ಶಿವಮೊಗ್ಗ; ಬಿಜೆಪಿಗೆ ಮುನ್ನಡೆ, ಕಾಂಗ್ರೆಸ್ ಲೆಕ್ಕಾಚಾರ ತಪ್ಪಿತಾ?
ಶಿವಮೊಗ್ಗ, ಮಾರ್ಚ್ 05: ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣೆಯಲ್ಲಿ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಯಾರ ಮಡಿಲಿಗೆ?. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಶಿವಮೊಗ್ಗವನ್ನು ಉಳಿಸಿಕೊಳ್ಳಲಿದ್ದಾರೆಯೇ? ಕಾದು ನೋಡಬೇಕಿದೆ.
ಈ ಬಾರಿಯ ಲೋಕಸಭೆ ಚುನಾವಣೆ ಕುರಿತು India TV-CNX ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಕರ್ನಾಟಕದಲ್ಲಿ ಬಿಜೆಪಿ 22, ಜೆಡಿಎಸ್ 2 ಮತ್ತು ಕಾಂಗ್ರೆಸ್ 4 ಸ್ಥಾನಗಳಿಸಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಶಿವಮೊಗ್ಗ ಸಹ ಕುತೂಹಲ ಕೆರಳಿಸಿರುವ ಕ್ಷೇತ್ರ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕುರಿತು ಸಹ ಸಮೀಕ್ಷೆ ನಡೆಸಲಾಗಿದೆ. ಶಿವಮೊಗ್ಗ ಬಿಜೆಪಿಯ ಭದ್ರಕೋಟೆ ಎಂಬುದು ಹಿಂದಿನ ಚುನಾವಣೆಗಳಿಂದ ಸಾಬೀತಾಗಿದೆ. ಕಾಂಗ್ರೆಸ್ ಪ್ರತಿ ಬಾರಿ ಅಭ್ಯರ್ಥಿ ಬದಲಾವಣೆ ಮಾಡಿದರೂ ತಂತ್ರ ಫಲ ಕೊಡುತ್ತಿಲ್ಲ.
ಬಿಜೆಪಿಗೆ ಮುನ್ನಡೆ: India TV-CNX ಸಮೀಕ್ಷೆಯ ಪ್ರಕಾರ ಶಿವಮೊಗ್ಗದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಕ್ಷೇತ್ರದ ಹಾಲಿ ಸಂಸದರು ಬಿಜೆಪಿಯ ಬಿ. ವೈ. ರಾಘವೇಂದ್ರ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಪುತ್ರ ಹಾಗೂ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸಹೋದರ. ಈ ಸಲ ಅವರಿಗೆ ಟಿಕೆಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿವಮೊಗ್ಗ ನಗರ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ (ಜೆಡಿಎಸ್), ಭದ್ರಾವತಿ (ಕಾಂಗ್ರೆಸ್), ಸೊರಬ (ಕಾಂಗ್ರೆಸ್), ಸಾಗರ (ಕಾಂಗ್ರೆಸ್), ತೀರ್ಥಹಳ್ಳಿ (ಬಿಜೆಪಿ), ಶಿಕಾರಿಪುರ (ಬಿಜೆಪಿ), ಉಡುಪಿ ಜಿಲ್ಲೆಯ ಬೈಂದೂರು (ಬಿಜೆಪಿ) ವಿಧಾನಸಭಾ ಕ್ಷೇತ್ರಗಳಿವೆ.
2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಬಿ. ವೈ. ರಾಘವೇಂದ್ರ 482,783 ಮತಗಳನ್ನು ಪಡೆದು ಕಾಂಗ್ರೆಸ್‌ನ ಎಸ್. ಬಂಗಾರಪ್ಪ (429,890 ಮತ) ಸೋಲಿಸಿದರು. ಈ ಚುನಾವಣೆ ರಾಜ್ಯದ ಗಮನಸೆಳೆದಿತ್ತು.
2014ರ ಚುನಾವಣೆಯಲ್ಲಿಯೂ ಶಿವಮೊಗ್ಗ ಚುನಾವಣೆ ರಾಜ್ಯದ ಗಮನ ಸೆಳೆದಿತ್ತು. ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಎದುರಾಳಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ.
