ಶಿವಮೊಗ್ಗ; ಸಚಿವ ಮಧು ಬಂಗಾರಪ್ಪ ಮೊದಲ ಸಭೆ, ಅಧಿಕಾರಿಗಳಿಗೆ ಸೂಚನೆಗಳು

ಶಿವಮೊಗ್ಗ, ಜೂನ್ 04; ಸೊರಬದ ಕಾಂಗ್ರೆಸ್ ಶಾಸಕ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದರು. ವಿವಿಧ ಇಲಾಖೆಗಳಿಗೆ ಹಲವು ಸೂಚನೆ ನೀಡಿದರು. ನೈಋತ್ಯ ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಎಚ್ಚರವಹಿಸುವಂತೆ ನಿರ್ದೇಶಿಸಿದರು.

ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು. ಜಿಲ್ಲೆಯ ಶಾಸಕರು, ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್., ಜಿಲ್ಲಾ ಪಂಚಾಯಿತಿ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅರಣ್ಯ ಅಧಿಕಾರಿ ಶಿವಶಂಕರ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Minister Madhu Bangarappa First Meeting With Officials Of Shivamogga

ಸಭೆಯಲ್ಲಿ ಮಾತನಾಡಿದ ಸಚಿವರು, ಬಿಸಿಲಿನ ಝಳ ಹೆಚ್ಚಿರುವ ಹಿನ್ನಲೆಯಲ್ಲಿ, "ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಬೇಕೆಂದು" ಅಧಿಕಾರಿಗಳಿಗೆ ತಿಳಿಸಿದರು.

"ಅಧಿಕಾರಿಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಹೋಬಳಿವಾರು ನೀರಿನ ಸಮಸ್ಯೆ ಇರುವ ಹಳ್ಳಿಗಳ ಪಟ್ಟಿ ಮಾಡಬೇಕು. ಸಿಇಓ ಅವರು ಸಮಸ್ಯಾತ್ಮಕ ಹಳ್ಳಿಗಳ ವರದಿ ಸಿದ್ದಪಡಿಸಿ ಕುಡಿಯುವ ನೀರಿಗೆ ಕಿಂಚಿತ್ತೂ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು" ಎಂದು ಸಚಿವರು ಸೂಚನೆ ನೀಡಿದರು.

ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ; ಮಧು ಬಂಗಾರಪ್ಪ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಕಾರಣ ಶಿಕ್ಷಣ ಇಲಾಖೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಜಿಲ್ಲೆಯಲ್ಲಿ 2818 ಸರ್ಕಾರಿ ಶಾಲೆಗಳಿವೆ. ಇದರಲ್ಲಿ ಶೂನ್ಯ ಶಿಕ್ಷಕರಿರುವ ಶಾಲೆಗಳು ಒಟ್ಟು 136 ಇವೆ. ಸಾಗರ ತಾಲ್ಲೂಕಿನಲ್ಲೇ 52 ಶಾಲೆಯಲ್ಲಿ ಶಿಕ್ಷಕರಿಲ್ಲ. ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಈ ಕುರಿತು ಡಿಡಿಪಿಐ ಅವರು ಹೆಚ್ಚಿನ ಗಮನ ಹರಿಸಬೇಕು ಎಂದು ಚರ್ಚೆ ಆಯಿತು.

