'ತುಂಗಾನಾಲೆ ಆಧುನೀಕರಣದಲ್ಲಿ ಗೋಲ್ ಮಾಲ್'
ಬೆಂಗಳೂರು, ಡಿಸೆಂಬರ್ 24 : ಶಿವಮೊಗ್ಗದ ತುಂಗಾ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು, ಈ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ಅವರು, 'ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಕರ್ನಾಟಕ ನೀರಾವರಿ ನಿಗಮದ ಅನುಮತಿ ಪಡೆಯದೆ, ಸರ್ಕಾರದ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳದೆ, 128 ಕೋಟಿ ರೂ.ಗಳ ಕಾಮಗಾರಿಯನ್ನು ಇಂಜಿನಿಯರ್‌ಗಳು ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪನಿಗೆ ಅಕ್ರಮವಾಗಿ ನೀಡಿದ್ದಾರೆ' ಎಂದು ಆರೋಪಿಸಿದರು. [ಮಂಡಗದ್ದೆಯಲ್ಲಿ ಬಾನಾಡಿಗಳು ಸೃಷ್ಟಿಸಿದ ತಾರಲೋಕ]

'ತುಂಗಾನಾಲೆಯ ಆಧುನೀಕರಣ ಕಾಮಗಾರಿಯ ಟೆಂಡರ್‌ನಲ್ಲಿ ರಾಮಲಿಂಗಂ ಕನ್‌ಸ್ಟ್ರಕ್ಷನ್ ಸಹ ಪಾಲ್ಗೊಂಡಿತ್ತು. 128 ಕೋಟಿ ರೂ.ಗಳ ಟೆಂಡರ್‌ಗೆ ಕಂಪನಿ ನಿಗದಿತ ದರಕ್ಕಿಂತ ಶೆ 20 ರಷ್ಟು ಹೆಚ್ಚಿನ ದರ ಬಿಡ್ ಮಾಡಿತ್ತು. ಆದರೆ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಕಂಪನಿ ಕೆಲಸ ಆರಂಭಿಸಿದೆ' ಎಂದು ಈಶ್ವರಪ್ಪ ಅವರು ದೂರಿದರು. [ಗಂಗಾ ಮಾತೆಯಂತೆ ಕಾವೇರಿಗೂ ಸ್ವಚ್ಛತಾ ಭಾಗ್ಯ]
'ಕರ್ನಾಟಕ ಪಾರದರ್ಶಕ ಕಾಯ್ದೆ ಅನ್ವಯ 128 ಕೋಟಿ ರೂ.ಗಳ ದೊಡ್ಡ ಮೊತ್ತದ ಕಾಮಗಾರಿಗೆ ದೀರ್ಘಾವಧಿಯ 60 ದಿನಗಳ ಟೆಂಡರ್ ಕರೆಯಬೇಕು. ಆದರೆ, ಅಲ್ಪಾವಧಿ ಟೆಂಡರ್ ಕರೆಯಲಾಗಿದೆ. ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಕಾಮಗಾರಿ ಆರಂಭವಾಗಿದೆ. ಟೆಂಡರ್ ಮಾರ್ಗಸೂಚಿಯಂತೆ ಕೆಲಸಗಳು ನಡೆಯುತ್ತಿಲ್ಲ' ಎಂದು ಈಶ್ವರಪ್ಪ ಆರೋಪಿಸಿದರು.

'ಕರ್ನಾಟಕ ನೀರಾವರಿ ನಿಗಮದ ಅನುಮತಿ ಪಡೆಯದೆ ಇಂಜಿನಿಯರ್‌ಗಳೇ ರಾಮಲಿಂಗಂ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಟೆಂಡರ್ ನೀಡುವಲ್ಲಿ ಗೋಲ್ ಮಾಲ್ ನಡೆದಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಯಬೇಕು' ಎಂದು ಈಶ್ವರಪ್ಪ ಹೇಳಿದ್ದಾರೆ.












Click it and Unblock the Notifications