ಕೆ. ಎಸ್. ಈಶ್ವರಪ್ಪಗೆ 2013ರ ಚುನಾವಣೆ ನೆನಪಿಸಿದ ಜನರು!

ಶಿವಮೊಗ್ಗ, ಮಾರ್ಚ್ 19: ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಹಾವೇರಿ ಕ್ಷೇತ್ರದ ಟಿಕೆಟ್ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ಈಶ್ವರಪ್ಪ ಜೊತೆ ಹೈಕಮಾಂಡ್ ನಾಯಕರು ನಡೆಸಿದ ಸಂಧಾನ ವಿಫಲವಾಗಿದೆ. ತಾವು ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳುವ ಮೂಲಕ ಈಶ್ವರಪ್ಪ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಈಗಾಗಲೇ ಶಿವಮೊಗ್ಗಕ್ಕೆ ಹಾಲಿ ಸಂಸದ ಬಿ. ವೈ. ರಾಘವೇಂದ್ರ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿದೆ.

Remember 2013 Election People Suggestion For KS Eshwarappa

ಶಿವಮೊಗ್ಗ ಲೋಕಸಭೆ ಕ್ಷೇತ್ರದ ಚುನಾವಣಾ ಚಿತ್ರಣ ಬದಲಿಸಿದ್ದಾರೆ ಕೆ. ಎಸ್. ಈಶ್ವರಪ್ಪ. ಬಿಜೆಪಿಯಿಂದ ಬಿ. ವೈ. ರಾಘವೇಂದ್ರ, ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿಗಳು. ಈ ನಡುವೆ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದಾರೆ. ಮೇ 7ರಂದು ಶಿವಮೊಗ್ಗ ಕ್ಷೇತ್ರದ ಮತದಾನ ನಡೆಯಲಿದೆ. ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ.

2013ರ ಚುನಾವಣೆ ನೆನಪು: ಸೋಮವಾರ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಆದರೆ ಶಿವಮೊಗ್ಗ ನಗರದ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ ನಡೆದ ಸಮಾವೇಶಕ್ಕೆ ಈಶ್ವರಪ್ಪ ಗೈರಾಗುವ ಮೂಲಕ ತಮ್ಮ ಸಿಟ್ಟು ಶವನವಾಗಿಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ.

ಅಭಿಮಾನಿಗಳ ಸಭೆ, ಮಠ, ದೇವಾಲಯಗಳಿಗೆ ಭೇಟಿ ಇವುಗಳಲ್ಲಿ ಈಶ್ವರಪ್ಪ ಬ್ಯುಸಿಯಾಗಿದ್ದಾರೆ. ಆದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುನ್ನ 2013ರ ಚುನಾವಣೆಯ ನೆನಪು ಮಾಡಿಕೊಳ್ಳಿ ಎಂದು ಜನರು ಈಶ್ವರಪ್ಪಗೆ ಸಲಹೆ ನೀಡಿದ್ದಾರೆ. ಕೆ. ಎಸ್. ಈಶ್ವರಪ್ಪ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಈಶ್ವರಪ್ಪ ಎಂದು ರಾಜಕೀಯ ಮಾಡಿದವರು ಅವರು.

ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗಲೂ ಈಶ್ವರಪ್ಪ ಅವರ ಜೊತೆ ಹೋಗಿಲ್ಲ. ಇಷ್ಟು ದಿನ ಯಡಿಯೂರಪ್ಪ, ಬಿಜೆಪಿ ಹೆಸರಿನ ಬಲದಿಂದಲೇ ಗೆಲ್ಲುತ್ತಾ ಬಂದ ಈಶ್ವರಪ್ಪಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲ್ಲುವುದು ಅಷ್ಟು ಸುಲಭವಲ್ಲ ಎಂಬುದು ತಿಳಿದಿದೆ.

2013ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿದರು. ಶಿಕಾರಿಪುರದಿಂದ ಅವರು ಕಣಕ್ಕಿಳಿದು ಗೆದ್ದರು. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕೆಜೆಪಿಯಿಂದ ಈಶ್ವರಪ್ಪ ಎದುರಾಳಿಯಾಗಿ ಎಸ್. ರುದ್ರೇಗೌಡರನ್ನು ಯಡಿಯೂರಪ್ಪ ಕಣಕ್ಕಿಳಿಸಿದರು.

