ಸಚಿವ ಈಶ್ವರಪ್ಪ ರಾಜೀನಾಮೆ ಪಡೆದು, ದೇಶದ್ರೋಹ ಪ್ರಕರಣ ದಾಖಲಿಸಬೇಕು; ಡಿಕೆಶಿ ಆಗ್ರಹ
ಬೆಂಗಳೂರು, ಫೆಬ್ರವರಿ 16: ಭವಿಷ್ಯದಲ್ಲಿ ನವದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಬದಲಿಗೆ ಕೇಸರಿ ಧ್ವಜ ಹಾರಿಸಲಾಗುವುದು ಎಂದು ಹೇಳಿಕೆ ನೀಡಿದ್ದ ಕೆ.ಎಸ್. ಈಶ್ವರಪ್ಪ ವಿರುದ್ಧ ವಿಧಾನಸಭೆ ಸದನದಲ್ಲಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಕಾಂಗ್ರೆಸ್ ನಾಯಕರು ಪ್ರತಿಭಟಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸದನವನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.
Recommended Video
ನಂತರ ಸಿಎಲ್‌ಪಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾದ ನಾವು ಈ ದೇಶದ ಗೌರವ, ಸ್ವಾಭಿಮಾನ ಉಳಿಸಲು ಕೆಲಸ ಮಾಡುತ್ತಿದ್ದೇವೆ. ನಾವು ಭಾರತೀಯರು, ನಮ್ಮ ದೇಶ, ರಾಷ್ಟ್ರಧ್ವಜ ರಕ್ಷಣೆ ವಿಚಾರದಲ್ಲಿ ನಮಗೆ ನಮ್ಮದೇ ಆದ ಜವಾಬ್ದಾರಿ ಇದೆ. ಅದನ್ನು ಸಂವಿಧಾನ ಪರಿಚ್ಛೇದ 51 (ಎ) ಮೂಲಕ ಕೊಟ್ಟಿದೆ," ಎಂದರು.
"ಸಂವಿಧಾನಕ್ಕೆ ಬದ್ಧರಾಗಿ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ಗೌರವಿಸಬೇಕು ಎಂದು ಇದರಲ್ಲಿ ಸ್ಪಷ್ಟವಾಗಿ ತಿಳಿಸಿದೆ. ನಾವು ಜನಪ್ರತಿನಿಧಿಗಳಾಗಿ ಚುನಾವಣೆಗೆ ಸ್ಪರ್ಧಿಸುವಾಗ, ಶಾಸಕರಾಗಿ ಆಯ್ಕೆಯಾದ ಮೇಲೆ, ಸಚಿವರಾದ ನಂತರ ಸಂವಿಧಾನದ ಆಶಯ ಹಾಗೂ ಮಾರ್ಗದರ್ಶನದಲ್ಲಿ ಕೆಲಸ ಮಾಡುವಂತೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸುತ್ತಾರೆ. ನಾವು ದೇವರ ಹಾಗೂ ನಾವು ನಂಬಿಕೆ ಇಟ್ಟಿರುವವರ ಮೇಲೆ ಪ್ರಮಾಣ ಮಾಡಿರುತ್ತೇವೆ," ಎಂದು ತಿಳಿಸಿದರು.

