ಶಿವಮೊಗ್ಗದಲ್ಲಿ ಬಲಿಷ್ಠವಾಯಿತು ಜೆಡಿಎಸ್; ಬೀಳುವ ಹೊಡೆತ ಯಾರಿಗೆ?
ಬೆಂಗಳೂರು, ಏಪ್ರಿಲ್ 22; ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ವಿವಿಧ ಕಾರಣಕ್ಕೆ ಕುತೂಹಲ ಮೂಡಿಸಿರುವ ಕ್ಷೇತ್ರ ಶಿವಮೊಗ್ಗ ನಗರ. ಕ್ಷೇತ್ರದ ಚುನಾವಣಾ ರಾಜಕಾರಣದಲ್ಲಿ ದಿನಕ್ಕೊಂದುದ ಬೆಳವಣಿಗೆ ನಡೆಯುತ್ತಿದೆ. ಜೆಡಿಎಸ್ ಪಕ್ಷ ಪ್ರಬಲವಾಗುತ್ತಿದ್ದು, ಇದರಿಂದ ಬೀಳುವ ಹೊಡೆತ ಯಾರಿಗೆ? ಎಂಬ ಚರ್ಚೆಗಳು ಆರಂಭವಾಗಿದೆ.
ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವಾಗ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆಯನೂರು ಮಂಜುನಾಥ್ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿದರು. ಮೇ 10ರಂದು ನಡೆಯುವ ಚುನಾವಣೆಗೆ ಅವರು ಜೆಡಿಎಸ್‌ನ ಅಭ್ಯರ್ಥಿ. ಮತ್ತೊಂದು ಕಡೆ ಕಾಂಗ್ರೆಸ್ ಟಿಕೆಟ್ ಸಹ ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ 'ಕೈ' ತಪ್ಪಿತು.

ಆಯನೂರು ಮಂಜುನಾಥ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿದರು. ಕೆ. ಬಿ. ಪ್ರಸನ್ನ ಕುಮಾರ್ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದಾರೆ. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸೇರಿ ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಪ್ರಬಲವಾಗಿದೆ. 2013ರಲ್ಲಿ ಜಿಲ್ಲೆಯಲ್ಲ ಭದ್ರಾವತಿ, ಸೊರಬ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು ಎಂಬುದನ್ನು ಮರೆಯುವಂತಿಲ್ಲ.
ಈ ಬಾರಿಯ ಚುನಾವಣೆ; 2023ರ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಎಸ್. ಎನ್. ಚೆನ್ನಬಸವಪ್ಪ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಹೆಚ್. ಸಿ. ಯೋಗೇಶ್ ಮತ್ತು ಜೆಡಿಎಸ್‌ನಿಂದ ಆಯನೂರು ಮಂಜುನಾಥ್ ಅಭ್ಯರ್ಥಿಗಳು. ಆಯನೂರು ಮಂಜುನಾಥ್, ಕೆ. ಬಿ. ಪ್ರಸನ್ನ ಕುಮಾರ್ ಮತ್ತು ಆಯನೂರು ಮಂಜುನಾಥ್ ಮೂವರು ಸೇರಿದರೆ ಅದರ ಲಾಭ ಜೆಡಿಎಸ್ ಪಕ್ಷಕ್ಕೆ ಎಂಬುದು ಸತ್ಯ. ಆದರೆ ಇದರಿಂದ ನಷ್ಟವಾಗುವುದು ಯಾರಿಗೆ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆ. ಬಿ. ಪ್ರಸನ್ನ ಕುಮಾರ್, "ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿದ್ದೇನೆ. ನನ್ನ ಜೊತೆ ಹಲವು ಮುಖಂಡರು ಸಹ ಸೇರಿದ್ದಾರೆ. ಈ ಬಾರಿ ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು ಗೆಲ್ಲಿಸುವ ದೃಷ್ಟಿಯಿಂದ ಜೆಡಿಎಸ್ ಸೇರ್ಪಡೆಯಾಗಿದ್ದೇನೆ" ಎಂದು ಹೇಳಿದರು.
ಜೆಡಿಎಸ್‌ಗೆ ಆಘಾತವಾಗಿತ್ತು; ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಆಘಾತ ಎದುರಾಗಿತ್ತು. ಭದ್ರಾವತಿ ಕ್ಷೇತ್ರದ ನಾಯಕ, ಮಾಜಿ ಶಾಸಕ ಅಪ್ಪಾಜಿ ಗೌಡ ಕೋವಿಡ್‌ಗೆ ಬಲಿಯಾದರು. ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದರು. ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದ ಆರ್. ಎಂ. ಮಂಜುನಾಥ್ ಗೌಡ ಸಹ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದರು. ಆದರೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಆರ್. ಎಂ. ಮಂಜುನಾಥ ಗೌಡ ಬದಲು ಕಿಮ್ಮನೆ ರತ್ನಾಕರ್‌ಗೆ ಟಿಕೆಟ್ ನೀಡಿದೆ.
ಚುನಾವಣೆ ಸಮಯದಲ್ಲಿ ನಡೆದ ಬೆಳವಣಿಗೆಯಲ್ಲಿ ಕೆ. ಬಿ. ಪ್ರಸನ್ನ ಕುಮಾರ್, ಆಯನೂರು ಮಂಜನಾಥ್ ಪಕ್ಷಕ್ಕೆ ಬಂದಿದ್ದು ಸಹಕಾರಿಯಾಗಿದೆ. ಆದರೆ ಇದು ಚುನಾವಣೆಯಲ್ಲಿ ಹೇಗೆ ಪ್ರಭಾವ ಬೀರಲಿದೆ? ಎಂದು ಕಾದು ನೋಡಬೇಕಿದೆ. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಈ ಬಾರಿಯ ಚುನಾವಣೆ ಕಣಕ್ಕಿಳಿಯದಿರಲು ತೀರ್ಮಾನಿಸಿದ್ದರು. ಅಷ್ಟರಲ್ಲಿಯೇ ಆಯನೂರು ಮಂಜುನಾಥ್ ಪಕ್ಷ ಸೇರಿದರು.
ಶಿವಮೊಗ್ಗ ನಗರದ ಹಾಲಿ ಶಾಸಕರು ಬಿಜೆಪಿಯ ಕೆ. ಎಸ್. ಈಶ್ವರಪ್ಪ. ಆದರೆ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಪಕ್ಷ ಅವರ ಪುತ್ರ ಕೆ. ಈ. ಕಾಂತೇಶ್‌ಗೆ ಟಿಕೆಟ್ ನೀಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪಕ್ಷ ಎಸ್. ಎನ್. ಚೆನ್ನಬಸವಪ್ಪಗೆ ಟಿಕೆಟ್ ನೀಡುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಈ ಬಾರಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಬಿಜೆಪಿಗೆ ಮತ ಹಾಕಿದರೂ ಸಹ ಯಡಿಯೂರಪ್ಪ ಈ ಬಾರಿ ಸಿಎಂ ಆಗುವುದಿಲ್ಲ ಎಂಬ ಅಂಶ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಪ್ರಭಾವದ ಲಾಭ ಯಾರಿಗೆ ಆಗಲಿದೆ? ಎಂಬುದು ಎಲ್ಲರ ಕುತೂಹಲವಾಗಿದೆ.












Click it and Unblock the Notifications