ಯಡಿಯೂರಪ್ಪ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಪ್ರಚಾರ ನಡೆಸಿದ ಈಶ್ವರಪ್ಪ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ಕುಸಿದು ಬಿದ್ದರು. ಬಿಜೆಪಿ ಮತ್ತು ಕೆಜೆಪಿ ಮತಗಳು ಒಡೆದವು. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ. ಬಿ. ಪ್ರಸನ್ನ ಕುಮಾರ್ 39,355 ಮತಗಳನ್ನು ಪಡೆದು ಗೆದ್ದರು.

ಕೆಜೆಪಿಯ ಎಸ್. ರುದ್ರೇಗೌಡ 39,077 ಮತಗಳನ್ನು ಪಡೆದು ಕೇವಲ 278 ಮತಗಳ ಅಂತದಲ್ಲಿ ಸೋತರು. ಬಿಜೆಪಿಯ ಕೆ. ಎಸ್‌. ಈಶ್ವರಪ್ಪ 33,462 ಮತಗಳನ್ನು ಪಡೆದು ಮೂರನೇ ಸ್ಥಾನಗಳಿಸಿದರು. ಈ ಚುನಾವಣೆ ಯಡಿಯೂರಪ್ಪ ಎದುರು ಹಾಕಿಕೊಂಡರೆ ಏನಾಗುತ್ತದೆ? ಎಂದು ಈಶ್ವರಪ್ಪಗೆ ದೊಡ್ಡ ಪಾಠವಾಯಿತು.

ಈಗ ಕಾಲಚಕ್ರ ತಿರುಗಿದೆ. ಈಶ್ವರಪ್ಪ, ಯಡಿಯೂರಪ್ಪ, ಎಸ್. ರುದ್ರೇಗೌಡ ಎಲ್ಲರೂ ಬಿಜೆಪಿಯಲ್ಲಿದ್ದಾರೆ. ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ಶಿವಮೊಗ್ಗದ ಹಾಲಿ ಸಂಸದರು. ಈ ಬಾರಿಯ ಚುನಾವಣೆಗೆ ಅವರೇ ಅಭ್ಯರ್ಥಿ. ಈಗ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಈಶ್ವರಪ್ಪಗೆ ಜನ 2013ರ ಚುನಾವಣೆ ನೆನಪು ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಪುತ್ರ ಕಾಂತೇಶ್‌ಗೆ ಹಾವೇರಿ ಕ್ಷೇತ್ರದ ಟಿಕೆಟ್ ಕೈ ತಪ್ಪಲು ಯಡಿಯೂರಪ್ಪ, ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕಾರಣ ಎಂದು ಈಶ್ವರಪ್ಪ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿದ್ದಾರೆ.

ಭಾನುವಾರ ಕೆ. ಎಸ್. ಈಶ್ವರಪ್ಪ ನಿವಾಸಕ್ಕೆ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಇತರ ನಾಯಕರ ಜೊತೆ ಭೇಟಿ ನೀಡಿದ್ದರು. ಕಾಂತೇಶ್‌ರನ್ನು ಎಂಎಲ್‌ಸಿ ಮಾಡುವ ವರಿಷ್ಠರ ಭರವಸೆಯನ್ನು ತಲುಪಿಸಿ ಬಂಡಾಯ ಶಮನಕ್ಕೆ ಮುಂದಾಗಿದ್ದರು. ಆದರೆ ಈ ಸಂಧಾನ ಸಭೆ ಮುರಿದುಬಿದ್ದಿತ್ತು.

ಬಿಜೆಪಿ ನಾಯಕರ ಪ್ರಕಾರ ಈಶ್ವರಪ್ಪ ಮನವೊಲಿಕೆ ಮಾಡುವ ಕಾರ್ಯ ಇನ್ನೂ ನಡೆಯುತ್ತಿದೆ. ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ. ಆದರೆ ಸ್ಪರ್ಧೆ ಮಾಡಿ ಗೆದ್ದು, ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗುತ್ತೇನೆ ಎಂದು ಈಶ್ವರಪ್ಪ ಘೋಷಣೆ ಮಾಡಿದ್ದಾರೆ.

ಒಮ್ಮೆ ಯಡಿಯೂರಪ್ಪ ಎದುರು ಹಾಕಿಕೊಂಡು 3ನೇ ಸ್ಥಾನಕ್ಕೆ ಕುಸಿದಿದ್ದ ಈಶ್ವರಪ್ಪ ಈ ಬಾರಿ ಯಡಿಯೂರಪ್ಪ, ಬಿಜೆಪಿ, ಬಿ. ವೈ. ವಿಜಯೇಂದ್ರ ಎದುರು ಹಾಕಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆಲ್ಲುವುದು ಸುಲಭದ ಮಾತೇ? ಎಂದು ಜನ ಕೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+