ರಾಷ್ಟ್ರೀಯ ಪಕ್ಷಗಳಿಗೆ ಕುಮಾರಸ್ವಾಮಿ ಪ್ರಶ್ನೆಗಳು!
ಶಿವಮೊಗ್ಗ, ಫೆಬ್ರವರಿ 12 : 'ರಾಜ್ಯದಲ್ಲಿ ಅನೇಕ ಸಮಸ್ಯೆಗಳಿದ್ದರೂ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಅವುಗಳ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ' ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತೀರ್ಥಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳಾಗಿದ್ದು, ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸುತ್ತಿಲ್ಲ' ಎಂದು ದೂರಿದರು.
'ಬಿಜೆಪಿ ನಾಯಕರು ಕೊಳಗೇರಿಯಲ್ಲಿ ವಾಸ್ತವ್ಯ ಹೂಡುವುದಾಗಿ ಹೇಳಿ ಎರಡು ಅಂತಸ್ತಿನ ಮನೆಯಲ್ಲಿ ಮಲಗಿ ಎದ್ದು ಬಂದಿದ್ದಾರೆ. ಅದು ಕೊಳಗೇರಿ ವಾಸ್ತವ್ಯವೇ?' ಎಂದು ಪ್ರಶ್ನಿಸಿದರು.

'ಚುನಾವಣೆ ಹತ್ತಿರ ಬರುತ್ತಿರುವಾಗ ಸ್ಲಂಗಳ ಅಭಿವೃದ್ದಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸ್ಲಂಗಳ ಅಭಿವೃದ್ಧಿಗೆ ಏಕೆ ಕ್ರಮ ಕೈಗೊಳ್ಳಲಿಲ್ಲ?' ಎಂದರು.
'ನೀರಾವರಿ ಸೇರಿದಂತೆ ಅನೇಕ ಸಮಸ್ಯೆಗಳು ರಾಜ್ಯದಲ್ಲಿವೆ. ಆದರೆ, ಬಿಜೆಪಿ ನಾಯಕರು ಅವುಗಳ ಬಗ್ಗೆ ಗಮನಹರಿಸಿ ಮಾತನಾಡದೇ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಕುಮಾರಸ್ವಾಮಿ ದೂರಿದರು.
'ಕಾಂಗ್ರೆಸ್ ನಾಯಕರು ಪ್ರಧಾನಿಯವರನ್ನು ಗುರಿಯಾಗಿಸಿಕೊಂಡು ಮಾತ್ರ ಮಾತನಾಡುತ್ತಿದ್ದಾರೆ. ರೈತರ ಸಾಲ ಮನ್ನಾ, ಕುಡಿಯುವ ನೀರಿನ ಯೋಜನೆಗಳ ಬಗ್ಗೆ ರಾಜ್ಯದಲ್ಲಿ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಮೌನ ವಹಿಸಿದ್ದಾರೆ' ಎಂದು ಹೇಳಿದರು.
'ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಜೆಡಿಎಸ್ ಪಕ್ಷಕ್ಕೆ ರಾಜ್ಯದ ಜನ ಆಶೀರ್ವಾದ ಮಾಡಿದಲ್ಲಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ' ಕುಮಾರಸ್ವಾಮಿ ಭರವಸೆ ನೀಡಿದರು.











Click it and Unblock the Notifications