ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ; ವಿಶ್ವೇಶ್ವರ ಹೆಗಡೆ ಕಾಗೇರಿ
ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಲಿ ಕರ್ನಾಟಕ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಿನ ಚುನಾವಣೆಯಲ್ಲಿಯೂ ನಾನೇ ಅಭ್ಯರ್ಥಿ ಎಂದು ಹೇಳಿದ್ದಾರೆ.
ಶಿರಸಿ, ಮಾರ್ಚ್ 14; ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಧಾನಸಭೆ ಕಲಾಪದಲ್ಲಿ ಕೊನೆಯ ಭಾಷಣ ಮಾಡುವಾಗ, "ಸಭಾಧ್ಯಕ್ಷರಾಗಿ ಸದನ ನಡೆಸಿದ ರೀತಿ ಎಲ್ಲರೂ ಮೆಚ್ಚುವಂತಹದ್ದು ಮುಂದಿನ ಅಧಿವೇಶನದಲ್ಲಿ ಸ್ಪೀಕರ್ ಪೀಠದಲ್ಲಿ ಕೂರದೇ ಸಚಿವರಾಗಿ. ಮುಖ್ಯಮಂತ್ರಿಗಳಿಗೆ ನಾನು ಮನವಿ ಮಾಡುತ್ತೇನೆ" ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ಬಾರಿಯ ಚುನಾವಣೆಯಲ್ಲಿಯೂ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಅಭ್ಯರ್ಥಿ. ಇದನ್ನು ಪಕ್ಷದ ನಾಯಕರು ಅಥವ ಹೈಕಮಾಂಡ್ ಹೇಳಿಲ್ಲ. ಸ್ವತಃ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಈ ಕುರಿತು ಘೋಷಣೆ ಮಾಡಿದ್ದಾರೆ. ಏಳು ಬಾರಿ ಶಾಸಕರಾಗಿ ದಾಖಲೆ ಮಾಡಿರುವ ಅವರು 8ನೇ ಬಾರಿಯೂ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

61 ವರ್ಷದ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಮತ್ತೆ ಪಕ್ಷದ ಚಟುವಟಿಕೆಗೆ ಮರಳಿದರು. ಮಾಧ್ಯಮಗಳ ಜೊತೆ ಮಾತನಾಡಿ, "ಶಿರಸಿ-ಸಿದ್ದಾಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾನೇ ಅಭ್ಯರ್ಥಿ, ಯಾರಿಗೂ ಅನುಮಾನ ಬೇಡ. ಸಿದ್ದಾಪುರದಲ್ಲಿ ಕೆಲವರಿಂದ ವಿರೋಧ ವ್ಯಕ್ತವಾದರೂ ಅದು ಸಾಮಾನ್ಯ. ಅನ್ನು ಶಮನ ಮಾಡುವುದು ನನಗೆ ತಿಳಿದಿದೆ" ಎಂದರು.
"ವಿಧಾನಸಭಾಧ್ಯಕ್ಷನಾದ ನಂತರ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದೆ. ಇದರಿಂದ ಕ್ಷೇತ್ರದಲ್ಲಿ ಹೆಚ್ಚಿನ ವ್ಯತ್ಯಾಸ ಆಗದಿದ್ದರೂ ಪಕ್ಷದ ವಲಯದಲ್ಲಿ ಸಂಪರ್ಕ ಸಮಸ್ಯೆ ಆಗಿತ್ತು. ಮತದಾರರ ಬಳಿಯೂ ಪಕ್ಷದ ಚಟುವಟಿಕೆ ತಿಳಿಸಲು ತೊಡಕಾಗಿತ್ತು. ಹೀಗಾಗಿ ಅಧಿವೇಶನ ಮುಕ್ತಾಯ ಆಗುತ್ತಿದ್ದಂತೆ ಕಾನೂನು ತಜ್ಞರ ಜೊತೆ ಚರ್ಚಿಸಿ ಸಕ್ರಿಯ ರಾಜಕಾರಣದತ್ತ ಮುಖ ಮಾಡಿದ್ದೇನೆ" ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು.

