ಹವಾಮಾನಾಧಾರಿತ ಬೆಳೆ ವಿಮೆ ನೊಂದಣಿಗೆ ಅವಕಾಶ; ಕೊನೆ ದಿನ ಯಾವುದು?
ಶಿವಮೊಗ್ಗ, ಜುಲೈ. 26: ತೋಟಗಾರಿಕೆ ಇಲಾಖೆಯಿಂದ ಮರು ವಿನ್ಯಾಸಗೊಳಿಸಲಾದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ವಿಮೆ ನೋಂದಣಿಗೆ ಸಂಬಂಧಿಸಿದಂತೆ ಹೊಸ ಅಪ್‌ಡೇಟ್ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ರೈತರೆ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಇತ್ತೀಚೆಗೆ ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಮತ್ತು ವಿಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಭೆ ನಡೆಸಿದ್ದಾರೆ. ಈ ವೇಳೆ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಬರುವ ಜಿಲ್ಲೆಯ ಬೆಳೆಗಳಾದ ಅಡಿಕೆ, ಮಾವು, ಕಾಳು ಮೆಣಸು ಮತ್ತು ಶುಂಠಿ ಬೆಳೆಯನ್ನು ಬೆಳೆದಂತಹ, ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಸಂರಕ್ಷಣೆ ತಂತ್ರಾಂಶದಲ್ಲಿ ನೊಂದಾಯಿಸಲು ಜುಲೈ 31 ರವರೆಗೆ ಅವಕಾಶ ಕಲ್ಪಿಸಲಾಗಿರುತ್ತದೆ.

ವಿಮೆ ನೊಂದಣಿ ಮಾಡುವ ಸಂದರ್ಭದಲ್ಲಿ ರೈತರು ಬೆಳೆದಿರುವಂತಹ ನೊಂದಾಯಿತ ಬೆಳೆಗಳು ಸಂರಕ್ಷಣೆ ತಂತ್ರಾಂಶದಲ್ಲಿ ಕಂಡು ಬಾರದ ಹಿನ್ನಲೆಯಲ್ಲಿ ಹಲವಾರು ರೈತರು ಹವಾಮಾನಾಧಾರಿತ ಬೆಳೆ ಬೆಳೆ ವಿಮೆ ಯೋಜನೆಯಡಿ ನೊಂದಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈಗ ಮತ್ತೆ ವಿನ್ಯಾಸಗೊಳಿಸಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಬೆಳೆ ಸಮೀಕ್ಷೆ ಪ್ರಕಾರ ನೊಂದಾಯಿತ ಬೆಳೆ ಬಂದರೆ ಅಥವಾ ಕನಿಷ್ಟ ಒಂದು ವರ್ಷದಲ್ಲಿಯಾದರು ಬೆಳೆ ಸಮೀಕ್ಷೆಯಲ್ಲಿ ನೊಂದಾಯಿತ ಬೆಳೆ ಕಂಡು ಬಂದರೆ ಅಂತಹ ಪ್ರಕರಣಗಳನ್ನು ಪರಿಗಣಿಸಿ ಸಂರಕ್ಷಣೆ ತಂತ್ರಾಂಶದಲ್ಲಿ ನೋಂದಣಿ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸುತ್ತಾ, ಜಿಲ್ಲೆಯ ರೈತರು ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬೆಳೆ ಸಮೀಕ್ಷೆ: ರೈತರಿಗೆ ಒಂದು ಸುವರ್ಣಾವಕಾಶ
ರೈತರೇ ತಮ್ಮ ಜಮೀನುಗಳಲ್ಲಿ ಮೊಬೈಲ್ ಆಪ್ ಮೂಲಕ ರೈತರ ಸರ್ವೇ ನಂಬರ್ ವಾರು, ಹಿಸ್ಸಾವಾರು ಬೆಳೆ ವಿವರ ದಾಖಲಿಸುವ, ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ 'ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ 2024-25'ರಲ್ಲಿ ಅಪ್‌ಲೋಡ್ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ತಾಲ್ಲೂಕು ಆಡಳಿತ ನೇಮಿಸಿರುವ ತರಬೇತಿ ಹೊಂದಿದ ಖಾಸಗಿ ನಿವಾಸಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಹಾಗೂ ಬೃಹತ್ ನೀರಾವರಿ ಇಲಾಖೆಗಳ ಸಿಬ್ಬಂದಿ ಬೆಳೆ ವಿವರ ದಾಖಲಿಸಲು ರೈತರಿಗೆ ಮಾಹಿತಿ ನೀಡುತ್ತಾರೆ. ಬೆಳೆ ವಿವರ ದಾಖಲಿಸದ ರೈತರ ತಾಕುಗಳನ್ನು ನಂತರ ತಾಲ್ಲೂಕು ಆಡಳಿತ ನೇಮಿಸಿರುವ ತರಬೇತಿ ಹೊಂದಿದ ಖಾಸಗಿ ನಿವಾಸಿಗಳಿಂದ ಸಮೀಕ್ಷೆ ಆಗಸ್ಟ್ 15 ರಿಂದ ಸೆಪ್ಟೆಂಬರ್ 31 ರವರೆಗೆ ಮಾಡಿಸಲಾಗುವುದು.
ಹೀಗೆ ಸಂಗ್ರಹಿಸಿದ ಬೆಳೆ ವಿವರಗಳು ಪಹಣಿಯಲ್ಲಿ ದಾಖಲಾಗುವುದರ ಜೊತೆಗೆ ಸರ್ಕಾರದ ಪ್ರಮುಖ ಯೋಜನೆಗಳಾದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಪ್ರಕೃತಿ ವಿಕೋಪದಡಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ಪರಿಹಾರ ವಿತರಿಸಲು, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಮತ್ತು ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಕಂದಾಯ ಇಲಾಖಾ ಅಧಿಕಾರಿಗಳು ಬೆಳೆ ಸಮೀಕ್ಷೆಯ ಮೇಲ್ವಿಚಾರಕರಾಗಿ ರೈತರು ಅಥವಾ ಖಾಸಗಿ ನಿವಾಸಿಗಳು ದಾಖಲಿಸಿದ ಬೆಳೆ ವಿವರಗಳನ್ನು ಪರಿಶೀಲಿಸಿ ದೃಢೀಕರಿಸುವರು.
ಬೆಳೆ ಸಮೀಕ್ಷೆಯು ಕೃಷಿ ಇಲಾಖೆಯ ಮುಖಾಂತರ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಜರುಗುವುದು. ಬೆಳೆ ಸಮೀಕ್ಷೆ ವಿವರಗಳ ಕುರಿತು ಆಕ್ಷೇಪಣೆಗಳಿದ್ದರೆ ರೈತರು 'beledarshak' ಆ್ಯಪ್ ಮೂಲಕ ಅಥವಾ ಖುದ್ದಾಗಿ ಕೃಷಿ, ತೋಟಗಾರಿಕೆ ಅಥವಾ ತಾಲ್ಲೂಕು ತಹಶೀಲ್ದಾರ್‌ರವರ ಕಚೇರಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಬಹುದಾಗಿದೆ. ರೈತರು ಆಕ್ಷೇಪಣೆಗಳನ್ನು ಸಲ್ಲಿಸಲು ಅಕ್ಟೋಬರ್ 15 ರವರೆಗೆ ಸಮಯವಿರುತ್ತದೆ.












Click it and Unblock the Notifications