ಭದ್ರಾ ಜಲಾಶಯ ಕಳಪೆ ಕಾಮಗಾರಿ; ತನಿಖೆಗೆ ಸಮಿತಿ ರಚನೆ: ಸಚಿವ ಈಶ್ವರಪ್ಪ
ಶಿವಮೊಗ್ಗ, ಜುಲೈ 5: "ಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಬಳಿ ಕೈಗೊಳ್ಳಲಾಗಿರುವ ಕಾಮಗಾರಿ ಗುಣಮಟ್ಟದ ಬಗ್ಗೆ ಬಂದಿರುವ ಆರೋಪಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ,'' ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸೋಮವಾರ ಭದ್ರಾ ಮೇಲ್ದಂಡೆ ಯೋಜನೆಯ ಕ್ರಸ್ಟ್‌ಗೇಟ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಅವರು, 2016-18ನೇ ಸಾಲಿನಲ್ಲಿ 6.50 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿತ್ತು. 2018ರಲ್ಲಿ ಡ್ಯಾಂನಿಂದ ನೀರು ಹೊರಬಿಟ್ಟಾಗ ಕಾಮಗಾರಿ ಮತ್ತೆ ದುರಸ್ತಿ ಹಂತ ತಲುಪಿತು.
"ಈ ಕುರಿತು ಸ್ಥಳೀಯರು ಮತ್ತು ರೈತ ಸಂಘಟನೆಗಳು 2016ರ ಕಾಮಗಾರಿ ಕಳಪೆಯದ್ದಾಗಿದ್ದು, ಇದರಲ್ಲಿ ಭಾಗಿಯಾಗಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಮೂವರು ನಿವೃತ್ತ ಇಂಜಿನಿಯರುಗಳ ಸಮಿತಿ ರಚಿಸಲಾಗಿದ್ದು, ಅವರು ಪರಿಶೀಲಿಸಿ ಕಾಮಗಾರಿ ಕಳಪೆಯದ್ದಾಗಿತ್ತೋ ಅಥವಾ ಇದೊಂದು ನೈಸರ್ಗಿಕ ಅವಘಡವೋ ಎಂದು ವರದಿ ನೀಡಲಿದ್ದಾರೆ. ಅನಂತರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು,'' ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ಮುಖ್ಯ ಇಂಜಿನಿಯರ್ ಯತೀಶ್ಚಂದ್ರ, ಅಧೀಕ್ಷಕ ಇಂಜಿನಿಯರ್ ಚಂದ್ರಪ್ಪ, ರೈತ ಸಂಘದ ಕೆ.ಟಿ. ಗಂಗಾಧರ್, ರೈತ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.












Click it and Unblock the Notifications