"ಈ ರೀತಿ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದವರು ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿರುವುದನ್ನು ಮಾಧ್ಯಮಗಳು ತೋರಿಸಿವೆ. ರಾಜ್ಯಪಾಲರು ಕೂಡಲೇ ಅವರನ್ನು ವಜಾಗೊಳಿಸಬೇಕಿತ್ತು. ಮುಖ್ಯಮಂತ್ರಿಗಳು ಸಚಿವರಿಂದ ರಾಜೀನಾಮೆ ಪಡೆಯಬೇಕಿತ್ತು. ಮುಖ್ಯ ಕಾರ್ಯದರ್ಶಿ ಆಗಲಿ, ಪೊಲೀಸ್ ಮಹಾ ನಿರ್ದೇಶಕರಾಗಲಿ ಸ್ವಯಂ ಪ್ರೇರಿತವಾಗಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು. ಆದರೆ ಇದ್ಯಾವುದೂ ಆಗಿಲ್ಲ," ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದರು.
"ನಮ್ಮ ಕಾರ್ಯಕರ್ತರು, ನಾಯಕರು ಬಿಜೆಪಿ ನಾಯಕರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದು ನಡೆದಿದೆ. ಅವರನ್ನು ನಾವು ಜೈಲಿನಿಂದ ಬಿಡಿಸಿಕೊಂಡು ಬಂದ ಅನೇಕ ಉದಾಹರಣೆಗಳಿವೆ. ಇದೇ ವಿಧಾನಸಭೆಯಲ್ಲಿ ರೈತರ ಹೋರಾಟವನ್ನು ಕಾಂಗ್ರೆಸ್ ಕೃಪಾಪೋಷಿತ ನಾಟಕ ಎಂದು ಮುಖ್ಯಮಂತ್ರಿಗಳೇ ಹೇಳಿದ್ದು, ಮುಖ್ಯಮಂತ್ರಿಗಳು ನೈತಿಕ ಪೊಲೀಸ್‌ಗಿರಿ ಸಮರ್ಥಿಸಿಕೊಂಡಿದ್ದರು. ಈ ಎಲ್ಲ ಪ್ರಕರಣಗಳ ಪರಿಣಾಮವಾಗಿ ಇಂದು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವಂತಹ ವಾತಾವರಣ ಸೃಷ್ಟಿಯಾಗಿದೆ," ಎಂದು ವಾಗ್ದಾಳಿ ನಡೆಸಿದರು.

"ರಾಷ್ಟ್ರಧ್ವಜ ಹಾರಾಡುವ ಕಂಬದಲ್ಲಿ ಕೇಸರಿ ಧ್ವಜ ಹಾರಿಸಬಹುದು, ನಂತರ ಮಕ್ಕಳಿಗೆ ಕೇಸರಿ ಶಾಲು ಹಂಚಿದ್ದು ನಾನೇ, ನಾನು ಶಾಲುಗಳನ್ನು ಅಯೋಧ್ಯೆಯಿಂದ ತರಿಸಿಕೊಟ್ಟೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾವನೆ ಆದ ನಂತರವೂ ಅವರು ಅದನ್ನೇ ಹೇಳುತ್ತಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ. ಇಷ್ಟಾದರೂ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಲ್ಲ ಎಂದರೆ ಏನರ್ಥ?," ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
"ಅವರಿಂದ ದೇಶಕ್ಕೆ ಅಪಮಾನ ಆಗಲು ಅವಕಾಶ ನೀಡುತ್ತಿರುವುದೇಕೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಕರ್ತವ್ಯ ಏನು? ನೀವು, ನಾವೆಲ್ಲ ಸೇರಿ ಇಂತಹ ದೇಶದ್ರೋಹಿಗಳ ವಿರುದ್ಧ ಹೋರಾಟ ಮಾಡಬೇಕು. ಇದು ನಮ್ಮ ಜವಾಬ್ದಾರಿ. ಹೀಗಾಗಿ ಈಶ್ವರಪ್ಪ ಅವರ ರಾಜೀನಾಮೆ ಪಡೆದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಲ್ಲಿ ಮನವಿ ಮಾಡುತ್ತೇನೆ," ಎಂದರು.
ನಾವು ಇಂದು ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಈ ವಿಚಾರ ಚರ್ಚೆ ಆಗದೇ, ಸರ್ಕಾರ ಉತ್ತರ ನೀಡುವ ಮುನ್ನವೇ ಸ್ಪೀಕರ್ ಅವರು ಆ ಸಚಿವರಿಗೆ ಉತ್ತರ ನೀಡಲು ಅವಕಾಶ ನೀಡಿದ್ದಾರೆ.

ಸ್ಪೀಕರ್ ಅವರು ಪಕ್ಷಾತೀತವಾಗಿದ್ದಾರೆ ಎಂದು ಭಾವಿಸಿದ್ದೆವು. ಆದರೆ, ಅವರು ಆ ರೀತಿ ನಡೆದುಕೊಂಡಿಲ್ಲ. ಇದು ಆರ್‌ಎಸ್‌ಎಸ್, ಬಿಜೆಪಿ ಅಜೆಂಡಾನಾ? ಸ್ಪೀಕರ್ ಅವರು ಏಕಪಕ್ಷೀಯವಾಗಿ ಒಂದು ಪಕ್ಷದ ಸದಸ್ಯರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ಗುರುವಾರ ಬೆಳಗ್ಗೆ ಒಳಗಾಗಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ. ಇಲ್ಲದಿದ್ದರೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಸಿದರು.












Click it and Unblock the Notifications