Sanjeevini Scheme: ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾದ 'ಸಂಜೀವಿನಿ'
ಶಿವಮೊಗ್ಗ, ಡಿಸೆಂಬರ್ 07: ಕರ್ನಾಟಕ ಸರ್ಕಾರ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು 'ಸಂಜೀವಿನಿ' ಯೋಜನೆಯನ್ನು ಜಾರಿಗೆ ತಂದಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿಯೊಂದಿಗೆ ಸೇರಿಕೊಂಡು ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಸಹಾಯಕವಾಗಿದೆ. ಶಿವಮೊಗ್ಗದಲ್ಲಿ ಯೋಜನೆ ಹೇಗೆ ಯಶಸ್ವಿಯಾಗಿದೆ? ಎಂಬ ವರದಿ ಇಲ್ಲಿದೆ.
ಶಿವಮೊಗ್ಗ ಸಂಸ್ಕೃತಿ, ಸಾಂಪ್ರದಾಯಗಳಿಗೆ ಪ್ರಸಿದ್ಧಿಯಾಗಿದೆ. ಮಲೆನಾಡಿನ ಸಾಂಪ್ರದಾಯಿಕ ಕರಕುಶಲತೆಯಾದ ಮಣ್ಣಿನ ಅಲಂಕಾರಿಕ ವಸ್ತು ತಯಾರಿಕೆಗೆ ಜೀವ ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು 'ಸಂಜೀವಿನಿ' ಯೋಜನೆ ಜಿಲ್ಲೆಯಲ್ಲಿ ಸಹಾಯಕವಾಗಿದೆ. ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ 13 ಜನ ಮಹಿಳೆಯರ ಗುಂಪು ಪ್ರಗತಿ ಸ್ವಸಹಾಯ ಸಂಘ ಮತ್ತು ಹೊಂಬೆಳಕು ಸಂಜೀವಿನಿ ಒಕ್ಕೂಟ ಸೇರಿ ಗುಡಿ ಕೈಗಾರಿಕೆ ಮೂಲಕ ಮಣ್ಣಿನಿಂದ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.

ಮಹಿಳೆಯರು ಕ್ರಿಯಾಶೀಲತೆಯಿಂದ ತಯಾರಿಸಿದ ಸಾಂಪ್ರದಾಯಿಕ ದೀಪಗಳು, ಹಸೆ-ಚಿತ್ತಾರಗಳು, ಆಭರಣಗಳು, ಸಾಗರದ ಕುಕೀಸ್‌ಗಳು ಹಾಗೂ ಮಲೆನಾಡಿನ ಸಿಹಿತಿಂಡಿಗಳು ಸೇರಿದಂತೆ ಇನ್ನೂ ಅನೇಕ ವಿವಿಧ ಮಲೆನಾಡಿನ ಗೃಹೋತ್ಪನ್ನ ಸಾಮಗ್ರಿಗಳ ಮಾರಾಟವನ್ನು ಈಗ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ ರಾಜ್ಯದಾದ್ಯಂತ ವಿಸ್ತರಣೆ ಮಾಡಿದ್ದಾರೆ.
ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ: ಈ ಗುಡಿ ಕೈಗಾರಿಕೆಯ ಮುಖ್ಯ ಆಧಾರಸ್ತಂಭ ಜ್ಯೋತಿ ಶಿವರಾಜ್. ಕೆನರಾ ಬ್ಯಾಂಕ್ ನೆರವು, ಸರ್ಕಾರ ನೀಡುವ 6 ತಿಂಗಳ ಉಚಿತ ಕರಕುಶಲ ಗುಡಿ ಕೈಗಾರಿಕೆ ತರಬೇತಿಯನ್ನು ಪಡೆದುಕೊಂಡು ತಮ್ಮ ಗ್ರಾಮವಾದ ಹಾರನಹಳ್ಳಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣಿನ ವಸ್ತುಗಳನ್ನು ತಯಾರಿಸಲು ಅವರು ಆರಂಭಿಸಿದರು. ಈಗ ವರ್ಷಕ್ಕೆ 6 ಲಕ್ಷಕ್ಕೂ ಅಧಿಕ ಆದಾಯವನ್ನು ಗಳಿಸುತ್ತಿದ್ದಾರೆ. ಇವರಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ 2023ರ ಮಹಿಳಾ ಸಾಧಕಿ ಪ್ರಶಸ್ತಿ ಹಾಗೂ ಗುಡಿ ಕೈಗಾರಿಕೆಯಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿ ಸಹ ಲಭಿಸಿದೆ.
