ಶಿವಮೊಗ್ಗ ಕ್ಷೇತ್ರದಲ್ಲಿ ಮತ ಚಲಾಯಿಸಿದ ಪ್ರಮುಖ ಹುರಿಯಾಳುಗಳು
ಶಿವಮೊಗ್ಗ, ಏಪ್ರಿಲ್ 23:ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ಉತ್ತಮ ಮತದಾನವಾಗಿದ್ದು, ಈ ಬಾರಿ ಶೇ.80 ರಷ್ಟು ಹೆಚ್ಚಿನ ಮತದಾನವಾಗುವ ನಿರೀಕ್ಷೆ ಇದೆ.
ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡ ಕ್ಷಣದಿಂದಲೇ ಮತಗಟ್ಟೆಗಳಿಗೆ ಜನ ಧಾವಿಸಿ ಮತ ಚಲಾಯಿಸಿದರು. ಬಿಸಿಲ ಬೇಗೆಯನ್ನೂ ಲೆಕ್ಕಿಸದೆ ಮತವಾಗುತ್ತಿರುವುದು ಮತದಾರರಲ್ಲಿ ಉತ್ಸಾಹ ಮತ್ತಷ್ಟು ಇಮ್ಮಡಿಗೊಳಿಸಿತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜಿಲ್ಲೆಯ ಪ್ರಮುಖ ನಾಯಕರ ಮತದಾನ
ವಿಪಕ್ಷ ನಾಯಕ ಬಿ.ಎಸ್.ಯಡಯೂರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಪತ್ನಿ ತೇಜಸ್ವಿನಿ, ಪುತ್ರ ವಿಜೇಂದ್ರ ಒಟ್ಟಿಗೆ ಶಿಕಾರಿಪುರದ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಮತ ಚಲಾಯಿಸಿದರು.

ಮಾಜಿ ಸಭಾಪತಿ ಡಿ.ಹೆಚ್.ಶಂಕರ ಮೂರ್ತಿ ಬಸವನ ಗುಡಿಯ ಸಾಯಿಮಂದಿರದಲ್ಲಿ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು. ಶಾಸಕ ಕೆ.ಎಸ್.ಈಶ್ವರಪ್ಪ ಸೈನ್ಸ್ ಮೈದಾನದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತಚಲಾಯಿಸಿದರು.
ಕುಬಟೂರಿನಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಇದಕ್ಕೂ ಮೊದಲು ಮಧುಬಂಗಾರಪ್ಪ ತಂದೆ ಬಂಗಾರಪ್ಪ ಹಾಗೂ ತಾಯಿ ಶಕುಂತಲಮ್ಮನವರ ಪೋಟೋಗಳಿಗೆ ಪೂಜೆ ಸಲ್ಲಿಸಿ ಬಳಿಕ ಗ್ರಾಮದೇವತೆ ದ್ಯಾವಮ್ಮ ದೇವಿಗೂ ಪೂಜೆ ಸಲ್ಲಿಸಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಪತ್ನಿ ಸಮೇತರಾಗಿ ಅಶೋಕ ನಗರ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು.

ಸೋಮಿನಕಟ್ಟೆಯಲ್ಲಿ ಗಲಾಟೆ
ಸೋಮಿನಕೊಪ್ಪದಲ್ಲಿ ಮತಗಟ್ಟೆ 12 ರಲ್ಲಿ ಇವಿಎಂ ಮತಯಂತ್ರ ಕೆಟ್ಟ ಪರಿಣಾಮ ಸ್ವಲ್ಪ ಗೊಂದಲ ಮೂಡಿತ್ತು. ಬಿಜೆಪಿ ಮತ್ತು ಮೈತ್ರಿ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಇವಿಎಂ ಬದಲಾಯಿಸಿ ಮತ ಚಲಾವಣೆಗೆ ಅನುವು ಮಾಡಿಕೊಡಲಾಯಿತು.
ಮತದಾನ ಬಹಿಷ್ಕಾರ
ಜಿಲ್ಲೆಯ 2021 ಮತಗಟ್ಟೆಗಳಲ್ಲಿ ಕುಂಸಿ ವ್ಯಾಪ್ತಿಯ ದೊಡ್ಡಮಟ್ಟಿ ಗ್ರಾಮದಲ್ಲಿ ಜನರು ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡಿಲ್ಲವೆಂದು ಬೆಳಗ್ಗೆ ಮತದಾನ ಬಹಿಷ್ಕಾರ ಮಾಡಿದರು. ನಂತರ ಕುಂಸಿ ಠಾಣೆಯ ಪಿಎಸ್ಐ ಜಗದೀಶ್ ಗ್ರಾಮಕ್ಕೆ ಭೇಟಿ ನೀಡಿ ಮತ ಹಾಕುವಂತೆ ಕೇಳಿಕೊಂಡ ಹಿನ್ನಲೆಯಲ್ಲಿ ಗ್ರಾಮಸ್ಥರು ಮತದಾನಕ್ಕೆ ಮುಂದಾದರು.












Click it and Unblock the Notifications