Minister Madhu Bangarappa First Meeting With Officials Of Shivamogga

ಮುಂಬರುವ ವರ್ಗಾವಣೆ ಕೌನ್ಸೆಲಿಂಗ್‍ನಲ್ಲಿ ಈ ಪ್ರದೇಶಗಳಿಗೆ ಶಿಕ್ಷಕರು ವರ್ಗಾವಣೆಯಾಗುವಂತೆ, ಇತರೆಡೆ ನಿಯೋಜನೆಗೊಂಡ ಶಿಕ್ಷಕರನ್ನು ಇಲ್ಲಿ ನಿಯೋಜಿಸುವಂತೆ ಹಾಗೂ ಅತಿಥಿ ಶಿಕ್ಷಕರನ್ನು ಇಲ್ಲಿ ನಿಯೋಜಿಸುವ ಮೂಲಕ ಶಿಕ್ಷಕರನ್ನು ನೇಮಿಸಿ ಶಾಲೆಗಳು ನಡೆಯುವಂತೆ ನೋಡಿಕೊಳ್ಳಬೇಕು. ತಾವು ಸಹ ಸರ್ಕಾರದ ಹಂತದಲ್ಲಿ ಈ ಬಗ್ಗೆ ಕ್ರಮ ವಹಿಸುವುದಾಗಿ ಸಚಿವರು ಭರವಸೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಡಿಡಿಪಿಐ, "167 ಪ್ರೌಢಶಾಲಾ ಶಿಕ್ಷಕರು, 1009 ಪ್ರಾಥಮಿಕ ಶಿಕ್ಷಕರ ಹುದ್ದೆ ಖಾಲಿ ಇದೆ. ಪ್ರಾಥಮಿಕ ಶಾಲೆಗೆ 1031 ಮತ್ತು ಪ್ರೌಢಶಾಲೆ 108 ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಲಾಗಿದೆ. ಈಗಾಗಲೇ 448 ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಶಾಲೆಗಳಲ್ಲಿ ಪಠ್ಯ, ಸಮವಸ್ತ್ರ ವಿತರಣೆಯಾಗಿದೆ" ಎಂದು ಮಾಹಿತಿ ನೀಡಿದರು.

ಜಲ ಜೀವನ ಮಿಷನ್‌; ಸಾಗರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, "ತಮ್ಮ ಕ್ಷೇತ್ರದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಸುಮಾರು ರೂ. 250 ಕೋಟಿ ಕಾಮಗಾರಿ ಕೈಗೊಳ್ಳಲಾಗಿದ್ದರೂ ಇದುವರೆಗೆ ಒಂದು ಹನಿ ನೀರು ಬಂದಿಲ್ಲ. ಈ ಕುರಿತು ಸಂಬಂಧಿಸಿದ ಇಂಜಿನಿಯರ್, ಅಧಿಕಾರಿಗಳ ವಿರುದ್ದ ತನಿಖೆ ನಡೆಸಬೇಕೆಂದು" ಸಭೆಯಲ್ಲಿ ಆಗ್ರಹಿಸಿದರು.

"ಅಂಬ್ಲಿಗೊಳ ಜಲಾಶಯದಲ್ಲಿ ಡೆಡ್ ಸ್ಟೋರೇಜ್‍ಗಿಂತ ಕಡಿಮೆ ನೀರು ಇದೆ. ಕುಡಿಯುವ ನೀರು ಬಿಟ್ಟು ಬೇರೆ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ. ಆದರೂ ಮುಳಗಡೆ ಕ್ಷೇತ್ರವಾದ ಸಾಗರಕ್ಕೆ ನೀರು ಕೊಡದೆ ಶಿಕಾರಿಪುರಕ್ಕೆ ನೀರು ನೀಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದರು. ಜಿಲ್ಲಾಧಿಕಾರಿಗಳು ಈ ಕುರಿತು ಅಧಿಕಾರಿಗಳಿಂದ ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಆರೋಗ್ಯ ಇಲಾಖೆ; ಸಾಗರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ 8 ಡಯಾಲಿಸಿಸ್ ಮಷೀನ್ ಕೆಲಸ ಮಾಡುತ್ತಿಲ್ಲ. ಅನುದಾನವಿದ್ದರೂ ಬಳಕೆ ಆಗುತ್ತಿಲ್ಲ. ಇದರಿಂದ ಬಡವರಿಗೆ ತುಂಬಾ ಅನಾನುಕೂಲವಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು. ಹಾಗೂ ಜನರಿಕ್ ಮಳಿಗೆಯಲ್ಲಿ ಔಷಧಿಗಳು ಲಭ್ಯವಿಲ್ಲ ಎಂದು ಶಾಸಕರು ಹೇಳಿದರು.

ಸಚಿವರು, ಡಯಾಲಿಸಿಸ್ ಮಷೀನ್, ಜನರಿಕ್ ಔಷಧಿ ಹಾಗೂ ಜನರಿಗೆ ಏನು ತ್ವರಿತವಾಗಿ ಅವಶ್ಯಕತೆಗಳಿವೆ ಎಂಬುದರ ಕುರಿತು ಬುಧವಾರದ ಒಳಗೆ ವರದಿ ನೀಡುವಂತೆ ಡಿಹೆಚ್‍ಓಗೆ ತಿಳಿಸಿದರು. ಜಿಲ್ಲಾಧಿಕಾರಿಗಳು, "ಡಯಾಲಿಸಿಸ್, 108 ಆಂಬುಲೆನ್ಸ್ ಸಮಸ್ಯೆ ಇದೆ, ಜನೆರಿಕ್ ಔಷಧಿಗಳು ಬೇಡಿಕೆಗೆ ತಕ್ಕಂತೆ ಲಭ್ಯವಾಗುತ್ತಿಲ್ಲ ಹಾಗೂ ಡ್ರಗ್ ಲಾಜಿಸ್ಟಿಕ್ ಸಹ ಬೇಡಿಕೆ ಮತ್ತು ಸರಬರಾಜು ವ್ಯತ್ಯಾಸವಾಗುತ್ತಿದೆ" ಎಂದರು.

