ಶಿವಮೊಗ್ಗ-ಬೆಂಗಳೂರು: 7 ದಿನದ ಮಗು ಬೆಂಗಳೂರಿಗೆ ಕರೆತರಲು ಝಿರೋ ಟ್ರಾಫಿಕ್
ಶಿವಮೊಗ್ಗ, ಫೆಬ್ರವರಿ 10: 7 ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಕರೆತರಲು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ.
ಸೋಮವಾರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರಲಾಗುತ್ತಿದೆ. ಮಗುವಿರುವ ಆಂಬ್ಯುಲೆನ್ಸ್ ಈಗಾಗಲೇ ಶಿವಮೊಗ್ಗದಿಂದ ಝಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಹೊರಟಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಲೆಮಲ್ಲೂರು ಗ್ರಾಮದ ಸ್ವಾಮಿ ಮತ್ತು ಸುಧಾ ದಂಪತಿಯ ಮಗುವನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆತರಲಾಗುತ್ತಿದೆ. 7 ದಿನದ ಮಗುವಿನ ಹೃದಯದಲ್ಲಿ ರಂಧ್ರವಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಬರಲಾಗುತ್ತಿದೆ.
10 ದಿನದ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಸುಧಾ ಫೆಬ್ರವರಿ 4ರಂದು ಮಗುವಿಗೆ ಜನ್ಮ ನೀಡಿದ್ದರು. ಸ್ಕ್ಯಾನಿಂಗ್ ಮಾಡಿದಾಗ ಮಗುವಿನ ಹೃದಯಲ್ಲಿ ರಂಧ್ರ ಇರುವುದು ಪತ್ತೆಯಾಗಿದೆ. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದರು.
ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿ ಮಗು ಇರುವ ಆಂಬ್ಯುಲೆನ್ಸ್ ಶಿವಮೊಗ್ಗದಿಂದ ಬೆಂಗಳೂರಿಗೆ ತಲುಪುವ ತನಕ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದಿಂದ ಈಗಾಗಲೇ ಆಂಬ್ಯುಲೆನ್ಸ್ ಹೊರಟಿದೆ. ಪೊಲೀಸ್ ಎಸ್ಕಾರ್ಟ್ ಮೂಲಕ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ.
ಕಳೆದ ವಾರ ಮಂಗಳೂರಿನಿಂದ ಬೆಂಗಳೂರಿಗೆ 40 ದಿನದ ಮಗುವನ್ನು ಜಯದೇವ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಗ ಸಹ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.












Click it and Unblock the Notifications