Jog Falls: ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆ, ಪ್ರವಾಸಿಗರಿಗೆ ಸಿಹಿಸುದ್ದಿ
ಶಿವಮೊಗ್ಗ, ಡಿಸೆಂಬರ್ 30: ಶಿವಮೊಗ್ಗದಲ್ಲಿರುವ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆ ಮಾಡುವ ಪ್ರವಾಸಿಗರಿಗೆ ಸಿಹಿಸುದ್ದಿಯೊಂದಿದೆ. 2025ನೇ ವರ್ಷದ ಮೊದಲ ದಿನದಿಂದಲೇ ಜೋಗ ಜಲಪಾತಕ್ಕೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿತ್ತು. ಆದರೆ ಈಗ ಈ ಆದೇಶವನ್ನು ಮಾರ್ಪಾಡು ಮಾಡಲಾಗಿದೆ. ಆದ್ದರಿಂದ ಪ್ರವಾಸಿಗರು ಕೆಲವು ನಿಯಮಗಳನ್ನು ಪಾಲಿಸುವ ಮೂಲಕ ಜೋಗಕ್ಕೆ ಭೇಟಿ ನೀಡಬಹುದು.
ಜೋಗ ನಿರ್ವಹಣಾ ಪ್ರಾಧಿಕಾರ ಈ ಕುರಿತು ಮಾಹಿತಿಯನ್ನು ನೀಡಿದೆ. ಈ ಹಿಂದೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿ ನಡೆಯುವ ಕಾರಣ ಈ ಸಂದರ್ಭದಲ್ಲಿ ಪ್ರವಾಸಿಗರಿಗೆ ತೊಂದರೆ ಉಂಟಾಗಬಾರದು ಎಂದು ಜನವರಿ 1 ರಿಂದ ಮಾರ್ಚ್ 15ರ ತನಕ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿತ್ತು.

ಆದರೆ ಈಗ ಈ ಆದೇಶವನ್ನು ಮಾರ್ಪಾಡು ಮಾಡಲಾಗಿದೆ. ಜೋಗ ನಿರ್ವಹಣಾ ಪ್ರಾಧಿಕಾರದ ಪ್ರವೇಶ ದ್ವಾರಬಿಟ್ಟು ಉಳಿದ ಸ್ಥಳಗಳಿಂದ ಜೋಗ ಜಲಪಾತ ವೀಕ್ಷಣೆ ಮಾಡಲು ತೆರಳಲು ಅನುಮತಿ ನೀಡಲಾಗಿದೆ. ಆದ್ದರಿಂದ ಪ್ರವಾಸಿಗರು ಎಂದಿನಂತೆ ಜೋಗ ವೀಕ್ಷಣೆ ಮಾಡಬಹುದು.
ಯಾವ-ಯಾವ ಮಾರ್ಗ: ಭಾನುವಾರ ಜೋಗ ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶದ ಅನ್ವಯ ಮುಖ್ಯ ರಸ್ತೆಯ ವೀವ್ ಪಾಯಿಂಟ್, ಯಾತ್ರಿ ನಿವಾಸ, ರಾಣಿ ಫಾಲ್ಸ್, ಮುಂಬೈ ಬಂಗಲೆ, ಮುಂಗಾರು ಮಳೆ ಪಾಯಿಂಟ್ ಸೇರಿದಂತೆ ಇತರ ಸ್ಥಳಗಳಿಂದ ಪ್ರವಾಸಿಗರು ಜೋಗದ ವೈಭವವನ್ನು ಕಣ್ತುಂಬಿಕೊಳ್ಳಬಹುದು.
ಜೋಗ ಜಲಪಾತ ವೀಕ್ಷಣೆಗೆ ತೆರಳುವ ಮುಖ್ಯ ಪ್ರವೇಶ ದ್ವಾರದ ಗೋಪುರ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ಕಾರಣಕ್ಕೆ ಜೋಗಕ್ಕೆ ಪ್ರವಾಸಿಗೆ ಭೇಟಿಯನ್ನು ಮೊದಲು ನಿರ್ಬಂಧಿಸಲಾಗಿತ್ತು.
