Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ವರ್ಷ, ಪ್ರಯಾಣಿಕರ ಸಂಖ್ಯೆ ಎಷ್ಟು

ಶಿವಮೊಗ್ಗ, ಫೆಬ್ರವರಿ 27: ಕರ್ನಾಟಕದ ಮಲೆನಾಡು ಭಾಗದ ಮೊದಲ ವಿಮಾನ ನಿಲ್ದಾಣವಾದ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಎರಡು ವರ್ಷಗಳು ಕಳೆದಿದೆ. ಪ್ರಧಾನಿ ನರೇಂದ್ರ ಮೋದಿ 27/2/2023ರಂದು ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದ್ದರು. ಶಿವಮೊಗ್ಗ ವಿಮಾನ ನಿಲ್ದಾಣ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸು. ಆದ್ದರಿಂದ ಅವರ ಜನ್ಮದಿನದಂದು ಅದನ್ನು ಲೋಕಾರ್ಪಣೆ ಮಾಡಲಾಗಿತ್ತು.

ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣವಿದೆ. ಬೆಂಗಳೂರು-ಶಿವಮೊಗ್ಗ ಸೇರಿದಂತೆ ವಿವಿಧ ನಗರಗಳಿಗೆ ವಿಮಾನಗಳು ಹಾರಾಟ ನಡೆಸುತ್ತಿವೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ನಿರ್ವಹಣೆ ಮಾಡುತ್ತಿರುವ ರಾಜ್ಯದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಶಿವಮೊಗ್ಗ ವಿಮಾನ ನಿಲ್ದಾಣ ಹೊಂದಿದೆ. ನಿಲ್ದಾಣವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ಕ್ಕೆ ವಹಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ.

Shivamogga Airport Completed Two Years Passengers Number Details

ಪ್ರಯಾಣಿಕರ ಸಂಖ್ಯೆ ಎಷ್ಟು?: ಕರ್ನಾಟಕದಲ್ಲಿರುವ ದೇಶಿಯ ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ಬಳಿಕ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆಯನ್ನು ಹೊಂದಿರುವ ವಿಮಾನ ನಿಲ್ದಾಣ ಎಂಬ ಕೀರ್ತಿಯನ್ನು ವಿವಮೊಗ್ಗ ವಿಮಾನ ನಿಲ್ದಾಣ ಪಡೆದಿದೆ. ಒಂದು ವರ್ಷದಲ್ಲಿ ವಿಮಾನ ನಿಲ್ದಾಣದಿಂದ 1,30,587 ಜನರು ಪ್ರಯಾಣ ಮಾಡಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್, ಇಂಡಿಗೋ ಸ್ಪೈಸ್ ಜೆಟ್ ಸಂಸ್ಥೆಗಳು ವಿಮಾನ ಸೇವೆಯನ್ನು ಒದಗಿಸುತ್ತಿವೆ. ಪ್ರತಿನಿತ್ಯ 6 ವಿಮಾನಗಳು 12 ಬಾರಿ ಬಂದು ಹೋಗುತ್ತವೆ. ಬೆಂಗಳೂರು, ಹೈದರಾಬಾದ್, ಗೋವಾ, ತಿರುಪತಿ ಮತ್ತು ಚೆನ್ನೈಗೆ ಶಿವಮೊಗ್ಗದಿಂದ ವಿಮಾನ ಸೇವೆ ಇದೆ. ಬೆಂಗಳೂರು-ಶಿವಮೊಗ್ಗ ಮತ್ತು ಶಿವಮೊಗ್ಗ-ಹೈದರಾಬಾದ್ ಮಾರ್ಗಕ್ಕೆ ಹೆಚ್ಚಿನ ಬೇಡಿಕೆ ಇದೆ.

ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನಗಳನ್ನು ಲ್ಯಾಂಡ್ ಮಾಡುವ ಕಾಮಗಾರಿ ಕೈಗೊಳ್ಳಲಾಗಿತ್ತು. ಅದನ್ನು ಈಗ ಪೂರ್ಣಗೊಳಿಸಲಾಗಿದೆ. ಆದರೆ ಎಎಐ ಅಧಿಕಾರಿಗಳ ತಂಡ ಅದನ್ನು ಪರಿಶೀಲನೆ ಮಾಡಿ ಒಪ್ಪಿಗೆ ನೀಡಿದ ಬಳಿಕ ಶಿವಮೊಗ್ಗಕ್ಕೆ ರಾತ್ರಿಯೂ ವಿಮಾನಗಳು ಆಗಮಿಸಬಹುದು. ಬಳಿಕ ಶಿವಮೊಗ್ಗ-ದೆಹಲಿ, ಶಿವಮೊಗ್ಗ-ಮುಂಬೈ ಮತ್ತು ಶಿವಮೊಗ್ಗ-ಇಂಧೋರ್ ನಡುವೆ ವಿಮಾನ ಸೇವೆ ಆರಂಭವಾಗುವ ನಿರೀಕ್ಷೆ ಇದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ವಿಮಾನ ನಿಲ್ದಾಣ ನಿರ್ವಹಣೆ ನೋಡಿಕೊಳ್ಳುತ್ತಿದೆ. 273 ಜನರಿಗೆ ಉದ್ಯೋಗ ಸಿಕ್ಕಿದೆ. ಇದುವರೆಗೂ ವಿಮಾನ ನಿಲ್ದಾಣ ನಿರ್ವಹಣೆ ಮಾಡಲು 8.5 ಕೋಟಿ ಖರ್ಚಾಗಿದ್ದು, 2.86 ಕೋಟಿ ಆದಾಯ ಬಂದಿದೆ.

ವಿವಿಧ ಮಾರ್ಗದಲ್ಲಿ ವಿಮಾನಗಳ ಹಾರಾಟ, ವಾಣಿಜ್ಯ ಸೇವೆಗಳು ಆರಂಭವಾದರೆ ಶಿವಮೊಗ್ಗ ವಿಮಾನ ನಿಲ್ದಾಣದ ಆದಾಯ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಈಗ ನಿರ್ವಹಣಾ ವೆಚ್ಚ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ವಿಮಾನ ನಿಲ್ದಾಣವನ್ನು ಕೇಂದ್ರಕ್ಕೆ ಹಸ್ತಾಂತರ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ.

ಶಿವಮೊಗ್ಗ ವಿಮಾನ ನಿಲ್ದಾಣದ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್ ಪೀಕ್ ಅವರ್‌ನಲ್ಲಿ ಸುಮಾರು 300 ಪ್ರಯಾಣಿಕರನ್ನು ನಿರ್ವಹಣೆ ಮಾಡುವ ರೀತಿ ವಿನ್ಯಾಸಗೊಳಿಸಲಾಗಿದೆ. ರನ್‌ವೇ, ಏಪ್ರನ್, ಐಸೋಲೇಶನ್ ಬೇ, ಟ್ಯಾಕ್ಸಿವೇ ಮತ್ತು ಇತರ ಮೂಲಸೌಕರ್ಯ ಸೌಲಭ್ಯಗಳಿವೆ. ಏರ್‌ಬಸ್-320 ಮಾದರಿಯ ವಿಮಾನಗಳ ಕಾರ್ಯಾಚರಣೆಗಾಗಿ ರನ್‌ ವೇ ವಿನ್ಯಾಸಗೊಳಿಸಲಾಗಿದೆ. ವಿಮಾನ ನಿಲ್ದಾಣವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ವಿವಿಧ ನಗರಕ್ಕೆ ವಿಮಾನ ಹಾರಾಟ ಆರಂಭವಾದರೆ ಶಿವಮೊಗ್ಗ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.

ವಿಮಾನ ನಿಲ್ದಾಣದ ನಿರ್ವಹಣೆಯನ್ನು ಹಸ್ತಾಂತರ ಮಾಡುವ ಕುರಿತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದಾರೆ, "ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಗುತ್ತಿಗೆ ಆಧಾರದ ಮೇಲೆ ಎಎಐಗೆ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ನಿರ್ವಹಣೆಗೆ ಅಧಿಕ ವೆಚ್ಚ ಮಾಡಲಾಗಿದೆ. ಆದರೆ ಕೇಂದ್ರಕ್ಕೆ ವಹಿಸುವ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+