ಶಿವಮೊಗ್ಗ: ಮಳೆ ಅಬ್ಬರ, ನೀರಿನಲ್ಲಿ ಮುಳುಗಿದ ಬೆಳೆ, ರೈತ ಕಂಗಾಲು

ಶಿವಮೊಗ್ಗ, ಜುಲೈ 21: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಹಳ್ಳ, ನದಿಗಳು ಉಕ್ಕಿ ಹರಿಯುತ್ತಿದ್ದು, ವಿವಿಧ ಪ್ರದೇಶದಲ್ಲಿ ಬೆಳೆಗಳು ಜಲಾವೃತವಾಗಿವೆ. ತುಂಗಾ, ವರದಾನದಿ ಪ್ರವಾಹದಲ್ಲಿ ಬೆಳೆಗಳು ನೀರು ಪಾಲಾಗಿವೆ. ಮಳೆ ಕಡಿಮೆಯಾಗಿ ನೀರು ಇಳಿದರೆ ಸಾಕು ಎಂದು ಜನರು ಪ್ರಾರ್ಥಿಸುವಂತೆ ಆಗಿದೆ.

ಸಾಗರ ತಾಲೂಕಿನ ತಟ್ಟೆಗುಂಡಿ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಉಕ್ಕಿ ಹರಿಯುತ್ತಿರುವ ವರದಾನದಿ, ಮಾವಿನ ಹೊಳೆ ಹಳ್ಳದಿಂದಾಗಿ ಸುಮಾರು 500 ಎಕರೆ ಭತ್ತದ ಗದ್ದೆ ಜಲಾವೃತವಾಗಿದೆ. ಅಡಿಕೆ, ಬಾಳೆ ತೋಟ, ಶುಂಠಿ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆ ಜಲಾವೃತಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಲಾವೃತದ ಜಮೀನು ಕಂಡು ರೈತರು ಕಣ್ಣೀರಿಡುತ್ತಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Rain Flood Damage Of Crops Across Shivamogga

ಸಚಿವರ ಪರಿಶೀಲನೆ: ಶಿವಮೊಗ್ಗ ಜಿಲ್ಲೆಯ ನೆರೆಪೀಡಿತ ಪ್ರದೇಶಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ, ಪರಿಶೀಲನೆ ನಡೆಸಿದರು. ಸಾಗರ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾಗರ ತಾಲೂಕಿನ ತಟ್ಟೆಗುಂಡಿ, ಶುಂಠಿಕೊಪ್ಪ ಗ್ರಾಮದಲ್ಲಿ ನೀರಿನಿಂದ ಹಾನಿ ಆಗಿರುವ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರ ಬಳಿ ರೈತರು ಅಳಲು ತೋಡಿಕೊಂಡರು. ಸಚಿವರ ಜೊತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, "ಎರಡು ದಿನದಿಂದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೇನೆ. ನನ್ನ ಕ್ಷೇತ್ರದಲ್ಲೂ ಸಾಕಷ್ಟು ಹಾನಿಯಾಗಿದೆ. ಜನರಿಗೆ ನಾನು ಮನವಿ ಮಾಡುತ್ತೇನೆ. ಸ್ವಲ್ಪ ಜವಾಬ್ದಾರಿಯಿಂದ ಇರಬೇಕು. ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಕ್ರಮ ಕೈಗೊಳ್ಳಿ" ಎಂದರು.

"ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದೇನೆ. ಕೆಲವು ಮನೆ ಅನಧಿಕೃತವಾಗಿ ಕಟ್ಟಿರುತ್ತಾರೆ. ಇದರ ಬಗ್ಗೆ ರಾಜ್ಯ ಮಟ್ಟದಲ್ಲಿ ಕಂದಾಯ ಸಚಿವರ ಜೊತೆ ಚರ್ಚೆ ಮಾಡಬೇಕಿದೆ. ಈ ಬಗ್ಗೆ ಶಾಶ್ವತ ಪರಿಹಾರಕ್ಕೆ ಚರ್ಚೆ ಆಗಬೇಕಿದೆ. ವರದಾ ನದಿಯಿಂದ ಸಾಕಷ್ಟು ಹಾನಿಯಾಗಿದೆ. ಬೆಳೆ ನೀರು ಪಾಲಾಗಿವೆ, ರೈತರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುತ್ತೇನೆ" ಎಂದು ಭರವಸೆ ನೀಡಿದರು.

"ಮಳೆ ಆಗಬೇಕು, ಕಳೆದ ಬಾರಿ ಮಳೆ ಕೊರತೆ ಎದುರಾಗಿತ್ತು. ಮಳೆ ಎದುರಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಅಧಿಕಾರಿಗಳು ಅಲರ್ಟ್ ಆಗಿದ್ದಾರೆ, ಮಳೆಯಿಂದ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮನೆ ಬಿದ್ದವರಿಗೆ ಹೊಸ ಮನೆ ಕಟ್ಟಿಸಿಕೊಡುವ ಕೆಲಸ ಮಾಡುತ್ತೇವೆ" ಎಂದು ಹೇಳಿದರು.

"ಈಗ 1 ಲಕ್ಷದ 20 ಸಾವಿರ ಹಣ ನೀಡುತ್ತೇವೆ. ಮನೆ ಕಳೆದುಕೊಂಡ ಜನರ ಜೊತೆ ಸರ್ಕಾರ ನಿಲ್ಲುತ್ತದೆ. ಮಳೆ ಹೆಚ್ಚಾದಾಗ ಗುಡ್ಡ‌ ಕುಸಿತ ಪ್ರಕರಣ ಹೆಚ್ಚಾಗುತ್ತದೆ. ಈಗಾಗಲೇ ಎರಡು ಕಾಳಜಿ ಕೇಂದ್ರ ತೆರೆಯಲಾಗಿದೆ. ಮಳೆಯಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಅವರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗುವುದು" ಎಂದು ತಿಳಿಸಿದರು.

"ಸರ್ಕಾರದ ಹಣದಲ್ಲಿ ಕಳಪೆ ಕಾಮಗಾರಿ ಆಗಿದ್ದರೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾಗಿ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಜಿಲ್ಲೆಯಲ್ಲಿ 150 ಶಾಲಾ ಕಟ್ಟಡ ಮಳೆಯಿಂದ ಹಾನಿಯಾಗಿದೆ. ತಕ್ಷಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದರು.

ಶಿವಮೊಗ್ಗದಲ್ಲಿ ಮಳೆಯ ಆರ್ಭಟಕ್ಕೆ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ವರದಾ ನದಿಯ ನೀರಿನಿಂದ ಕನ್ನಳ್ಳಿ ಮಾರ್ಗದ ಸೇತುವೆ ಮುಳಗಡೆ ಹಂತಕ್ಕೆ ತಲುಪಿದೆ. ಸೇತುವೆ ಮೇಲೆ ವರದಾ ನದಿ ನೀರು ಹರಿಯುತ್ತಿದೆ.

ಸೇತುವೆ ಮುಳುಗಿದರೆ ಕನ್ನಳ್ಳಿ ಮಾರ್ಗದ ಸಂಪರ್ಕಕ್ಕೆ ಅಡಚಣೆ ಉಂಟಾಗಲಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾನಲೆ ಗ್ರಾಮದಲ್ಲಿ ವರದಾ ನದಿಯ ಪ್ರವಾಹಕ್ಕೆ ಸಿಲುಕಿ ಸುತ್ತಮುತ್ತಲಿನ ಗ್ರಾಮಗಳು ನೂರಾರು ಎಕರೆ ಜಮೀನು ಜಲಾವೃತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+