ಮಹಿಳೆಯರು ಸ್ವತಃ ಕೈಯಿಂದ ಮಣ್ಣಿನಿಂದ ಮನೆಯಲ್ಲಿ ಸಿದ್ದಪಡಿಸಿದ ಮಣ್ಣಿನ ದೀಪ, ಮ್ಯಾಜಿಕ್ ದೀಪ, ಲಿಂಗು, ಗಣೇಶ ದೀಪ, ತುಳಸಿ ದೀಪ, ಬೋಟಿಂಗ್, ಹೂ ವಿನ್ಯಾಸದ ದೀಪ, ಅಷ್ಟಲಕ್ಷ್ಮಿಯರ ದೀಪ, ಪಂಚ ದೀಪ, ಹಂಸ ದೀಪ, ವಾಸ್ತು ದೀಪ, ಗೃಹ ಅಲಂಕಾರಿಕ ದೀಪ ಹಾಗೂ ಗೊಂಬೆ, ಮನೆ ಆಲಂಕಾರಿಕ ವಸ್ತುಗಳನ್ನು ತಯಾರು ಮಾಡುತ್ತಾರೆ.
ಮೊದಲು ಮಹಿಳೆಯರು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಗ್ರಾಮದ ಇತರೆ ಮಹಿಳೆಯರನ್ನು ಜೊತೆಗೂಡಿಸಿಕೊಂಡು ಗುಡಿ ಕೈಗಾರಿಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಲು ಪ್ರಯತ್ನಿಸಿದರು. ಗ್ರಾಮ ಪಂಚಾಯತಿ ವತಿಯಿಂದ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿಯಲ್ಲಿ ಪ್ರಾಥಮಿಕವಾಗಿ ರೂ. 50 ಸಾವಿರಗಳ ಸಾಲವನ್ನು ಪಡೆದುಕೊಂಡು ಕರಕುಶಲ ಕಲೆಗೆ ಬೇಕಾದ ಮಣ್ಣನ್ನು ಹದಗೊಳಿಸುವ ಯಂತ್ರವನ್ನು ಪಡೆದುಕೊಂಡರು. ನಂತರ ಇದೇ ಯೋಜನೆಯಡಿ ರೂ. 1.50 ಲಕ್ಷ ಸಾಲವನ್ನು ಪಡೆಕೊಂಡು ಗೊಂಬೆಗಳನ್ನು ಹಾಗೂ ಮಣ್ಣಿನ ವಿವಿಧ ಕರಕುಶಲ ವಸ್ತುಗಳನ್ನು ಸಿದ್ದಪಡಿಸಲು ಸಹಕಾರಿಯಾಗುವ ಆಧುನಿಕ ಯಂತ್ರವನ್ನು ಖರೀದಿಸಿದರು.
ಜಿಲ್ಲಾ ಪಂಚಾಯಿತಿ ಈ ಗುಡಿ ಕೈಗಾರಿಕೆಯನ್ನು ಗುರುತಿಸಿ ರಾಷ್ಟ್ರಮಟ್ಟದಲ್ಲಿ ಕರಕುಶಲ ಕಲೆಗೆ ಮಾನ್ಯತೆ ದೊರೆಯುವಂತೆ ಮಾಡಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಗುಡಿ ಕೈಗಾರಿಕೆ ವಸ್ತುಗಳ ಮಾರಾಟ ಮಳಿಗೆ ತೆರೆದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 2 ನಿಮಿಷಗಳ ಕಾಲ ಕರಕುಶಲ ಗುಡಿ ಕೈಗಾರಿಕೆ ಕುರಿತು ಚರ್ಚಿಸಲು ಅವಕಾಶವನ್ನು ನೀಡಲಾಗಿತ್ತು.
