ನನ್ನ ತಮ್ಮ 'ಮಧು' ಮಿನಿಸ್ಟರ್ ಆಗುತ್ತಾನೆ: ಗೀತಾ ಶಿವರಾಜ್‌ಕುಮಾರ್ ಹೇಳಿಕೆ
ಶಿವಮೊಗ್ಗ: 'ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲಿದ್ದು, ನನ್ನ ತಮ್ಮ ಮಧು ಬಂಗಾರಪ್ಪ ಭರ್ಜರಿಯಾಗಿ ಗೆಲುವು ಸಾಧಿಸಿದ್ದು, ಖಂಡಿತ ಸಚಿವನಾಗುತ್ತಾನೆ' ಎಂದು ಗೀತಾ ಶಿವರಾಜ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೊರಬದಲ್ಲಿ ಸಹೋದರ, ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ವಿರುದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಧು ಬಂಗಾರಪ್ಪ ಜಯಗಳಿಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ತಮ್ಮನ ಗೆಲುವಿನ ಬಗ್ಗೆ ಮೊದಲೇ ಖಾತ್ರಿ ಇತ್ತು. ಸೊರಬ ಜನತೆ ಇಷ್ಟೊಂದು ಮತಗಳ ಅಂತರದಲ್ಲಿ ಗೆಲ್ಲಿಸಿರುವುದಕ್ಕೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ.

'ನಟ ಶಿವರಾಜ್‌ಕುಮಾರ್ ಹಾಗೂ ಸೊರಬದ ಮುಖಂಡರು ಮಾಡಿದ ಪ್ರಚಾರ, ತಂದೆ, ತಾಯಿಯ ಆಶೀರ್ವಾದ ಮಧು ಬಂಗಾರಪ್ಪ ಗೆಲುವಿಗೆ ನೆರವಾಗಿದೆ. ಇಲ್ಲಿ ಸತ್ಯ ಗೆದ್ದಿದೆ. ತಮ್ಮ ಮಧು ಹೇಳಿದ ಕಡೆಯೆಲ್ಲ ನಾನು ಪ್ರಚಾರ ಮಾಡಿದ್ದೆ' ಎಂದು ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ.
ಸೊರಬದಲ್ಲಿ ಬಿಜೆಪಿಯ ಕುಮಾರ್ ಬಂಗಾರಪ್ಪ 53794 ಮತಗಳನ್ನು ಗಳಿಸಿದ್ರೆ, ಮಧು ಬಂಗಾರಪ್ಪ 97932 ಮತಗಳನ್ನು ಪಡೆದು, ಸುಮಾರು 40 ಸಾವಿರ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ. ಜೆಡಿಎಸ್ನಿಂದ ಬಿ.ಚಂದ್ರೇಗೌಡ ಹಾಗೂ ಎಎಪಿಯಿಂದ ಚಂದ್ರಶೇಖರ್ ಪ್ರತಿಸ್ಪರ್ಧಿಗಳಾಗಿದ್ದರು.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡಿದ್ದ ಮಧು ಬಂಗಾರಪ್ಪ, ಈ ಬಾರಿ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದು ಯಶಸ್ವಿಯಾಗಿದ್ದಾರೆ. 224 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 132, ಬಿಜೆಪಿ 62 ಹಾಗೂ ಜೆಡಿಎಸ್ 19, ಇತರರು ನಾಲ್ಕು ಕ್ಷೇತ್ರದಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.











Click it and Unblock the Notifications