ಬಿಜೆಪಿಗೆ ಆಗಮಿಸುವಂತೆ ಕಾಂಗ್ರೆಸ್ ಶಾಸಕರಿಗೆ ಆಹ್ವಾನ ನೀಡಿದ ಈಶ್ವರಪ್ಪ
ಶಿವಮೊಗ್ಗ, ಜೂನ್.07 : ಸಚಿವ ಸಂಪುಟ ರಚನೆ ಬಳಿಕ ಕಾಂಗ್ರೆಸ್ ಶಾಸಕರು ತಮ್ಮ ಪಕ್ಷದ ಬಗ್ಗೆ ನಿರಾಶೆ ಹೊಂದಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಬಹುಮತ ಸಾಬೀತುಪಡಿಸಬೇಕು. ನಾವು ನಿಮ್ಮ ಜೊತೆ ಇದ್ದೇವೆ ಎಂದು ಕೆಲ ಕಾಂಗ್ರೆಸ್ ಶಾಸಕರು ಹೇಳಿದ್ದರು. ಆದರೆ ಅಂದು ಅವರನ್ನು ಬಂಧನದಲ್ಲಿಡಲಾಗಿತ್ತು. ಈಗ ಆ ಶಾಸಕರ ಆಕ್ರೋಶ ಭುಗಿಲೆದ್ದಿದೆ ಎಂದು ತಿಳಿಸಿದರು.
ಇದೀಗ ಕಾಂಗ್ರೆಸ್ ಪಕ್ಷ ಬೆತ್ತಲಾಗಿದೆ. ಕಾಂಗ್ರೆಸ್ ಬಗ್ಗೆ ನಿರಾಸೆ ಹೊಂದಿರುವುದಾಗಿ ಶಾಸಕರು ನೇರವಾಗಿ ಹೇಳುತ್ತಿದ್ದಾರೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಶಾಸಕರು ನಿರಾಶರಾಗಿಲ್ಲ . ಬದಲಾಗಿ ಕಾಂಗ್ರೆಸ್ ಪಕ್ಷದ ನಡೆಯಿಂದ ಬೇಸರಗೊಂಡಿದ್ದಾರೆ.

ಹೀಗೆ ಬೇಸರಗೊಂಡಿರುವ ಕಾಂಗ್ರೆಸ್ ಶಾಸಕರು ರಾಷ್ಟ್ರ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಮೋದಿ ಆಡಳಿತ ಮೆಚ್ಚಿ ಬಿಜೆಪಿಗೆ ಆಗಮಿಸುವಂತೆ ಕೆ.ಎಸ್. ಈಶ್ವರಪ್ಪ ಆಹ್ವಾನ ನೀಡಿದರು.












Click it and Unblock the Notifications