ದಾಖಲೆ ಬರೆದಿದ್ದಾರೆ; ವಿಶ್ವೇಶ್ವರ ಹೆಗಡೆ ಕಾಗೇರಿ ಅಂಕೋಲಾ ಕ್ಷೇತ್ರದಿಂದ ಮೂರು ಬಾರಿ, ಶಿರಸಿ-ಸಿದ್ದಾಪುರ ಕ್ಷೇತ್ರದಿಂದ 4 ಬಾರಿ ಜಯಗಳಿಸುವ ಮೂಲಕ 7 ಬಾರಿ ಶಾಸಕರಾಗಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿಗಳು ಹಬ್ಬಿದ್ದವು. ಇಂತಹ ಸುದ್ದಿಗಳಿಗೆ ಈಗ ಶಾಸಕರೇ ಉತ್ತರ ನೀಡಿದ್ದಾರೆ. 2018ರ ಚುನಾವಣೆಯಲ್ಲಿ ಅವರು 70,595 ಮತಗಳನ್ನು ಪಡೆದಿದ್ದರು. ಎದುರಾಳಿಯಾಗಿದ್ದ ಕಾಂಗ್ರೆಸ್‌ನ ಭೀಮಣ್ಣ ನಾಯ್ಕ್ 53,134 ಮತಗಳನ್ನು ಪಡೆದು ಎರಡನೇ ಸ್ಥಾನಗಳಿಸಿದ್ದರು.
ಈ ಬಾರಿಯ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಬದಲು ಬಿಜೆಪಿಯಲ್ಲಿ ಕೃಷ್ಣ ಎಸಳೆ, ಗುರುಪ್ರಸಾದ ಹೆಗಡೆ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಕಾಗೇರಿ ಅವರ ಎದುರು ಪೈಪೋಟಿ ನಡೆಸಿ ಟಿಕೆಟ್ ಪಡೆಯುವುದು ಕಷ್ಟ ಎಂಬುದು ಅವರಿಗೂ ತಿಳಿದಿದೆ. ಶಿರಸಿ ಕ್ಷೇತ್ರದ ವ್ಯಾಪ್ತಿಗೆ ಶಿರಸಿ, ಸಿದ್ದಾಪುರ ಎರಡು ತಾಲೂಕುಗಳು ಸೇರುತ್ತವೆ. ಬ್ರಾಹ್ಮಣರು, ಈಡಿಗರು ಇಲ್ಲಿ ಪ್ರಭಾವಿಯಾಗಿದ್ದಾರೆ. ಯಾರು ಗೆಲ್ಲಬೇಕು? ಎಂದು ಅವರೇ ತೀರ್ಮಾನ ಮಾಡುವಷ್ಟು ಶಕ್ತಿ ಹೊಂದಿದ್ದಾರೆ.
ಎದುರಾಳಿಗಳು ಯಾರು?; ಶಿರಸಿ-ಸಿದ್ದಾಪುರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಎದುರಾಳಿ ಯಾರು?. ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್ ಮತ್ತೆ ಎದುರಾಳಿಯಾಗುವ ಉತ್ಸಾಹದಲ್ಲಿದ್ದಾರೆ. ಇವರ ಜೊತೆ ಎ. ರವೀಂದ್ರ ನಾಯ್ಕ್, ಶ್ರೀಪಾದ ಹೆಗಡೆ ಕಡವೆ, ಸುಷ್ಮಾ ರಾಜಗೋಪಾಲ, ದೀಪಕ್ ದೊಡ್ಡೂರು ಟಿಕೆಟ್ ಆಕಾಂಕ್ಷಿಗಳು. ಭೀಮಣ್ಣ ನಾಯ್ಕ್ ಕಾಗೇರಿ ವಿರುದ್ಧ, ಯಲ್ಲಾಪುರದಲ್ಲಿ ಶಿವರಾಂ ಹೆಬ್ಬಾರ್ ವಿರುದ್ಧ, ವಿಧಾನ ಪರಿಷತ್ ಚುನಾವಣೆಯಲ್ಲಿ ಗಣಪತಿ ಉಳ್ವೇಕರ ವಿರುದ್ಧ ಸೋಲುಂಡಿದ್ದಾರೆ. ಆದ್ದರಿಂದ ಬೇರೆ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಸಿಗಬಹುದು ಎಂಬುದು ಲೆಕ್ಕಾಚಾರವಾಗಿದೆ.
2018ರಲ್ಲಿ ಶಶಿಭೂಷಣ ಹೆಗಡೆ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿದ್ದರು. 26,625 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈ ಬಾರಿಯೂ ಬೇರೆ ಪ್ರಬಲ ಅಭ್ಯರ್ಥಿ ಹುಡುಕುವುದು ಕಷ್ಟ. ಆದ್ದರಿಂದ ಶಶಿಭೂಷಣ ಹೆಗಡೆಯೇ ಅಭ್ಯರ್ಥಿಯಾಗಬಹುದಾಗಿದೆ.












Click it and Unblock the Notifications