ಶಿವಮೊಗ್ಗ; ನಾಗರಹಾವು ಹಿಡಿಯುತ್ತಿದ್ದಂತೆ ಮಹಿಳೆಯರ ಮೈಮೇಲೆ ಬಂದ ನಾಗ ದೇವತೆ?
ಶಿವಮೊಗ್ಗ, ಸೆಪ್ಟೆಂಬರ್ 30; ನಾಗರ ಹಾವು ಹಿಡಿಯಲು ಹೋದಾಗ ಇಬ್ಬರು ಮಹಿಳೆಯರ ಮೈಮೇಲೆ ದೇವರು ಬಂದಿದೆ. ನಾಗರ ಹಾವನ್ನು ಹಿಡಿಯಬಾರದು, ಅದನ್ನು ಅಲ್ಲಿಯೆ ಬಿಡಬೇಕು ಎಂದು ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಸೂಚನೆ ನೀಡಿದ ಘಟನೆ ಶಿವಮೊಗ್ಗದ ಹೊನ್ನಾಳಿ ರಸ್ತೆಯ ಫ್ಲೈ ಓವರ್ ಪಕ್ಕದ ಚೌಡೇಶ್ವರಿ ಕಾಲೋನಿಯಲ್ಲಿರುವ ಶಂಕರ ರೇಂಜ್ ನರ್ಸರಿಯಲ್ಲಿ ಸಂಭವಿಸಿದೆ.
ನರ್ಸರಿಯಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ನಾಗರಾಜ್ ಎಂಬುವವರು ಶಿವಮೊಗ್ಗದ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದರು. ನರ್ಸರಿಯಲ್ಲಿ ಹಾವು ಕಾಣಿಸಕೊಂಡ ಜಾಗದಲ್ಲಿ ಹುಡುಕಿದಾಗ ಸುಮಾರು ಒಂದು ಅಡಿ ಉದ್ದದ ನಾಗರ ಹಾವು ಸಿಕ್ಕಿದೆ. ಸ್ನೇಕ್ ಕಿರಣ್ ಅವರು ಹಾವನ್ನು ರಕ್ಷಣೆ ಮಾಡಿ, ಕಾಡಿಗೆ ಕೊಂಡೊಯ್ದು ಬಿಡಲು ಸಿದ್ಧವಾಗಿದ್ದರು.
ಸ್ನೇಕ್ ಕಿರಣ್ ಅವರು ಹಾವನ್ನು ರಕ್ಷಣೆ ಮಾಡುವುದನ್ನು ನರ್ಸರಿಯಲ್ಲಿ ಕೆಲಸ ಮಾಡುವ ಮಹಿಳೆಯರು ಸುತ್ತುವರೆದು ನೋಡುತ್ತಿದ್ದರು. ಈ ವೇಳೆ ಮಹಿಳೆಯರ ಗುಂಪಿನಲ್ಲಿದ್ದ ವಾಸುಕಿ ಮತ್ತು ನೇತ್ರಾ ಎಂಬ ಮಹಿಳೆಯರ ವರ್ತನೆ ಇದ್ದಕ್ಕಿದ್ದಂತೆ ಬದಲಾಗಿದೆ. ಇಬ್ಬರು ಜೋರಾಗಿ ಕೂಗಿಕೊಂಡು, ಹಾವಿನಂತೆ ವರ್ತಿಸುತ್ತಾ, ನೆಲದ ಬಿದ್ದು ಹೊರಳಾಡಿದರು. ಇದನ್ನು ನೋಡಿದ ಅಕ್ಕಪಕ್ಕದಲ್ಲಿದ್ದ ಉಳಿದ ಮಹಿಳೆಯರು ಹೆದರಿಕೊಂಡು ಓಡಿದ್ದಾರೆ.

ಹಾವನ್ನು ಅಲ್ಲಿಯೆ ಬಿಟ್ಟುಬಿಡಲು ಸಂದೇಶ:
ಮೈ ಮೇಲೆ ದೇವರು ಬಂದಂತೆ ವರ್ತಿಸುತ್ತಿದ್ದನ್ನು ಕಂಡು ಸ್ನೇಕ್ ಕಿರಣ್ ಸಹಿತ ಅಲ್ಲಿದ್ದವರು ಆತಂಕಗೊಂಡಿದ್ದಾರೆ. ಸ್ನೇಕ್ ಕಿರಣ್ ಹಿಡಿದಿರುವ ಹಾವನ್ನು ಎಲ್ಲೂ ಕೊಂಡೊಯ್ಯಬಾರದು. ಇಲ್ಲಿಯೇ ಸಮೀಪದಲ್ಲಿರುವ ಜಾಗದಲ್ಲಿ ಬಿಡಬೇಕು ಎಂದು ಸೂಚನೆ ನೀಡಿದ್ದಾರೆ. ಬಳಿಕ ಮಹಿಳೆಯರು ಹೇಳಿದ ಜಾಗದಲ್ಲೇ ಸ್ನೇಕ್ ಕಿರಣ್ ನಾಗರ ಹಾವನ್ನ ಬಿಟ್ಟಿದ್ದಾರೆ.
ಹಾವು ಹಿಡಿದ ಸಂದರ್ಭ ಮೈಮೇಲೆ ದೇವರು ಬಂದಿದ್ದನ್ನು ಕಂಡ ಸ್ನೇಕ್ ಕಿರಣ್, ನಾಗರಾಜ್ ಮತ್ತು ಮಹಿಳೆಯರು ಕೆಲಕಾಲ ಆತಂಕಗೊಂಡಿದ್ದರು. ನಂತರ ಮಹಿಳೆಯರಿಗೆ ಪೂಜೆ ಮಾಡಿದ ನಂತರ ಮಹಿಳೆಯರು ಶಾಂತವಾಗಿದ್ದಾರೆ.












Click it and Unblock the Notifications