ಯಾವುದೇ ಕ್ಷಣದಲ್ಲಿ ತುಂಗಾ ಡ್ಯಾಂನಿಂದ ನದಿಗೆ ನೀರು ಬಿಡುಗಡೆ
ಶಿವಮೊಗ್ಗ, ಜೂನ್ 05: ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ಆರಂಭವಾಗಿದೆ. ಮಲೆನಾಡು ಭಾಗದಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ತುಂಗಾ ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಶಿವಮೊಗ್ಗ ನಗರದ ಸಮೀಪ ಇರುವ ಗಾಜನೂರು ಗ್ರಾಮದಲ್ಲಿನ ತುಂಗಾ ಡ್ಯಾಂ ಭರ್ತಿಯಾಗಿದೆ.
ರಾಜ್ಯದ ಅತಿ ಚಿಕ್ಕ ಹಾಗೂ ಮೊದಲು ಭರ್ತಿಯಾಗುವ ಡ್ಯಾಂ ಎಂದು ತುಂಗಾ ಡ್ಯಾಂ ಖ್ಯಾತಿಗಳಿಸಿದೆ. ಡ್ಯಾಂ ಗರಿಷ್ಠ ನೀರಿನ ಸಂಗ್ರಹ ಮಟ್ಟ 588.24 ಅಡಿಗಳು. ಸದ್ಯ ತುಂಗಾ ಮೇಲ್ದಂಡೆ ಯೋಜನೆಯ ಈ ಡ್ಯಾಂ ಪೂರ್ಣ ಮಟ್ಟಕ್ಕೆ ತುಂಬಲು 4 ಅಡಿ ಬಾಕಿ ಇದೆ.

ಈ ಹಿನ್ನಲೆಯಲ್ಲಿ ಯಾವುದೇ ಕ್ಷಣದಲ್ಲಿ ತುಂಗಾ ಡ್ಯಾಂನಿಂದ ತುಂಗಾ ನದಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕುರಿತು ತುಂಗಾ ಮೇಲ್ದಂಡೆ ಯೋಜನೆಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಂಗಾ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 588.24 ಅಡಿ (3 ಟಿಎಂಸಿ ಅಡಿಗಳು). ಡ್ಯಾಂ ಪೂರ್ಣ ಮಟ್ಟಕ್ಕೆ ತುಂಬಲು 4 ಅಡಿ ಬಾಕಿಯಿದ್ದು. ಮಲೆನಾಡು ಭಾಗದಲ್ಲಿ ನೈಋತ್ಯ ಮುಂಗಾರು ಅವಧಿಯಲ್ಲಿ ಹೆಚ್ಚಿನ ಮಳೆಯಾಗಲಿದ್ದು, ತುಂಗಾ ನದಿಗೆ ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ಯಾವ ಕ್ಷಣದಲ್ಲಾದರೂ ನದಿಗೆ ನೀರನ್ನು ಬಿಡುವ ಸಂಭವವಿರುತ್ತದೆ.
ಜನರಿಗೆ ಎಚ್ಚರಿಕೆ: ತುಂಗಾ ಡ್ಯಾಂನ ಕೆಳಭಾಗ ನದಿ ಪಾತ್ರದಲ್ಲಿ ಬರುವ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಹಾಗೂ ದನ ಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡುವುದು ಮಾಡಬಾರದೆಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ತುಂಗಾ ನದಿಯ ಪಾತ್ರದಲ್ಲಿ ಬರುವ ಗ್ರಾಮಗಳ ಪ್ರದೇಶದ ಗ್ರಾಮಸ್ಥರಿಗೆ ನದಿ ಪಾತ್ರದಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆಯಿಂದಿರಲು ತಿಳಿಸಲಾಗಿದೆ.
22 ಗೇಟುಗಳಿವೆ: ಶಿವಮೊಗ್ಗ ನಗರದ ಸಮೀಪ ಇರುವ ಗಾಜನೂರು ಗ್ರಾಮದಲ್ಲಿನ ತುಂಗಾ ಡ್ಯಾಂ ಇದೆ. ಡ್ಯಾಂನಲ್ಲಿ 22 ಕ್ರೆಸ್ಟ್ ಗೇಟ್‌ಗಳಿವೆ. ಡ್ಯಾಂ ಭರ್ತಿಯಾದಾಗ ನದಿಗೆ ನೀರು ಬಿಟ್ಟಾಗ ಡ್ಯಾಂ ನೋಟ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ.
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗ ಡ್ಯಾಂ ನೋಡಲು ಸಾವಿರಾರು ಜನರು ಆಗಮಿಸುತ್ತಾರೆ. ಚಿಕ್ಕಮಗಳೂರು, ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆಯಾದಾಗ ತುಂಗಾ ನದಿ ತುಂಬಿ ಹರಿಯುತ್ತದೆ. ಮಳೆಗಾಲದ ಆರಂಭದಲ್ಲಿಯೇ ಚಿಕ್ಕ ಡ್ಯಾಂ ಬೇಗ ಭರ್ತಿಯಾಗುತ್ತದೆ.
ಗಾಜನೂರು ಡ್ಯಾಂನಿಂದ ತುಂಗಾ ನದಿಗೆ ನೀರು ಬಿಡುಗಡೆ ಮಾಡಿದ ಬಳಿಕ ಶಿವಮೊಗ್ಗ ನಗರದ ಮಧ್ಯದಲ್ಲಿರುವ ತುಂಗಾ ನದಿಯಲ್ಲಿಯೂ ನೀರಿನ ಮಟ್ಟ ಏರಿಕೆಯಾಗುತ್ತದೆ. ಹೊಳೆ ಬಸ್ ನಿಲ್ದಾಣದ ಬಳಿ ಇರುವ ಮಂಟಪ ಮುಳುಗಿತೆ? ಎಂಬ ಚರ್ಚೆ ಆರಂಭವಾಗುತ್ತದೆ.
ತುಂಗಾ ನದಿ ನೀರು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಆಧಾರವಾಗಿದೆ. ಶಿವಮೊಗ್ಗದಿಂದ ಡ್ಯಾಂ ಮೂಲಕ ನೀರು ಬಿಟ್ಟಾಗ ಅದು ಕೂಡಲಿಯಲ್ಲಿ ಭದ್ರಾ ನದಿ ಸೇರಿ ಅಲ್ಲಿಂದ ದಾವಣಗೆರೆ, ಹಾವೇರಿ ಮೂಲಕ ಬಳ್ಳಾರಿಯ ತುಂಗಭದ್ರಾ ಡ್ಯಾಂ ಸೇರುತ್ತದೆ. ಅಲ್ಲಿಂದ ಆಂಧ್ರ ಮತ್ತು ತೆಲಂಗಾಣಕ್ಕೆ ನೀರು ಹರಿಯುತ್ತದೆ.












Click it and Unblock the Notifications