ಸಹ್ಯಾದ್ರಿ ಉತ್ಸವಕ್ಕೆ ವೈಭವದ ಚಾಲನೆ, ಸಂಭ್ರಮಿಸಿದ ಮಲೆನಾಡಿಗರು
ಶಿವಮೊಗ್ಗ, ಜನವರಿ 24 : ಕಳೆದ 10 ವರ್ಷಗಳ ನಂತರ ನಗರದಲ್ಲಿ ನಡೆಯುತ್ತಿರುವ ಸಹ್ಯಾದ್ರಿ ಉತ್ಸವ ಜನರ ಸಂಭ್ರಮವನ್ನು ಹೆಚ್ಚಿಸಿದೆ. ಮೊದಲ ದಿನವೇ ಸಹ್ಯಾದ್ರಿ ಉತ್ಸವ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜಿಲ್ಲಾಡಳಿತದ ಪ್ರಯತ್ನಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಜಿಲ್ಲಾ ಬಸ್ ಟೂರ್, ಸೈಕಲ್ ರೇಸ್, ಹೆಲಿಟೂರ್, ವಾಟರ್ ಸ್ಪೋರ್ಟ್ಸ್, ಕೆಸರು ಗದ್ದೆ ಓಟ, ಪ್ಯಾರಾಗ್ಲೈಡಿಂಗ್, ಮಹಿಳಾ ಸಂಸ್ಕೃತಿ ಉತ್ಸವ, ರಂಗೋಲಿ ಸ್ಪರ್ಧೆ, ಮಹಿಳಾ ಕವಿ ಗೋಷ್ಟಿ, ಸಾಹಸ ಕ್ರೀಡೆಗಳು ಸಹ್ಯಾದ್ರಿ ಉತ್ಸವದ ಆರಂಭಕ್ಕೆ ಮೆರಗು ನೀಡಿದೆ.
ಸರ್ಕೀಟ್ ಹೌಸ್ ಹೆಲಿಪ್ಯಾಡ್ ನಿಂದ ಹೆಲಿಟೂರ್ ಆರಂಭವಾಗಿದ್ದು, ಭಾರೀ ಬೇಡಿಕೆ ಹೆಚ್ಚಿದೆ. ಶಿವಮೊಗ್ಗದ ಸೊಬಗನ್ನು ಹೆಲಿಕಾಪ್ಟರ್ ಮೂಲಕ ಕಣ್ತುಂಬಿಕೊಳ್ಳಲು ಜನ ಮಿಸ್ ಮಾಡಿಕೊಳ್ಳಲಿಲ್ಲ. ಹೆಲಿಕಾಪ್ಟರ್ ನಲ್ಲಿ ಹಾರಾಡಿ ನಗರದ ಸೌಂದರ್ಯ ಕಣ್ತುಂಬಿಕೊಂಡವರ ಸಂಭ್ರಮವಂತೂ ಹೇಳತೀರದು.
ಇನ್ನು ಗೊಂದಿಚಟ್ನಳ್ಳಿಯಲ್ಲಿ ಕೆಸರುಗದ್ದೆ ಓಟಕ್ಕೆ ಚಾಲನೆ ನೀಡಲಾಯಿತು. ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್, ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಮೊದಲಾದವರು ಓಟಕ್ಕೆ ಚಾಲನೆ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಯುವಕರು, ಯುವತಿಯರು ಕೆಸರಿನಲ್ಲಿ ಓಡುವ ಮೂಲಕ ಗಮನಸೆಳೆದರು. ಮುಂದೆ ಓದಿ...

ಜಿಲ್ಲಾ ಬಸ್ ಟೂರ್
ನಗರದ ಸೈನ್ಸ್ ಮೈದಾನದಲ್ಲಿ ಜಿಲ್ಲಾ ಬಸ್ ಟೂರ್ ಆರಂಭವಾಯಿತು. ಸೈನ್ಸ್ ಮೈದಾನದಿಂದ ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳಿಗೆ ಹೋಗಿ ವಾಪಾಸ್ ಬರಲಿರುವ ಜಿಲ್ಲಾ ಟೂರ್ ಪ್ರವಾಸಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬರಿಗಾಲಲ್ಲಿ ಎರಡು ಬಾರಿ ದೇಶ ಸುತ್ತಿದ ದೇವಿತೋ ನಾಗೇಶ್, ಅಪರ ಜಿಲ್ಲಾಧಿಕಾರಿ ಅನುರಾಧ, ಜಿ.ವಿಜಯಕುಮಾರ್ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಪ್ಯಾರಾಗ್ಲೈಡಿಂಗ್
ಇನ್ನು ಪ್ಯಾರಾಗ್ಲೈಡಿಂಗ್ ಅಂತೂ ವಿಶೇಷವಾಗಿತ್ತು. ನವುಲೆ ಕ್ರೀಡಾಂಗಣದಲ್ಲಿ ನಡೆದ ಪ್ಯಾರಾಗ್ಲೈಡಿಂಗ್ ನಲ್ಲಿ ಅನೇಕ ಮಂದಿ ಮೈಚಳಿ ಬಿಟ್ಟು ಹಾರಾಟ ನಡೆಸಿದರು. ಎತ್ತರದಲ್ಲಿ ಹಕ್ಕಿಯಂತೆ ಹಾರಾಡಿ ಸಂಭ್ರಮಿಸಿದರು. ಜಿಲ್ಲಾಧಿಕಾರಿ ದಯಾನಂದ್ ಅವರೂ ಪ್ಯಾರಾಗ್ಲೈಡಿಂಗ್ ಮಾಡಿ ಗಮನ ಸೆಳೆದರು. ಆನಂತರ ಇದೊಂದು ವಿಭಿನ್ನ ಅನುಭವ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಮನಸೂರೆಗೊಂಡ ರಂಗೋಲಿ
ನಗರದ ಕುವೆಂಪು ರಂಗಮಂದಿರದಲ್ಲಿ ಮಹಿಳಾ ಸಹ್ಯಾದ್ರಿ ಉತ್ಸವದ ಅಂಗವಾಗಿ ನಡೆದ ರಂಗೋಲಿ ಮತ್ತು ಚಿತ್ರಕಲಾ ಸ್ಪರ್ಧೆ ವಿಶೇಷವಾಗಿತ್ತು. ಆಕರ್ಷಕ ಚಿತ್ತಾರದ ಬಣ್ಣದ ರಂಗೋಲಿಗಳನ್ನು ಮಹಿಳೆಯರು ಬಿಡಿಸಿದ್ದು, ನೋಡುಗರ ಮನಸೂರೆಗೊಳ್ಳುವಂತಿತ್ತು.

ಸೈಕಲ್ ರೇಸ್ ಗೆ ಚಾಲನೆ
ಶಿಕಾರಿಪುರದ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದಿಂದ ಪುರುಷರ ಸೈಕಲ್ ರೇಸ್ ಗೆ ಶೇಖರ್ ನಾಯ್ಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಮೊದಲಾದವರಿದ್ದರು. ಸೂರಗೊಂಡನಕೊಪ್ಪದ ಸೇವಾಲಾಲ್ ದೇವಸ್ಥಾನದಿಂದ ಮಹಿಳೆಯರ ಸೈಕಲ್ ರೇಸ್ ಗೆ ಚಾಲನೆ ನೀಡಲಾಯಿತು.












Click it and Unblock the Notifications