ಕೆಎಂಪಿಎ ಕಾಯ್ದೆಗೆ ತಿದ್ದುಪಡಿ ತರಲು ಬಿಡಲ್ಲ : ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ನವೆಂಬರ್ 4 : 'ರಾಜ್ಯ ಸರ್ಕಾರ ಖಾಸಗಿ ವೈದ್ಯಕೀಯ ಕಾಯ್ದೆ ತಿದ್ದುಪಡಿ ತರಲು ಹೊರಟಿರುವುದನ್ನು ಬಿಜೆಪಿ ವಿರೋಧಿಸಿದೆ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಶನಿವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಈ ಮಸೂದೆ ಜಾರಿಗೆ ವಿಧಾನ ಮಂಡಲದ ಎರಡೂ ಸದನದಲ್ಲಿ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ವಿಧೇಯಕ ಜಾರಿಯಾಗಲಿಲ್ಲ. ನಂತರ ಜಂಟಿ ಸದನ ಸಮಿತಿಯಲ್ಲಿ ಶಾಸಕರಾದ ರಾಜಣ್ಣನವರ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು' ಎಂದರು.
'ಸದನ ಸಮಿತಿಯಲ್ಲಿದ್ದ ಎಲ್ಲಾ ಪಕ್ಷದವರೂ ವಿಧೇಯಕ್ಕೆಕೆ ವಿರೋಧ ವ್ಯಕ್ತಪಡಿಸಿದರು. ಆದರೆ, ಆರೋಗ್ಯ ಸಚಿವ ರಮೇಶ್ ಕುಮಾರ್ ಸರ್ವಾಧಿಕಾರಿಯಾಗಿ ವರ್ತನೆ ಮಾಡುತ್ತಿದ್ದಾರೆ. ಆರೋಗ್ಯ ಸಚಿವರು ಶತಾಯಗತಾಯವಾಗಿ ಮಸೂದೆ ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ' ಎಂದು ಆರೋಪಿಸಿದರು.
In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ
'ಈ ವಿಧೇಯಕ ಸದನದಲ್ಲಿ ಮತ್ತೆ ಮಂಡನೆಯಾದರೆ ಬಿಜೆಪಿ ವಿರೋಧ ವ್ಯಕ್ತಪಡಿಸಲಿದೆ. ಈ ವಿಧೇಯಕ ಜಾರಿ ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ. ವಿಧೇಯಕ ಜಾರಿಯಾಗಲು ಬಿಡುವುದಿಲ್ಲ' ಎಂದು ಈಶ್ವರಪ್ಪ ಹೇಳಿದರು.
'ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಿಸಿದರೂ ಸಹ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಟಿಪ್ಪು ಒಬ್ಬ ಮತಾಂಧ ದೇವಸ್ಥಾನ ಧ್ವಂಸ ಮಾಡಿದ್ದಾನೆ ಇಂತಹ ಒಬ್ಬ ವ್ಯಕ್ತಿಯ ಜಯಂತಿಯನ್ನು ಆಚರಿಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ' ಎಂದರು...

ತಡೆಗಟ್ಟಲು ಕ್ರಮ ಕೈಗೊಳ್ಳಿ
'ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಸರ್ಕಾರ ಮುಂದಾಗಬೇಕು. ಜಯದೇವ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಸೇವೆ ಇರುವುದರಿಂದ ಅಲ್ಲಿಗೆ ಹೋಗುತ್ತಾರೆ. ಇಂತಹ ವ್ಯವಸ್ಥೆಯನ್ನ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಗೆ ತರಲಿ' ಎಂದು ಈಶ್ವರಪ್ಪ ಸಲಹೆ ನೀಡಿದರು.

ಅನಾಹುತವಾಗಬಹುದು
'ಸರ್ಕಾರ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಹೋದರೆ, ವಿಧೇಯಕವನ್ನು ಜಾರಿಗೊಳಿಸಿದರೆ ವೃತ್ತಿ ತ್ಯಜಸುವುದಾಗಿ ವೈದ್ಯರು ಎಚ್ಚರಿಸಿದ್ದಾರೆ. ಹಾಗೇನಾದರೂ ಆದಲ್ಲಿ ಮುಂದೆ ನಡೆಯುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆ' ಎಂದು ಈಶ್ವರಪ್ಪ ಆರೋಪಿಸಿದರು.

ಕ್ಷಮೆ ಕೋರಿದ್ದೇನೆ
ತುರುವೇಕೆರೆಯಲ್ಲಿ ಬಿಜೆಪಿಯ ಪರಿವರ್ತನಾ ಸಮಾವೇಶ ನಡೆದಾಗ ಆಕಸ್ಮಿಕವಾಗಿ ಸವಿತ ಸಮಾಜದ ಬಂಧುಗಳಿಗೆ ನೋವಾಗುವ ರೀತಿಯಲ್ಲಿ ಮಾತನಾಡಿದ್ದೇನೆ. ಇದು ಆಕಸ್ಮಿಕವಾಗಿ ಬಂದ ಮಾತಾಗಿದ್ದು, ಈ ಕುರಿತು ಸವಿತ ಸಮಾಜದ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಕ್ಷಮೆ ಕೋರಿದ್ದೇನೆ' ಎಂದು ಸ್ಪಷ್ಟನೆ ನೀಡಿದರು.

ಸಚಿವ ಜಾರ್ಜ್ ರಾಜೀನಾಮೆ ನೀಡಿಲ್ಲ
'ಸಚಿವ ಕೆ.ಜೆ.ಜಾರ್ಜ್ ಹಠಮಾರಿ ತನದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಸುಪ್ರೀಂ ಕೋರ್ಟ್ ಸಿಬಿಐಗೆ ಮೂರು ತಿಂಗಳ ಒಳಗೆ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖಾ ವರದಿ ಸಲ್ಲಿಸಲು ಹೇಳಿದೆ. ಕೆ.ಜೆ.ಜಾರ್ಜ್ ಅವರು ತಾವಾಗೆ ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಡುವತನಕ ಹೋರಾಟ ಮಾಡುತ್ತೇವೆ' ಎಂದರು.

ಪೊಲೀಸರು ಜನರನ್ನು ತಡೆದರು
'ನವ ಕರ್ನಾಟಕ ಪರಿವರ್ತನಾ ಸಮಾವೇಶಕ್ಕೆ ಜನರು ಕಡಿಮೆಯಾಗಿರುವುದು ನಿಜ. ಪೋಲೀಸರು ಹಲವು ಭಾಗಗಳಿಂದ ಸಮಾವೇಶಕ್ಕೆ ಬರುತ್ತಿದ್ದ ಜನರನ್ನು ತಡೆದ ಹಿನ್ನಲೆಯಲ್ಲಿ ಜನರು ಕಡಿಮೆ' ಬಂದರು ಎಂದು ಈಶ್ವರಪ್ಪ ಹೇಳಿದರು.












Click it and Unblock the Notifications