ಹುಟ್ಟೂರು ಶಿವಮೊಗ್ಗದಲ್ಲಿ ಬಿಎಸ್ ವೈ ಹುಟ್ಟುಹಬ್ಬದಾಚರಣೆ ಹೇಗಿತ್ತು?
ಶಿವಮೊಗ್ಗ, ಫೆಬ್ರವರಿ 27: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ 78ನೇ ವರ್ಷದ ಜನ್ಮದಿನವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಅದ್ಧೂರಿಯಾಗಿ ಆಚರಿಸಿ ಪೂಜೆ, ಹೋಮ, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶಿವಮೊಗ್ಗದ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ನಡೆಯಿತು. ಜಿಲ್ಲಾ ಬಿಜೆಪಿಯ ವತಿಯಿಂದ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರ ನೇತೃತ್ವದಲ್ಲಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು.

ಜಿಲ್ಲಾ ಜಂಗಮ ವೀರಶೈವ ಅರ್ಚಕರ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಆಯುರ್ ಆರೋಗ್ಯ ಪ್ರಾಪ್ತಿಗಾಗಿ ಆಯುಷ್ಯ ಹೋಮ ಮತ್ತು ಕಾಶಿ ವಿಶ್ವನಾಥ ಸ್ವಾಮಿ, ಯಡಿಯೂರು ಶ್ರಿ ಸಿದ್ದಲಿಂಗೇಶ್ವರ ಸ್ವಾಮಿಗೆ ಮಹಾ ರುದ್ರಭೀಷೇಕ ಕಾರ್ಯಕ್ರಮವನ್ನು ನಡೆಸಲಾಯಿತು. ಶಿಕಾರಿಪುರ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಗ್ರಾಮ ದೇವರಿಗೆ ಬಿ.ಎಸ್ ಯಡಿಯೂರಪ್ಪನವರ ಹೆಸರಿನಲ್ಲಿ ವಿಶೇಷ ಪೂಜೆಯನ್ನು ನಡೆಸಲಾಯಿತು.

ಶಿಕಾರಿಪುರ ನಗರದಲ್ಲಿ ಕಾರ್ಯಕರ್ತರು ಹುಚ್ಚರಾಯಸ್ವಾಮಿ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ದುರುಗಮ್ಮ ದೇವಸ್ಥಾನ ಕುಂಬಾರಗುಂಡಿಯಲ್ಲಿ ದೇವಸ್ಥಾನಕ್ಕೆ, ದೇವಿಗೆ ವಿಶೇಷ ಅಲಂಕರ ಮಾಡಿಸಿ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಲಾಯಿತು. ಈ ಮೂಲಕ ಜಿಲ್ಲೆಯಲ್ಲಿ ಸಂಭ್ರಮದಿಂದ ಯಡಿಯೂರಪ್ಪನವರ ಹುಟ್ಟುಹಬ್ಬವನ್ನು ಆಚರಿಸಿದರು.












Click it and Unblock the Notifications