ಸಚಿವ ಮಧು ಬಂಗಾರಪ್ಪ, "ಜಿಲ್ಲೆಯಲ್ಲಿ ಕೆಎಸ್‍ಆರ್‌ಟಿಸಿ ಬಸ್ ಕೊರತೆ ಇದೆ. ಈ ಬಗ್ಗೆ ಜನರು ಹಲವಾರು ಬಾರಿ ಅಹವಾಲು ನೀಡಿದ್ದಾರೆ. ಹೆಚ್ಚುವರಿ ಬಸ್ ಅವಶ್ಯಕತೆ ಇರುವ ಸ್ಥಳಗಳ ಹಾಗೂ ಮಾರ್ಗ ವಿಸ್ತರಣೆ ಬಗ್ಗೆ ಪಟ್ಟಿ ಮಾಡಿ ನೀಡುವಂತೆ" ತಿಳಿಸಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, "ತಮ್ಮ ಕ್ಷೇತ್ರದಲ್ಲೂ ಜನರು ಮಾರ್ಗ ವಿಸ್ತರಣೆ ಕೇಳುತ್ತಿದ್ದಾರೆ. ಒಂದೆರಡು ಹಳ್ಳಿಗಳಿಗೆ ಬಸ್ ಹೋಗುವ ಮೂಲಕ ಮಾರ್ಗ ವಿಸ್ತರಣೆ ಮಾಡುವಂತೆ" ತಿಳಿಸಿದರು.

ಜಿಲ್ಲಾಧಿಕಾರಿಗಳು, "ಜಿಲ್ಲೆಗೆ ಸುಮಾರು 50 ಬಸ್‍ಗಳ ಅವಶ್ಯಕತೆ ಇದೆ. ಕೆಎಸ್‍ಆರ್‌ಟಿಸಿ ಅವರಿಂದ ಪಟ್ಟಿ ತರಿಸಿ ಹೆಚ್ಚುವರಿ ಬೇಡಿಕೆ ಇರುವ, ಮಾರ್ಗ ವಿಸ್ತರಣೆ ಬಗ್ಗೆ ಸಚಿವರಿಗೆ ವರದಿ ಸಲ್ಲಿಸಲಾಗುವುದು" ಎಂದರು.

ಮಳೆಗಾಲ ಆರಂಭವಾಗುತ್ತಿದೆ. ಮಳೆ ಹಾನಿ ಸಂಭವಿಸಿ ಮನೆ, ಜಾನುವಾರು, ಜೀವ ಹಾನಿಯಾದಾಗ ಅಧಿಕಾರಿಗಳು ಮಹಜರು ಮಾಡುವ ಸಂದರ್ಭದಲ್ಲಿ ಮಾನವೀಯತೆ ತೋರಬೇಕು. ಹಾನಿಯನ್ನು ಸಮರ್ಪಕವಾಗಿ ನಿರ್ಣಯಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಸೂಚಿಸಲಾಯಿತು.

ಕುಡಿಯುವ ನೀರು, ಮಳೆ ಅಥವಾ ಬೆಳೆ ಹಾನಿಗೆ ಸೂಕ್ತ ಪರಿಹಾರ, ಶಾಲಾ ಮಕ್ಕಳ ಕೊಠಡಿಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ಸೇರಿದಂತೆ ಜನರಿಗೆ ಅತಿ ಅವಶ್ಯಕವಾಗಿ ಬೇಕಾದ ಸೌಲಭ್ಯಗಳು, ಪರಿಹಾರ ಕುರಿತು ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಇಲಾಖೆಗಳಲ್ಲಿ ಅಗತ್ಯ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಪಟ್ಟಿ ಮಾಡಿ ವರದಿ ನೀಡಬೇಕೆಂದು ಸಚಿವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+