ಪಂಚಮಸಾಲಿ ಮೀಸಲಾತಿ: ಸರಕಾರಕ್ಕೆ ರಾತ್ರಿ 12 ಗಂಟೆವರೆಗೂ ಗಡುವು ನೀಡಿದ ಸ್ವಾಮೀಜಿ
ಶಿವಮೊಗ್ಗ, ಆಗಸ್ಟ್ 22: ಪಂಚಮಸಾಲಿ ಲಿಂಗಾಯತರಿಗೆ ಸರಕಾರ ಕೊಟ್ಟ ಮಾತಿನಂತೆ ಮೀಸಲಾತಿ ಘೋಷಿಸಬೇಕು. ಸೋಮವಾರ ಮಧ್ಯರಾತ್ರಿವರೆಗೆ ಸರ್ಕಾರಕ್ಕೆ ಗಡುವು ನೀಡುತ್ತಿದ್ದೇವೆ ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ , ಪಂಚಮಸಾಲಿ ಲಿಂಗಾಯಿತರಿಗೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ ಅಷ್ಟರಲ್ಲಿ ಅವರು ಅಧಿಕಾರ ಕಳದುಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ತಿಂಗಳು ಸಮಯ ಕೇಳಿದ್ದರು. ಈ ಅವಧಿ ಮುಗಿದಿದೆ. ಇದೀಗ ಸೋಮವಾರ ಮಧ್ಯರಾತ್ರಿ 12 ಗಂಟೆವರೆಗೂ ಸರಕಾರಕ್ಕೆ ಗಡುವು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಎರಡು ತಿಂಗಳು ಗಡುವು ನೀಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಳಿದ್ದರು. ಈಗ ತಾವು ಗಡುವು ನೀಡಿಲ್ಲ ಎಂದು ಮುಖ್ಯಮಂತ್ರಿ ಅವರು ಹೇಳಿಕೆ ನೀಡಿದ್ದಾರೆ. ಈ ರೀತಿ ಗೊಂದಲ ಸೃಷ್ಟಿ ಮಾಡುವುದು ತಪ್ಪು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಬಿಎಸ್‌ವೈ-ಬೊಮ್ಮಾಯಿ ರಾತ್ರಿಯೊಳಗೆ ಹೇಳಿಕೆ ನೀಡಲಿ
ಅಲ್ಲದೆ ಬಸವರಾಜ್ ಬೊಮ್ಮಾಯಿ ಅವರ ಆಡಳಿತ ಕೊನೆಗೊಳ್ಳುತ್ತಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಈವರೆಗಿನ ನಮ್ಮ ಹೋರಾಟ ವ್ಯರ್ಥವಾದಂತೆ ಆಗುತ್ತದೆ. ಮೀಸಲು ಹಕ್ಕೊತ್ತೋಯಕ್ಕಾಗಿ ಪುನಃ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಮೀಸಲಾತಿ ಘೋಷಣೆ ಸಾಕಷ್ಟು ವಿಳಂಬವಾಗುತ್ತಿರುವುದರಿಂದ ಸಮುದಾಯದಲ್ಲಿ ನನ್ನ ಮೇಲೆ ಅನುಮಾನ ಆರಂಭವಾಗಿದೆ. ಇಂದು ರಾತ್ರಿಯೊಳಗೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಈ ಸಂಬಂಧ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.

ಜ್ಞಾಪನ ಪತ್ರ ಚಳವಳಿ
ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಮತ್ತೆ ಚಳವಳಿ ನಡೆಸಲಾಗುತ್ತಿದೆ. ಆಗಸ್ಟ್ 23ರಂದು ಶಿಗ್ಗಾವಿಯಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಭೆಯಲ್ಲಿ ಮಾತನಾಡಲಿದ್ದಾರೆ. ಪಂಚಮಸಾಲಿ ಲಿಂಗಾಯಿತರಿಗೆ ಮೀಸಲಾತಿ ನೀಡದಿರಲು ಕಾರಣವೇನು? ಯಾರು ಇದಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಲಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಇನ್ನು, ಆಗಸ್ಟ್ 25ರಂದು ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಯಡಿಯೂರಪ್ಪ ಅವರಿಗೆ ಜ್ಞಾಪನ ಪತ್ರ ನೀಡಲಾಗುತ್ತದೆ. ಆ ದಿನ ದೊಡ್ಡ ಸಂಖ್ಯೆಯಲ್ಲಿ ಪಂಚಮಸಾಲಿ ಲಿಂಗಾಯತರು ಸೇರಬೇಕು. ಯಡಿಯೂರಪ್ಪ ಅವರು ಬಂದರೆ ಅಲ್ಲಿಯೇ ಅವರಿಗೆ ಜ್ಞಾಪನ ಪತ್ರ ನೀಡುತ್ತೇವೆ. ಇಲ್ಲವಾದಲ್ಲಿ ಅವರ ಮನೆಗೆ ತೆರಳಿ ಜ್ಞಾಪನ ಪತ್ರ ನೀಡಲಿದ್ದೇವೆ ಎಂದು ತಿಳಿಸಿದರು.

ಎಲ್ಲಾ ಪಕ್ಷಗಳಿಂದಲೂ ಬೆಂಬಲ
''ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ತಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕೂಡ ಬೆಂಬಲ ಘೋಷಿಸಿದ್ದಾರೆ. ಆದರೆ ಎರಡು ಪಕ್ಷಗಳು ಅಧಿಕೃತವಾಗಿ ಬೆಂಬಲ ಘೋಷಿಸಿಲ್ಲ. ಬಿಜೆಪಿ ಬೆಂಬಲ ಘೋಷಿಸಿದೆ. ಎಂಟು ವರ್ಷವಾದರೂ ಮೀಸಲಾತಿ ಸಿಕ್ಕಿಲ್ಲ. ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಯಲ್ಲಿ ಸುಪ್ರೀಂ ಅಧಿಕಾರವಿದೆ. ಅವರು ವಿಳಂಬ ಮಾಡಬಾರದು'' ಎಂದು ಸ್ವಾಮೀಜಿ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ತಿಂಗಳು ಪ್ರಚಾರ
ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ ಅವರು ಮಾತನಾಡಿ, ''ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಯಡಿಯೂರಪ್ಪ ಅವರು ಧ್ವನಿ ಎತ್ತಬೇಕಿದೆ. ಅವರು ಮಾತನಾಡಿದರೆ ಪಂಚಮಸಾಲಿ ಲಿಂಗಾಯತರು ಮತ್ತು ಇತರೆ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಲಿದೆ. ಇನ್ನು, ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ತಿಂಗಳು ಮನೆ ಮನೆ ಪ್ರಚಾರ ಮಾಡಲಿದ್ದೇವೆ. ಸಾಮಾಜಿಕ ನ್ಯಾಯ ಸಿಗದಿರಲು ಕಾರಣ ಯಾರು ಅನ್ನುವುದನ್ನು ಸ್ವಾಮೀಜಿಗಳ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇವೆ'' ಎಂದು ಎಚ್ಚರಿಸಿದರು.












Click it and Unblock the Notifications