ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಈಶ್ವರಪ್ಪ
ಶಿವಮೊಗ್ಗ, ನವೆಂಬರ್ 17 : "ಜಿಲ್ಲೆಯ ಸೋಗಾನೆ ಸಮೀಪ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆ ಮುಕ್ತಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಮಂಗಳವಾರ ಕೆ. ಎಸ್. ಈಶ್ವರಪ್ಪ ವಿಮಾನ ನಿಲ್ದಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, "ಮೊದಲ ಹಂತದ ಕಾಮಗಾರಿಗಳಿಗಾಗಿ ಸರ್ಕಾರದಿಂದ ಕಾಯ್ದಿರಿಸಲಾದ ಒಟ್ಟು 220 ಕೋಟಿ ರೂ.ಗಳಲ್ಲಿ 150 ಕೋಟಿ ರೂ.ವೆಚ್ಚದ ಕಾಮಗಾರಿಗಳು ಭರದಿಂದ ಸಾಗಿವೆ" ಎಂದರು.
"ಕಚೇರಿ, ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿವೆ. ಅಂದು ಕೊಂಡಂತೆ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಲ್ಲಿ 2021ರ ವರ್ಷಾರಂಭದಲ್ಲಿ ವಿಮಾನ ಸಂಚಾರ ಆರಂಭಗೊಳ್ಳಲಿದೆ" ಎಂದು ಹೇಳಿದರು.

"ವಿಮಾನ ನಿಲ್ದಾಣ ಜಿಲ್ಲೆಯ ಜನರ ಬಹುದಿನಗಳ ಕನಸಾಗಿದ್ದು, ಸ್ಥಗಿತಗೊಂಡಿದ್ದ ಕಾಮಗಾರಿಗೆ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಅಗತ್ಯ ಅನುದಾನ ಬಿಡುಗಡೆ ಮಾಡುವ ಮೂಲಕ ಕಾಮಗಾರಿಗಳಿಗೆ ವೇಗ ಹೆಚ್ಚಿಸಿದ್ದಾರೆ" ಎಂದರು.
"ಪ್ರಸ್ತುತ ರನ್ ವೇ, ಕಾಂಪೌಂಡ್ ಕಾಮಗಾರಿಗಳು ನಡೆಯುತ್ತಿವೆ. ಕಟ್ಟಡ ಕಾಮಗಾರಿಗಳು ಸದ್ಯದಲ್ಲಿಯೇ ಆರಂಭಗೊಳ್ಳಲಿವೆ. ಮುಂದಿನ ದಿನಗಳಲ್ಲಿ ಕಾಮಗಾರಿಗಳಿಗೆ ಇನ್ನಷ್ಟು ವೇಗ ನೀಡಲಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು" ಎಂದು ಈಶ್ವರಪ್ಪ ವಿವರಣೆ ನೀಡಿದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಬೇಕು ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸು. ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ತಕ್ಷಣ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಮರು ಚಾಲನೆ ನೀಡಿ, ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಿದ್ದಾರೆ.












Click it and Unblock the Notifications