ಭದ್ರಾ ಡ್ಯಾಂನಿಂದ 11,574 ಕ್ಯೂಸೆಕ್ ನೀರು ಬಿಡುಗಡೆ, ವೇಳಾಪಟ್ಟಿ
ಶಿವಮೊಗ್ಗ, ಮೇ 22: ಶಿವಮೊಗ್ಗದಲ್ಲಿರುವ ಭದ್ರಾ ಜಲಾಶಯದಿಂದ ಪ್ರತಿದಿನ 2000 ಕ್ಯುಸೆಕ್‌ನಂತೆ ಒಟ್ಟು 11,574 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತದೆ. ತುಂಗಭದ್ರಾ ನದಿಗೆ ನೀರು ಹರಿಸುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ. ಪೂರ್ವ ಮುಂಗಾರು ಮಳೆಯ ಅಬ್ಬರದ ಕಾರಣಕ್ಕೆ ಡ್ಯಾಂಗೆ ಒಳಹರಿವು ಸಹ ಹೆಚ್ಚಳವಾಗಿದೆ.

ತುಂಗಭದ್ರಾ ನದಿ ಪಾತ್ರದ ಗದಗ, ಹಾವೇರಿ ಜಿಲ್ಲಾ ವ್ಯಾಪ್ತಿಗೆ ಬರುವ ಗ್ರಾಮಗಳ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಮೇ 22ರ ಬುಧವಾರ ರಾತ್ರಿ 10ರಿಂದ 28ರವರೆಗೆ ಪ್ರತಿ ದಿನ 2000 ಕ್ಯುಸೆಕ್‌ಗಳಂತೆ ಒಟ್ಟು 11,574 ಕ್ಯೂಸೆಕ್ ನೀರು ಹರಿಸಲಾಗುತ್ತದೆ.
ಜನರಿಗೆ ಮಾಹಿತಿ: ಮೇ 22ರಿಂದ 28ರವರೆಗೆ ತುಂಗಭದ್ರಾ ನದಿಗೆ ನೀರು ಹರಿಸುವುದರಿಂದ
ಈ ಅವಧಿಯಲ್ಲಿ ಸಾರ್ವಜನಿಕರು ನದಿ ಪಾತ್ರದಲ್ಲಿ ತಿರುಗಾಡುವುದು, ದನಕರುಗಳನ್ನು ನದಿಗೆ ಇಳಿಸುವುದು ಇತ್ಯಾದಿ ಚಟುವಟಿಕೆಗಳನ್ನು ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ರೈತರು ನದಿ ದಂಡೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳಿಂದ ನೀರೆತ್ತುವುದನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಎಂಡಿಸಿ) ಮಾಹಿತಿ ಪ್ರಕಾರ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದ ನೀರಿನ ಸಾಮರ್ಥ್ಯ 71.54 ಟಿಎಂಸಿ ಅಡಿ, ಇಂದಿನ ನೀರಿನ ಮಟ್ಟ 13.83 ಟಿಎಂಸಿ ಅಡಿಗಳು.
ಚಿಕ್ಕಮಗಳೂರು ಭಾಗದಲ್ಲಿ ಪೂರ್ವ ಮುಂಗಾರು ಮಳೆಯು ಅಬ್ಬರಿಸುತ್ತಿದೆ. ಆದ್ದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಬುಧವಾರ ಜಲಾಶಯಕ್ಕೆ 2332 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಹೊರ ಹರಿವು 376 ಕ್ಯುಸೆಕ್ ಆಗಿದೆ.
ಏಪ್ರಿಲ್ ತಿಂಗಳಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ನೇತೃತ್ವದ ನಿಯೋಗ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿಯೊಂದನ್ನು ಸಲ್ಲಿಸಿತ್ತು.
ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಬಾರದು ಈಗಾಗಲೇ ಗದಗ, ಹಾವೇರಿ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಭದ್ರಾ ಡ್ಯಾಂನಿಂದ ನದಿಗೆ ನೀರು ಹರಿಸಲಾಗಿದೆ. ಈಗ ಮತ್ತೆ ನೀರು ಹರಿಸಬಾರದು ಎಂದು ಮನವಿ ಮಾಡಲಾಗಿತ್ತು.
2023ರ ನೈಋತ್ಯ ಮುಂಗಾರು ಅವಧಿಯಲ್ಲಿ ಮಳೆ ಕೊರೆತೆ ಭದ್ರಾ ಡ್ಯಾಂ ಭರ್ತಿಯಾಗಿರಲಿಲ್ಲ. ಡ್ಯಾಂ ನೀರು ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳು ಮಾತ್ರವಲ್ಲದೇ ಗದಗ, ಹಾವೇರಿ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಸಹ ಆಧಾರವಾಗಿದೆ. ಕುಡಿಯುವ ನೀರಿನ ಯೋಜನೆಗಳಿಗೆ ನೀರೆತ್ತಲು ಡ್ಯಾಂ ನೀರು ನದಿಗೆ ಹರಿಸಲೇಬೇಕಾಗುತ್ತದೆ.
ಭದ್ರಾ ಡ್ಯಾಂನಿಂದ ಮಾರ್ಚ್ 29ರಿಂದ ಏಪ್ರಿಲ್ 6ರ ತನಕ 10 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿತ್ತು. ಕರ್ನಾಟಕ ನೀರಾವರಿ ನಿಗಮದ ಸೂಚನೆಯಂತೆ ಬರಗಾಲದ ಹಿನ್ನಲೆಯಲ್ಲಿ ತುಂಗಭದ್ರಾ ನದಿ ಪಾತ್ರದ ಗ್ರಾಮ-ಪಟ್ಟಣಗಳಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ನೀರು ಬಿಡಲಾಗಿತ್ತು.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಭದ್ರಾ ಡ್ಯಾಂ ನೀರನ್ನು ಸಂಗ್ರಹ ಮಾಡಲಾಗಿದೆ. ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ. ದಾವಣಗೆರೆ ಭಾಗದ ರೈತರು ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವ ಸಂಬಂಧ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯನ್ನು ತಕ್ಷಣ ಕರೆಯಬೇಕು. ಜಿಲ್ಲೆಯಲ್ಲಿ ಬೆಳೆಗಳು ಒಣಗುತ್ತಿವೆ, ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.












Click it and Unblock the Notifications