ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ, ಯೋಜನೆ ವಿವರ
ಶಿವಮೊಗ್ಗ, ಜನವರಿ 20: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆಯನ್ನು ನೀಡಿದೆ. ಇದರಿಂದಾಗಿ ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಮೆಕ್ಕೆಜೋಳ ಉತ್ಪಾದನೆಗೆ ಉತ್ತೇಜನ ದೊರಕಲಿದೆ. ಈ ಯೋಜನೆ ಕುರಿತು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಾಹಿತಿಯನ್ನು ನೀಡಿದ್ದಾರೆ.
ಕೇಂದ್ರ ಸರ್ಕಾರ ಶಿವಮೊಗ್ಗದಲ್ಲಿ ಭಾರತೀಯ ಮೆಕ್ಕೆಜೋಳ ಸಂಶೋಧನಾ ಕೇಂದ್ರ ಸ್ಥಾಪನೆಗೆ ಒಪ್ಪಿಗೆಯನ್ನು ನೀಡಿದೆ. ಕೇಂದ್ರ ಕೃಷಿ ಖಾತೆ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಈ ಕುರಿತು ಸಂಸದರಿಗೆ ಪತ್ರವನ್ನು ಬರೆದು ಮಾಹಿತಿ ನೀಡಿದ್ದಾರೆ.

ಸಂಸದರ ಪೋಸ್ಟ್: ಈ ಕುರಿತು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. 'ಶಿವಮೊಗ್ಗಕ್ಕೆ ಮೆಕ್ಕೆಜೋಳ ಸಂಶೋಧನಾ ಕೇಂದ್ರ' ಎಂದು ಅವರು ಹೇಳಿದ್ದಾರೆ.
'ಶಿವಮೊಗ್ಗ ಜಿಲ್ಲೆಯಲ್ಲಿ ಕೇಂದ್ರದಿಂದ ಅನುಮತಿ ದೊರೆತಿದ್ದು, ನಗರದ ನವುಲೆಯ ಕೃಷಿ ವಿಶ್ವವಿದ್ಯಾಲಯದ 45 ಎಕರೆ ಜಾಗದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ' ಎಂದು ತಿಳಿಸಿದ್ದಾರೆ.
'ಜಿಲ್ಲೆಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಯಿಂದ ಮೆಕ್ಕೆಜೋಳ ಉತ್ಪಾದನೆಗೆ ಉತ್ತೇಜನ ದೊರಕಲಿದೆ. ಮೆಕ್ಕೆಜೋಳಕ್ಕೆ ರೋಗಗಳು ಹೆಚ್ಚುತ್ತಿವೆ. ಆದ್ದರಿಂದ, ಇದರ ಸಂಶೋಧನೆ ಕೈಗೊಳ್ಳಲು ಅನುಕೂಲ ಆಗಲಿದೆ, ಇಲ್ಲಿ ನುರಿತ ವಿಜ್ಞಾನಿಗಳ ತಂಡ ಕಾರ್ಯನಿರ್ವಹಿಸಲಿದೆ. ಇದರಿಂದ, ಮೌಲ್ಯವರ್ಧನೆ, ನಿರ್ವಹಣೆ ಕೇಂದ್ರದಿಂದ ಆಗಲಿದೆ' ಎಂದು ಸಂಸದರು ವಿವರಣೆ ನೀಡಿದ್ದಾರೆ.
ಸದ್ಯ ಪಂಜಾಬ್ ರಾಜ್ಯದ ಲೂಧಿಯಾನದಲ್ಲಿ ಈ ಮಾದರಿ ಕೇಂದ್ರವಿದೆ. ಇದೇ ಮಾದರಿಯ ಪ್ರಾದೇಶಿಕ ಕೇಂದ್ರ ಶಿವಮೊಗ್ಗದಲ್ಲಿ ಸ್ಥಾಪನೆಯಾಗಲಿದೆ. ಕರ್ನಾಟಕದಲ್ಲಿ ಶೇ 15ರಷ್ಟು ಮೆಕ್ಕೆಜೋಳ ಬೆಳೆಯಲಾಗುತ್ತದೆ.
ಈ ಹಿಂದೆಯೇ ಶಿವಮೊಗ್ಗಕ್ಕೆ ಮೆಕ್ಕೆಜೋಳ ಸಂಶೋಧನಾ ಕೇಂದ್ರ ಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ. ಈ ಕೇಂದ್ರದಿಂದ ರೈತರಿಗೆ ಮೌಲ್ಯಮಾಪನ, ನಿರ್ವಹಣೆ, ಹೊಸ ತಳಿಗಳ ಆವಿಷ್ಕಾರ, ರೋಗಗಳನ್ನು ಪತ್ತೆ ಹಚ್ಚಲು ಅನುಕೂಲವಾಗಲಿದೆ.
ಶಿವಮೊಗ್ಗ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಮೆಕ್ಕೆಜೋಳ ಬೆಳೆದ ರೈತರಿಗೆ ನೆರವಾಗಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು ರೈತರಿಂದ ಮೆಕ್ಕೆಜೋಳವನ್ನು ಖರೀದಿ ಮಾಡುತ್ತದೆ.
2024ರಲ್ಲಿ ಸುರಿದ ಮಳೆಯ ಕಾರಣ ಶಿವಮೊಗ್ಗ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಜಿಲ್ಲೆಯಲ್ಲಿ ಶಿಕಾರಿಪುರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಕಳೆದ ವರ್ಷ ವಾಡಿಕೆಗೂ ಅಧಿಕ ಮಳೆ ಸುರಿದ ಕಾರಣ ಮೆಕ್ಕೆಜೋಳದ ಬೆಳೆ ಹಾನಿಯಾಗಿತ್ತು.
ಶಿವಮೊಗ್ಗ ಜಿಲ್ಲೆಯಲ್ಲಿ ರೈತರು ರಾಸಾಯನಿಕಗಳ ಅಡ್ಡ ಪರಿಣಾಮದಿಂದಾಗಿ ಸಾವಯವ ಕೃಷಿಗೆ ವಾಪಸ್ ಆಗುತ್ತಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚೆಗೆ ರೈತರು ಭತ್ತ ಕಡಿಮೆ ಮಾಡಿ, ಮೆಕ್ಕೆಜೋಳ ಬೆಳೆಯಲು ಶುರು ಮಾಡಿದ್ದಾರೆ. ಅಡಿಕೆಯನ್ನು ಬೆಳೆಯುತ್ತಿದ್ದಾರೆ. ರೈತರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರಗಳು ಹೆಚ್ಚು ಗಮನಹರಿಸಬೇಕು ಎಂದು ಒತ್ತಾಯಿಸಲಾಗಿದೆ.












Click it and Unblock the Notifications