Vande Bharat Train: ಕರ್ನಾಟಕಕ್ಕೆ 3 ಹೊಸ ವಂದೇ ಭಾರತ್ ರೈಲು, ಶಿವಮೊಗ್ಗಕ್ಕೆ ಬರಲಿದೆ ರೈಲು
ಶಿವಮೊಗ್ಗ, ಸೆಪ್ಟೆಂಬರ್ 05: ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್‌ಗೆ ಭಾರೀ ಬೇಡಿಕೆ ಇದೆ. ಕರ್ನಾಟಕದ ವಿವಿಧ ಮಾರ್ಗದಲ್ಲಿ ಈ ಮಾದರಿ ರೈಲು ಓಡಿಸಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಸದ್ಯ 8 ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಶೀಘ್ರದಲ್ಲೇ 3 ಹೊಸ ವಂದೇ ಭಾರತ್ ರೈಲುಗಳು ರಾಜ್ಯದಲ್ಲಿ ಸಂಚಾರವನ್ನು ನಡೆಸಲಿವೆ.
ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಈ ಕುರಿತು ಮಾಹಿತಿ ನೀಡಿದ್ದಾರೆ. ದೇಶದಲ್ಲಿ 50ಕ್ಕೂ ಹೆಚ್ಚು ಮಾರ್ಗದಲ್ಲಿ ವಂದೇ ಭಾರತ್ ಕೇಸರಿ, ಬಿಳಿ ಬಣ್ಣದ ರೈಲುಗಳು ಸಂಚಾರ ನಡೆಸುತ್ತಿವೆ. ಆಗಸ್ಟ್ 31ರಿಂದ ಬೆಂಗಳೂರು-ಮಧುರೈ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದೆ.

ಮಲೆನಾಡಿಗೆ ವಂದೇ ಭಾರತ್ ರೈಲು: ಬೆಂಗಳೂರು- ಶಿವಮೊಗ್ಗ ಮಾರ್ಗದಲ್ಲಿ ವಂದೇ ಭಾರತ್ ರೈಲು ಬೇಕು ಎಂಬ ಬೇಡಿಕೆ ಹಲವು ದಿನದಿಂದ ಕೇಳಿ ಬರುತ್ತಿದೆ. ಶಿವಮೊಗ್ಗಕ್ಕೆ ಈಗ ಜನ ಶತಾಬ್ದಿ ರೈಲು ಸಂಚಾರವಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವಿದೆ. ಬೆಂಗಳೂರು-ಮಲೆನಾಡ ಹೆಬ್ಬಾಗಿಲು ಸಂಪರ್ಕಿಸಲು ರೈಲು ಸಂಚಾರ ಆರಂಭಿಸಬೇಕು ಎಂದು ರೈಲ್ವೆ ಸಚಿವರಿಗೆ ಸಹ ಮನವಿ ಸಲ್ಲಿಕೆ ಮಾಡಲಾಗಿದೆ.
ಸಚಿವ ವಿ. ಸೋಮಣ್ಣ ಹೇಳಿಕೆ ಉಲ್ಲೇಖಿಸಿ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿದ್ದು, ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳ ಸಂಚಾರ ಶೀಘ್ರವೇ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಆದರೆ ಯಾವಾಗ ರೈಲು ಸಂಚಾರ ಆರಂಭ? ಎಂಬ ಕುರಿತು ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಸಂಸದ ಬಿ. ವೈ. ರಾಘವೇಂದ್ರ ಈಗಾಗಲೇ ಬೆಂಗಳೂರಿನ ಯಶವಂತಪುರ-ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ನೈಋತ್ಯ ರೈಲ್ವೆ ಕರ್ನಾಟಕದಲ್ಲಿ ಹೊಸ ವಂದೇ ಭಾರತ್ ರೈಲು ಮಾರ್ಗದ ಪಟ್ಟಿಯೊಂದನ್ನು ಮಾಡಿದೆ. ಅದರಲ್ಲಿಯೂ ಶಿವಮೊಗ್ಗ-ಬೆಂಗಳೂರು ಮಾರ್ಗವಿದೆ. ಈಗ ಶಿವಮೊಗ್ಗಕ್ಕೆ ರೈಲು ಸಂಚಾರ ಆರಂಭವಾಗುವ ಸೂಚನೆ ಸಿಕ್ಕಿದೆ.
ವಂದೇ ಭಾರತ್ ರೈಲು ಸಂಚಾರ ನಡೆಸಲು ರೈಲು ನಿರ್ವಹಣೆಗೆ ಮೂಲ ಸೌಕರ್ಯದ ಅಗತ್ಯವಿದೆ. ಶಿವಮೊಗ್ಗದಲ್ಲಿ ಈ ಮಾದರಿಯ ಸೌಲಭ್ಯವನ್ನು ನಿರ್ಮಾಣ ಮಾಡಲು ಈಗಾಗಲೇ ಸಂಸದರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಶಿವಮೊಗ್ಗ ನಗರದ ಹೊರವಲಯದ ಕೋಟೆಗಂಗೂರಿನಲ್ಲಿ ಕೋಚಿಂಗ್ ಡಿಪೋ ಕಾಮಗಾರಿ ನಡೆಯುತ್ತಿದೆ. ಈ ಡಿಪೋದಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಮೂಲ ಸೌಲಭ್ಯವನ್ನು ನಿರ್ಮಾಣ ಮಾಡಲಾಗುತ್ತದೆ.
ನೈಋತ್ಯ ರೈಲ್ವೆಗೆ ಕೆಲವು ದಿನಗಳ ಹಿಂದೆ 8 ವಂದೇ ಭಾರತ್ ರೈಲು ಬೋಗಿ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಯಾವ-ಯಾವ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸಬೇಕು? ಎಂದು ಇಲಾಖೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ. ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ರೈಲು ಸಂಚಾರ ನಡೆಸುವುದು ಖಚಿತವಾಗಿದೆ. ಉಳಿದ ಎರಡು ಮಾರ್ಗದ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.












Click it and Unblock the Notifications