ಶಿವಮೊಗ್ಗದಲ್ಲಿ ಗೆಲುವು ನಮ್ಮದು ಅಂದ್ರು ಕುಮಾರಸ್ವಾಮಿ
ಶಿವಮೊಗ್ಗ, ಏ.8 : "ಶಿವಮೊಗ್ಗದಲ್ಲಿ ಚುನಾವಣೆ ಕಣಕ್ಕೆ ಇಳಿದಿರುವುದು ಬಿಎಸ್ ಯಡಿಯೂರಪ್ಪ ಅವರಲ್ಲ, ಅವರ ಹಣ. ಜೆಡಿಎಸ್ ಪಕ್ಷದ ಜನರ ಪ್ರೀತಿ ಮತ್ತು ಯಡಿಯೂರಪ್ಪ ಹಣಬಲದಲ್ಲಿ ನಾವು ಗೆಲ್ಲುತ್ತೇವೆ. ಗೀತಾ ಶಿವರಾಜ್ ಕುಮಾರ್ ಭಾರೀ ಅಂತರದಲ್ಲಿ ಜಯಗಳಿಸುತ್ತಾರೆ" ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಎಚ್.ಡಿ.ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ. ಪ್ರಚಾರಕ್ಕೂ ಮೊದಲು ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರು ಚುನಾವಣೆಗೆ ನಿಂತಿಲ್ಲ, ಅವರ ಹಣ ಕಣದಲ್ಲಿದೆ. ಯಡಿಯೂರಪ್ಪ ಅವರ ಹಣಬಲ ಮತ್ತು ಜೆಡಿಎಸ್ ಪಕ್ಷದ ಜನರ ಪ್ರೀತಿ ನಡುವೆ ಚುನಾವಣೆ ನಡೆಯಲಿದೆ. ಜನರ ಪ್ರೀತಿಗೆ ಶಿವಮೊಗ್ಗದ ಮತದಾರರು ಬೆಂಬಲ ನೀಡುತ್ತಾರೆ ಎಂದು ಹೇಳಿದರು.[ಶಿವಮೊಗ್ಗದಲ್ಲಿ ಬಿಎಸ್ ವೈ, ಬಂಗಾರಪ್ಪ ಕುಟುಂಬದ ಫೈಟ್]
ಮೋದಿಗೆ ಏಕೆ ಮತ : ರಾಜ್ಯ ಬಿಜೆಪಿ ನಾಯಕರು ನರೇಂದ್ರ ಮೋದಿ ಹೆಸರಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡದ ಮೋದಿಗೆ ರಾಜ್ಯದ ಮತದಾರು ಏಕೆ ಮತ ಹಾಕಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ರಾಹುಲ್ ಗಾಂಧಿ ಸಹ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಮಾತನಾಡುತ್ತಿದ್ದಾರೆ, ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡದಿರುವ ಅವರನ್ನು ಏಕೆ ಬೆಂಬಲಿಸಬೇಕು ಎಂದರು.
ಷರೀಫ್ ಗೆ ಬಿಫಾರಂ ಕೊಟ್ಟಿದ್ದೆವು : ಹಿರಿಯ ಕಾಂಗ್ರೆಸ್ ಮುಖಂಡ ಸಿ.ಕೆ.ಜಾಫರ್ ಷರೀಫ್ ಅವರಿಗೆ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನೀಡಿದ್ದೆವು. ಅವರು ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ, ಮೆಕ್ಕಾದಿಂದ ಬಂದ ನಂತರ ಅವರ ಮನಸ್ಸು ಪರಿವರ್ತನೆಯಾಗಲಿ ಕಾರಣ ಏನು ಎಂದು ನನಗೆ ತಿಳಿದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.[ಷರೀಫ್ ಸ್ಪರ್ಧಿಸೋಲ್ಲ ಗೌಡರ ಲೆಕ್ಕ ಉಲ್ಟಾ]


Click it and Unblock the Notifications
