ಕಿಮ್ಮನೆ, ಆರ್‌ಎಂ ಜಂಟಿ ಸುದ್ದಿಗೋಷ್ಠಿ; ಏ. 19ಕ್ಕೆ ನಾಮಪತ್ರ ಸಲ್ಲಿಕೆ
ಶಿವಮೊಗ್ಗ, ಏಪ್ರಿಲ್ 10; ಕರ್ನಾಟಕ ಕಾಂಗ್ರೆಸ್ 42 ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಘೋಷಣೆ ಮಾಡಿತ್ತು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಕ್ಷದ ಅಭ್ಯರ್ಥಿ ಎಂದು ಪ್ರಕಟಿಸಿತ್ತು. ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್. ಎಂ. ಮಂಜುನಾಥ ಗೌಡರು ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.
ಕೇಂದ್ರ ಚುನಾವಣಾ ಆಯೋಗ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗಾಗಿ ಕಾಂಗ್ರೆಸ್ 124 ಮತ್ತು 42 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ತೀರ್ಥಹಳ್ಳಿಯೂ ಒಂದು. ಹಾಲಿ ಶಾಸಕರು ಗೃಹ ಸಚಿವ ಆರಗ ಜ್ಞಾನೇಂದ್ರ. ಇದು ನನ್ನ ಕೊನೆಯ ಚುನಾವಣೆ ಎಂದು ಅವರು ಘೋಷಣೆ ಮಾಡಿದ್ದಾರೆ. ಬಿಜೆಪಿಯ ಪಟ್ಟಿಯಲ್ಲಿ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ಆದರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕಗ್ಗಂಟಾಗಿತ್ತು.
ಮಾಜಿ ಸಚಿವ, ಕ್ಷೇತ್ರದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಪ್ತರಾದ ಆರ್. ಎಂ. ಮಂಜುನಾಥ ಗೌಡರು ಸಹ ಟಿಕೆಟ್ ಬಯಸಿದ್ದರು. ಆದ್ದರಿಂದ ಈ ಬಾರಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಎದ್ದಿತ್ತು. ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗದ ಕಾರಣ ಕುತೂಹಲ ಹೆಚ್ಚಾಗಿತ್ತು.

ಅಂತಿಮವಾಗಿ ಡಿ. ಕೆ. ಶಿವಕುಮಾರ್ ಕಿಮ್ಮನೆ ರತ್ನಾಕರ್ ಮತ್ತು ಆರ್. ಎಂ. ಮಂಜುನಾಥ ಗೌಡರ ಜೊತೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು. ಅಂತಿಮವಾಗಿ 2ನೇ ಪಟ್ಟಿಯಲ್ಲಿ ಕಿಮ್ಮನೆ ರತ್ನಾಕರ್ ಅಭ್ಯರ್ಥಿ ಎಂದು ಘೋಷಣೆಯಾಯಿತು. ಆರ್. ಎಂ. ಮಂಜುನಾಥ ಗೌಡ ಅಸಮಾಧಾನಗೊಂಡಿದ್ದಾರೆ, ಬೆಂಬಲಿಗರ ಸಭೆ ಕರೆದಿದ್ದಾರೆ, ಕೊಪ್ಪ ಮೂಲದ ಪ್ರಭಾವಿ ವ್ಯಕ್ತಿಯೊಬ್ಬರು ಸಂಧಾನ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಅಂತಿಮವಾಗಿ ಸೋಮವಾರ ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿ; ಸೋಮವಾರ ಕಿಮ್ಮನೆ ರತ್ನಾಕರ್ ಮತ್ತು ಆರ್. ಎಂ. ಮಂಜುನಾಥ ಗೌಡ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಆರ್. ಎಂ. ಮಂಜುನಾಥ ಗೌಡ ಮಾತನಾಡಿ, "ಈ ಚುನಾವಣೆ ದೇಶ ಮತ್ತು ರಾಜ್ಯಕ್ಕೆ ಒಂದು ಸಂದೇಶ ಕೊಡುವಂತಹದ್ದು. ಇಷ್ಟು ದೊಡ್ಡ ಮಟ್ಟದಲ್ಲಿ ಬೆಲೆ ಏರಿಕೆ ಆಗಿರಲಿಲ್ಲ, ನಿರುದ್ಯೋಗ ಸಮಸ್ಯೆ ಕಾಡಿರಲಿಲ್ಲ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಆಡಳಿತ ಪಕ್ಷ ವಿರೋಧಿಗಳನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ" ಎಂದು ಆರೋಪಿಸಿದರು.
