ್ಯಕರ್ತರ ಹಾಗೂ ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದೇನೆ. ಈ ನಡುವೆ ಮಳೆಯಿಂದಾದ ಹಾನಿ ಹಾಗು ತರ್ತು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳ ಮೂಲಕ ಕ್ರಮ ಕೈಗೊಂಡಿದ್ದೇನೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ನನ್ನ ಕಾರ್ಯದರ್ಶಿಗಳು ಸದಾ ಸಿದ್ಧರಿದ್ದಾರೆ. ನಾನೂ ನಿರಂತರ ಸಂಪರ್ಕದಲ್ಲಿರುತ್ತೇನೆ' ಎಂದು ಹೆಬ್ಬಾರ್ ತಿಳಿಸಿದ್ದಾರೆ.












Click it and Unblock the Notifications