ಡಿಸೆಂಬರ್ ಅಂತ್ಯದಲ್ಲಿ ಜೋಗದಲ್ಲಿ ಹೆಚ್ಚಿನ ಪ್ರವಾಸಿಗರು ಕಂಡುಬರುತ್ತಿದ್ದರು. ಆದರೆ ಈ ಬಾರಿ ನಿರ್ಬಂಧದ ಆದೇಶ ಇನ್ನೂ ಜಾರಿಗೆ ಬಾರದಿದ್ದರೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಆದ್ದರಿಂದ ಸುಮಾರು ಮೂರು ತಿಂಗಳ ಕಾಲ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರುವ ಆದೇಶದಲ್ಲಿ ಬದಲಾವಣೆ ಮಾಡಲಾಗಿದೆ.
ಮುಖ್ಯ ಪ್ರವೇಶ ದ್ವಾರ ಬಿಟ್ಟು ಉಳಿದ ಸ್ಥಳಗಳಲ್ಲಿ ತಡೆ ಬೇಲಿ ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಪ್ರವಾಸಿಗರು ಜಲಪಾತ ವೀಕ್ಷಣೆ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಆದ್ದರಿಂದ ಪ್ರವಾಸಿಗರು ವಿಶ್ವವಿಖ್ಯಾತ ಜೋಗ ಜಲಪಾತ ನೋಡಲು ತೆರೆಳಬಹುದಾಗಿದೆ.
ಕರ್ನಾಟಕ ಸರ್ಕಾರ ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ಈಗಾಗಲೇ 120 ಕೋಟಿ ರೂ. ಅನುದಾನವನ್ನು ನೀಡಿದೆ. ಮೂಲಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜೋಗವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸುವ ಕಾಮಗಾರಿಗಳು ನಡೆಯುತ್ತಿವೆ. ಮಳೆಗಾಲದಲ್ಲಿ ಹೆಚ್ಚಿನ ಪ್ರವಾಸಿಗರು ಜೋಗಕ್ಕೆ ಭೇಟಿ ಕೊಡುತ್ತಾರೆ. ಆದರೆ ಎಲ್ಲಾ ಕಾಲದಲ್ಲೂ ಪ್ರವಾಸಿಗರನ್ನು ಸೆಳೆಯಲು ಸರ್ವ ಋತು ಜೋಗ ಎಂಬ ಹೆಸರಿನಲ್ಲಿ ಪ್ರವಾಸಿ ತಾಣದ ಅಭಿವೃದ್ಧಿಗೆ ಕಾಮಗಾರಿ ಕೈಗೊಳ್ಳಲಾಗಿದೆ.
ಜೋಗದಲ್ಲಿ ಪ್ರವಾಸಿಗರು ಕನಿಷ್ಟ ಒಂದು ಇಡೀ ದಿನ ಆಸ್ವಾದಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಮತ್ತು ಈಗಿರುವ ಸೌಲಭ್ಯಗಳನ್ನು ಉತ್ತಮಪಡಿಸಲಾಗುತ್ತಿದೆ. 22 ಎಕರೆ ಪ್ರದೇಶದಲ್ಲಿ ವೀಕ್ಷಣಾ ಗೋಪುರ, ಕಾರಂಜಿಗಳ ನಿರ್ಮಾಣ, ವಿಶ್ರಾಂತಿ ಗೃಹಗಳು, ಉದ್ಯಾನವನ, ವಿದ್ಯುದಾಗಾರಕ್ಕೆ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ, ಮಳೆಗಾಲ ಹೊರತುಪಡಿಸಿ ಪ್ರತಿ ಶನಿವಾರ ಮತ್ತು ಭಾನುವಾರ ಜಲಪಾತಕ್ಕೆ ನೀರು ಹರಿಸುವ ಪ್ರಸ್ತಾವನೆಗಳು ಇದರಲ್ಲಿ ಸೇರಿವೆ.












Click it and Unblock the Notifications