"ಒಬ್ಬರು ಗೃಹ ಸಚಿವರಾದರೆ ಹೇಗಾದರೂ ತಡೆದುಕೊಳ್ಳಬಹುದು. ಆದರೆ ಕ್ಷೇತ್ರದಲ್ಲಿ ಹತ್ತಾರು ಗೃಹ ಸಚಿವರು ಆದರೆ ಅದನ್ನು ತಡೆದುಕೊಳ್ಳುವುದು ಕಷ್ಟ. ಆ ಕಾರಣಕ್ಕಾಗಿಯೇ ಇದೊಂದು ವಿಶೇಷವಾದ ಚುನಾವಣೆ. ಈಗಾಗಲೇ ನಾವು ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇವೆ. ಬಿಜೆಪಿಯಿಂದ ಇನ್ನೂ ನಮಗೆ ಅಧಿಕೃತವಾದ ಅಭ್ಯರ್ಥಿ ಸಿಕ್ಕಿಲ್ಲ. ಕಿಮ್ಮನೆ ರತ್ನಾಕರ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಾರ್ಯಕರ್ತರಲ್ಲಿ ಕೆಲವು ಭಿನ್ನಾಭಿಪ್ರಾಯವಿತ್ತು. ಅದನ್ನು ಬಗೆಹರಿಸಿಕೊಂಡು ನಮ್ಮ ಅಭ್ಯರ್ಥಿ ಗೆಲುವಿಗಾಗಿ ಕೆಲಸ ಆರಂಭಿಸಿದ್ದೇವೆ. ಕ್ಷೇತ್ರದ ಸಂಖ್ಯೆ 114 ಬಹುಮತ ಬರಲು 113 ಗೆಲ್ಲಬೇಕು ಹಾಗಾಗಿ ಗೆಲುವು ನಮ್ಮ ಕ್ಷೇತ್ರದಿಂದಲೇ ಆರಂಭವಾಗಲಿ" ಎಂದರು.
ಕಿಮ್ಮನೆ ರತ್ನಾಕರ್ ಮಾತು; ಮಾಜಿ ಸಚಿವ, ಈ ಬಾರಿಯ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಮಾತನಾಡಿ, "ಬಿಜೆಪಿಯವರು ಇಲ್ಲಿಯ ತನಕ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ. ಜಲಜೀವನ್ ಮಿಷನ್ ಅಡಿ 2500 ಕೋಟಿ ಬಂದರೆ ಪ್ರತಿ ಮನೆಗೂ ಕುಡಿಯುವ ನೀರನ್ನು ಕೊಡುತ್ತೇವೆ ಎಂದರು. ಆದರೆ ಪೈಪ್‌ನಲ್ಲಿ ನೀರೇ ಬರುವುದಿಲ್ಲ. 40 ವರ್ಷಗಳಿಂದ ಆರಗ ಜ್ಞಾನೇಂದ್ರ ಒಬ್ಬರೇ ಕೆಲಸ ಮಾಡುತ್ತಿದ್ದಾರೆ. ಕೊಪ್ಪ ಸರ್ಕಲ್‌ನಿಂದ ಮಲ್ಪೆ ತನಕ ಯಾರು ರಾಜ್ಯ ಹೆದ್ದಾರಿ ಮಾಡಿಸಿದ್ದು ಎಂದು ಹೇಳಲಿ. ಅವರು ನಾನು ಮಾಡಿಸಿದ್ದು ಎಂದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ" ಎಂದು ಸವಾಲು ಹಾಕಿದರು.
"ಕಳೆದ ಬಾರಿ ನಂದಿತಾ ಪ್ರಕರಣ ಮುಂದಿಟ್ಟುಕೊಂಡು ಗೆಲುವು ಸಾಧಿಸಿದರು. ಈ ಬಾರಿಯೂ ಕೋಮು ದ್ವೇಷವನ್ನು ಹರಡಲು ಮಂಡಗದ್ದೆ ಭಾಗದಲ್ಲಿ ಮತ್ತು ತೀರ್ಥಹಳ್ಳಿ ಪಟ್ಟಣದಲ್ಲಿ ಪ್ರಯತ್ನ ನಡೆಸಿದರು. ಏಪ್ರಿಲ್ 19ರಂದು ನಾನು ನಾಮಪತ್ರವನ್ನು ಸಲ್ಲಿಕೆ ಮಾಡುತ್ತೇನೆ" ಎಂದು ಕಿಮ್ಮನೆ ರತ್ನಾಕರ್ ಹೇಳಿದರು.












Click it and Unblock the Notifications