ಚುನಾವಣೆಯಲ್ಲಿ ಬಿ. ಎಸ್. ಯಡಿಯೂರಪ್ಪ 606,216 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಮಂಜುನಾಥ ಭಂಡಾರಿ (242,911 ಮತ) ಪಡೆದು 2ನೇ ಸ್ಥಾನ, ಗೀತಾ ಶಿವರಾಜ್ ಕುಮಾರ್ (240,636 ಮತ) ಪಡೆದು 3ನೇ ಸ್ಥಾನ ಪಡೆದಿದ್ದರು.
2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿದರು. ಬಿಜೆಪಿಯ ಬಿ. ವೈ. ರಾಘವೇಂದ್ರ 729,872 ಮತಗಳನ್ನು ಪಡೆದು ಜಯಗಳಿಸಿದರು. ಮಧು ಬಂಗಾರಪ್ಪ 506,512 ಮತ ಪಡೆದು ಸೋಲು ಕಂಡರು.
ಮೂರು ಚುನಾವಣೆಯಲ್ಲಿಯೂ ಕಾಂಗ್ರೆಸ್ ಶಿವಮೊಗ್ಗದಲ್ಲಿ ಅಭ್ಯರ್ಥಿ ಬದಲಾವಣೆ ಮಾಡುವ ದಾಳ ಉರುಳಿಸಿದೆ. ಆದರೆ ಶಿವಮೊಗ್ಗದಲ್ಲಿ ಪಕ್ಷದ ಬಾವುಟ ಹಾರಿಸಲು ಸಾಧ್ಯವಾಗಿಲ್ಲ. ಈ ಬಾರಿ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು. ಆರ್. ಎಂ. ಮಂಜುನಾಥ ಗೌಡ, ಆಯನೂರು ಮಂಜುನಾಥ, ಕಿಮ್ಮನೆ ರತ್ನಾಕರ್, ಎಂ. ಶ್ರೀಕಾಂತ್ ಹೀಗೆ ಕಾಂಗ್ರೆಸ್‌ನ ಸಾಲು ಸಾಲು ಕಾಂಗ್ರೆಸ್‌ನ ನಾಯಕರಿದ್ದಾರೆ.
ಸದ್ಯಕ್ಕೆ ಶಿವಮೊಗ್ಗಕ್ಕೆ ಯಾರು ಕಾಂಗ್ರೆಸ್ ಅಭ್ಯರ್ಥಿ? ಎಂಬುದು ಅಂತಿಮವಾಗಿಲ್ಲ. ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರಸ್‌ನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬುದು ಚರ್ಚೆ. ಆದರೆ ಇನ್ನೂ ಅಂತಿಮವಾಗಿಲ್ಲ.
ಶಿವಮೊಗ್ಗದಲ್ಲಿ ಈ ಬಾರಿ ಗೆಲ್ಲಬೇಕು ಎಂದು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ. ಅದಕ್ಕಾಗಿಯೇ 'ಯುವನಿಧಿ' ಗ್ಯಾರಂಟಿ ಯೋಜನೆಯ ಚಾಲನೆಯನ್ನು ಶಿವಮೊಗ್ಗದಲ್ಲಿಯೇ ಮಾಡುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿತ್ತು. ಫಲಾನುಭವಿಗಳ ಸಮಾವೇಶವನ್ನು ಫೆಬ್ರವರಿ ಅಂತ್ಯದಲ್ಲಿ ನಡೆಸಲಾಗಿತ್ತು. ಡಿ. ಕೆ. ಶಿವಕುಮಾರ್ ಪಾಲ್ಗೊಂಡಿದ್ದರು.
ಬಿಜೆಪಿ-ಜೆಡಿಎಸ್ ಮೈತ್ರಿ ಶಿವಮೊಗ್ಗದಲ್ಲಿ ಅಷ್ಟು ಸಹಾಯಕವಾಗುವ ಸಾಧ್ಯತೆ ಕಡಿಮೆ ಇದೆ. ಅಲ್ಲದೇ 2023ರ ವಿಧಾನಸಭೆ ಚುನಾವಣೆಯಲ್ಲಿ ಸೊರಬದಲ್ಲಿ ಸೋತ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪರನ್ನು ಕಾಂಗ್ರೆಸ್‌ಗೆ ಕರೆತಂದು ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಗಳಿದ್ದು, ಇದೂ ಸಹ ಖಚಿತವಾಗಿಲ್ಲ.












Click it and Unblock the Notifications