ಎನ್.ಆರ್.ಎಲ್.ಎಂ ಯೋಜನೆಯ ಸಂಜೀವಿನಿ ಕಾರ್ಯಕ್ರಮದಡಿ ರಾಜ್ಯಾದ್ಯಂತ ವಿವಿಧ ಸಭೆ ಸಮಾರಂಭ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಮತ್ತು ಮಾರಾಟವನ್ನು ಮಾಡಲು ಸಹಕರಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಪಿಎಂ-ವಿಶ್ವಕರ್ಮ ಯೋಜನೆ, ಲಕ್‌ಪತಿ ದೀದಿ ಯೋಜನೆಗಳಿಗೆ ಈ ಮಹಿಳಾ ಸಂಘ ಆಯ್ಕೆಯಾಗಿದ್ದು 2023ನೇ ಸಾಲಿನಲ್ಲಿ ನಡೆದ ರಾಷ್ಟ್ರಮಟ್ಟದ ವಸ್ತುಪ್ರದರ್ಶನದಲ್ಲಿಯೂ ಭಾಗವಹಿಸಿದ್ದಾರೆ.
ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಜ್ಯೋತಿಯವರು ತಯಾರಿಸುವ ಮ್ಯಾಜಿಕ್ ದೀಪದ ಹಾಗೂ ಮಣ್ಣಿನ ಕರಕುಶಲ ವಸ್ತುಗಳ ಕುರಿತು ಮೋದಿ ಅವರು ಉಲ್ಲೇಖಿಸಿದ್ದು ಮಹಿಳೆಯರ ಸ್ವಾವಲಂಬನೆ ಜೀವನದ ಕುರಿತು ಮಾತನಾಡಿದ್ದಾರೆ.
ದೀಪಾವಳಿ ಹಬ್ಬದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಮಲೆನಾಡಿನ ಕರೆಕುಶಲ ವಸ್ತುಗಳ ತಯಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಸಚಿವರು, ಜನಪ್ರತಿನಿಧಿಗಳಿಗೆ ಪ್ರಗತಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ವಿಶೇಷ ದೀಪಗಳು ಹಾಗೂ ಗೃಹ ಉತ್ಪನ್ನಗಳನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಉಡುಗೊರೆಯಾಗಿ ನೀಡಿ, ಮಹಿಳೆಯರ ಗುಡಿ ಕೈಗಾರಿಕೆ ಕೌಶಲ್ಯವನ್ನು ಉತ್ತೇಜಿಸಲು ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಜ್ಯೋತಿ ಶಿವರಾಜ್, "ಮಹಿಳೆಯರು ತಮ್ಮ ಮನೆ ಕೆಲಸ ಮುಗಿದ ನಂತರ, ಆರ್ಥಿಕವಾಗಿ ಸ್ವತಂತ್ರರಾಗಲು ಗುಡಿ ಕೈಗಾರಿಕೆಯಂತಹ ಕೌಶಲ್ಯ ರೂಢಿಸಿಕೊಂಡಿದ್ದೇವೆ. ಜಿಲ್ಲಾ ಪಂಚಾಯತಿ ವತಿಯಿಂದ ನೀಡುವ ಯೋಜನೆಗಳ ಸಹಕಾರದಿಂದ ಮಣ್ಣಿನ ಕರಕುಶಲ ತಯಾರಿಕೆಯಲ್ಲಿ ಉತ್ತಮ ಆದಾಯವನ್ನು ಗಳಿಸುತ್ತಿದ್ದೇವೆ. ರಾಷ್ಟ್ರ ಮಟ್ಟದಲ್ಲಿ ನಾವು ತಯಾರಿಸುವ ವಸ್ತುಗಳಿಗೆ ಉತ್ತಮ ಬೇಡಿಕೆ ಇದ್ದು, ಸರ್ಕಾರಿ ಯೋಜನೆಗಳು ಅತ್ಯಂತ ಸಹಕಾರಿಯಾಗಿವೆ" ಎಂದು ಹೇಳಿದ್ದಾರೆ.
ಬರಹ: ರಘು ಆರ್, ಅಪ್ರೆಂಟಿಸ್, ವಾರ್ತಾ ಇಲಾಖೆ












Click it and Unblock the Notifications