ಮಳೆಯ ಆರ್ಭಟ: ಆಗುಂಬೆ ಘಾಟ್‌ನಲ್ಲಿ ಗುಡ್ಡ ಕುಸಿತ
ಶಿವಮೊಗ್ಗ, ಜುಲೈ 14: ಮಲೆನಾಡಿನಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ಭಾರೀ ಮಳೆಯ ಪರಿಣಾಮ ಕರಾವಳಿ-ಮಲೆನಾಡು ಸಂಪರ್ಕಿಸುವ ಆಗುಂಬೆ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ.
ಭಾನುವಾರ ಬೆಳಗ್ಗೆ ಆಗುಂಬೆ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಆಗುಂಬೆ ಘಾಟ್ ರಸ್ತೆಯ 4ನೇ ತಿರುವಿನಲ್ಲಿ ಗುಡ್ಡ ಕುಸಿತಗೊಂಡು ರಸ್ತೆ ಮೇಲೆ ಗುಡ್ಡದ ಮಣ್ಣು, ಮರ-ಗಿಡಗಳು ಬಿದ್ದಿದೆ. ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ. ಇದರಿಂದಾಗಿ ವಾಹನಗಳ ಸಂಚಾರ ತಡವಾಗುತ್ತಿದೆ.
ಗುಡ್ಡದ ಮಣ್ಣು ಇನ್ನಷ್ಟು ಕುಸಿದು ರಸ್ತೆಯ ಮೇಲೆ ಬಿದ್ದರೆ ಆಗುಂಬೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಶಿವಮೊಗ್ಗ-ಉಡುಪಿ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಆಗುಂಬೆ ಘಾಟ್ ಮೂಲಕ ಹಾದು ಹೋಗುತ್ತದೆ.
ಭಾರಿ ಮಳೆಯ ಕಾರಣ ಆಗಂಬೆ ಘಾಟ್‌ನಲ್ಲಿ ಗುಡ್ಡ ಕುಸಿತಗೊಂಡಿದೆ. ಇದರಿಂದಾಗಿ ಆತಂಕದಲ್ಲಿ ವಾಹನ ಚಾಲನೆ ಮಾಡಬೇಕಾಗಿದೆ. ಶಿವಮೊಗ್ಗ ಮತ್ತು ಮಂಗಳೂರು ನಡುವಿನ ಲಘು ವಾಹನಗಳು ಆಗುಂಬೆ ಮೂಲಕ ಸಾಗುತ್ತವೆ.
ಭಾರೀ ವಾಹನಗಳ ಸಂಚಾರ ನಿಷೇಧ: ಪ್ರತಿ ವರ್ಷ ಮುಂಗಾರು ಮಳೆಯ ಸುರಿಯುವ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಭಾರೀ ಮಳೆಯಾಗುತ್ತದೆ. ಆದ್ದರಿಂದ ಶಿವಮೊಗ್ಗ-ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುರಕ್ಷತೆ ದೃಷ್ಟಿಯಿಂದ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಾಗುತ್ತದೆ.
ಈ ಬಾರಿಯೂ ಶಿವಮೊಗ್ಗ ಜಿಲ್ಲಾಡಳಿತ ಈ ಕುರಿತು ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಜೂನ್ 27 ರಿಂದ ಸೆಪ್ಟೆಂಬರ್ 15ರವರೆಗೆ ಆಗುಂಬೆ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಬದಲಿ ಮಾರ್ಗವನ್ನು ಸಹ ನೀಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ-169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟ್‌ನಲ್ಲಿ ಭಾರೀ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿ ಭೂಕುಸಿತ ಆಗುವ ಸಂಭವ ಇರುವುದರಿಂದ ಭಾರೀ ವಾಹನ ಸಂಚಾರ ನಿಷೇಧಿಸಿದೆ. ಆದ್ದರಿಂದ ಲಘು ವಾಹನಗಳು ಮಾತ್ರ ಈಗ ಸಂಚಾರ ನಡೆಸುತ್ತಿವೆ.
ರಾಷ್ಟ್ರೀಯ ಹೆದ್ದಾರಿ ವಿಭಾಗ, ಶಿವಮೊಗ್ಗ ಕಾರ್ಯಪಾಲಕ ಇಂಜಿನಿಯರ್ ರಾಷ್ಟ್ರೀಯ ಹೆದ್ದಾರಿ-169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳ ಓಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತ ಆಗುವ ಸಂಭವ ಇರುವುದರಿಂದ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು (ಜಲ್ಲಿ ಮತ್ತು ಸರಕು ಸಾಗಾಣೆ ತುಂಬಿದ ವಾಹನಗಳು) ನಿಷೇಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಶಿವಮೊಗ್ಗ ಎಸ್ಪಿ ಅವರು ಸಹ ವರದಿ ಸಲ್ಲಿಕೆ ಮಾಡಿ, ರಾಷ್ಟ್ರೀಯ ಹೆದ್ದಾರಿ-169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಬಗ್ಗೆ, ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ನಡೆಸಲು ಅನುವು ಮಾಡಿಕೊಡಬಹುದೆಂದು ವರದಿಯಲ್ಲಿ ಉಲ್ಲೇಖ ಮಾಡಿದ್ದರು.
ಸದ್ಯ ಭಾರೀ ವಾಹನಗಳಿಗೆ ಆಗುಂಬೆಯಲ್ಲಿ ಪ್ರವೇಶ ನಿಷೇಧಿಸಿದ್ದು, ತೀರ್ಥಹಳ್ಳಿ -ಉಡುಪಿಗೆ ಸಂಚಾರ ನಡೆಸುವ ವಾಹನಗಳು ತೀರ್ಥಹಳ್ಳಿ- ಮಾಸ್ತಿಕಟ್ಟೆ-ಸಿದ್ದಾಪುರ-ಕುಂದಾಪುರ ಮಾರ್ಗವಾಗಿ ಸಂಚಾರ ನಡೆಸಬಹುದು. ಉಡುಪಿ-ತೀರ್ಥಹಳ್ಳಿ ವಾಹನಗಳು ಉಡುಪಿ-ಕುಂದಾಪುರ-ಸಿದ್ದಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ ಮೂಲಕ ಸಂಚಾರ ನಡೆಸಬಹುದು ಎಂದು ಪರ್ಯಾಯ ಮಾರ್ಗವನ್ನು ನೀಡಲಾಗಿದೆ.












Click it and Unblock the Notifications