ಸಿಎಂ ಜನ್ಮದಿನಕ್ಕೆ ಸ್ವಕ್ಷೇತ್ರದಲ್ಲಿ ವಿಶೇಷ ಆರೋಗ್ಯ ಶಿಬಿರ
ಶಿವಮೊಗ್ಗ, ಫೆಬ್ರವರಿ 20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 78ನೇ ಜನ್ಮ ದಿನದ ಪ್ರಯುಕ್ತ ವೀರಶೈವ ಕಲ್ಯಾಣ ಮಂದಿರದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
"ಪ್ರೇರಣಾ ಎಜುಕೇಷನಲ್ ಮತ್ತು ಸೋಷಿಯಲ್ ಟ್ರಸ್ಟ್, ಸಹ್ಯಾದ್ರಿ ನಾರಾಯಣ ಹೃದಯಾಲಯದ ಆಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿದ್ದು, ಫೆಬ್ರವರಿ 27ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಆರೋಗ್ಯ ಶಿಬಿರ ನಡೆಯಲಿದೆ" ಎಂದರು.
ಶಿವಮೊಗ್ಗ ಮಾತ್ರವಲ್ಲದೆ ಬೇರೆ ಜಿಲ್ಲೆಯವರೂ ಈ ಆರೋಗ್ಯ ಶಿಬಿರದಲ್ಲಿ ಭಾಗವಹಿಸಬಹುದು. ಬಾಪೂಜಿ ಸೇವಾ ಕೇಂದ್ರ ಹಾಗೂ ಶಿವಮೊಗ್ಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಒಂದು ಲಕ್ಷ ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸಲಾಗುವುದು. ಸರ್ಕಾರಕ್ಕೆ ನೀಡಲಿರುವ ಶುಲ್ಕವನ್ನು ಪ್ರೇರಣಾ ಎಜುಕೇಷನ್ ಟ್ರಸ್ಟ್ ಭರಿಸಲಿದೆ. ಫೆಬ್ರವರಿ 27, 28, 29ರಂದು ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸಲಾಗುತ್ತದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.

ಫೆಬ್ರವರಿ 24ರಂದು ಕಾರ್ಮಿಕ ಇಲಾಖೆಯಿಂದ ಉದ್ಯೋಗ ಮೇಳವನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ 9 ಗಂಟೆಗೆ ಉದ್ಯೋಗ ಮೇಳ ಆರಂಭಗೊಳ್ಳಲಿದ್ದು, ನೂರಾರು ಕಂಪನಿಗಳು ಇದರಲ್ಲಿ ಭಾಗಿಯಾಗಲಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಯೋಗ ಮೇಳ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.












Click it and Unblock the Notifications