ಮೀಸಲಾತಿ ಪ್ರತಿಭಟನೆ; ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ
ಶಿವಮೊಗ್ಗ, ಮಾರ್ಚ್ 27; ಒಳ ಮೀಸಲಾತಿ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬಂಜಾರ ಸಮುದಾಯದವರು ಮಾಜಿ ಮುಖ್ಯಮಂತ್ರಿ, ಶಿಕಾರಿಪುರದ ಬಿಜೆಪಿ ಶಾಸಕ ಬಿ. ಎಸ್. ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಹರಸಾಹಸ ಪಟ್ಟು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮುಂಜಾಗ್ರತಾ ಕ್ರಮವಾಗಿ ಶಿಕಾರಿಪುರ ಪಟ್ಟಣದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸೋಮವಾರ ಬಂಜಾರ ಸಮುದಾಯದವರು ಒಳ ಮೀಸಲಾತಿ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಕೈ ಮೀರಿ ಹೋಗಿದ್ದು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸದ ಬಳಿ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು. ಪ್ರತಿಭಟನೆ ಹಿನ್ನಲೆಯಲ್ಲಿ ಮಾಜಿ ಸಿಎಂ ಮನೆ ಮುಂದೆ ಬ್ಯಾರಿಕೇಡ್ ಹಾಕಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

ಆದರೆ ಆಕ್ರೋಶಗೊಂಡಿದ್ದ ಪ್ರತಿಭಟನಾನಿರತರು ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಾಟ ನಡೆಸಿದದರು. ಬ್ಯಾರಿಕೇಡ್ ದೂಡಿ ಹಾಕಿದರು. ಯಡಿಯೂರಪ್ಪ ನಿವಾಸದ ಸಮೀಪಕ್ಕೆ ಆಗಮಿಸಿ ಮನೆಯ ಮೇಲೆ ಕಲ್ಲು ತೂರಿದರು. ಪೊಲೀಸರು ಪ್ರತಿಭಟನಾ ನಿರತರ ನಡುವೆ ತಳ್ಳಾಟ, ನೂಕಾಟ ನಡೆದಿದ್ದು, ವಾಗ್ವಾದವೂ ಜೋರಾಗಿತ್ತು. ಸುಮಾರು 20 ನಿಮಿಷಗಳ ಬಳಿಕ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದರು.
#BREAKING Members of #Banjara community attacked senior #BJP leader BS Yediyurappa's house in #Shivamogga demanding to withdraw #Karnataka govt's decision for internal reservation. #KarnatakaElection2023 pic.twitter.com/bAka5goBie
— Imran Khan (@KeypadGuerilla) March 27, 2023
ಪ್ರತಿಭಟನಾನಿರತರು, ಪೊಲೀಸರ ನಡುವಿನ ಜಟಾಪಟಿಯಲ್ಲಿ ಹಲವರಿಗೆ ಚಿಕ್ಕಪುಟ್ಟ ಗಾಯಗಳು ಆಗಿವೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಯಡಿಯೂರಪ್ಪ ಮನೆ ಮುಂದೆ ಜಮಾವಣೆಗೊಂಡವರನ್ನು ಲಾಠಿ ಪ್ರಹಾರ ನಡೆಸಿ, ಪೊಲೀಸರು ಚದುರಿಸಿದರು. ಬಳಿಕ ಎಲ್ಲರೂ ಶಿಕಾರಿಪುರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮುಂದುವರೆಸಿದ್ದಾರೆ. ಪಟ್ಟಣದಲ್ಲಿ ಅಲ್ಲಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೀಸಲಾತಿ ವಿರೋಧಿ ಹೋರಾಟ ಹಿಂಸಾರೂಪ ಪಡೆದ ಕಾರಣ ಶಿಕಾರಿಪುರಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕಳಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿನ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದ್ದಾರೆ. ಚಿಕ್ಕಬಳ್ಳಾಪುರ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಶಿಕಾರಿಪುರದಲ್ಲಿ ನಡೆದ ಗಲಭೆ ಬಗ್ಗೆ ಮಾಹಿತಿ ನೀಡಲಾಗಿದೆ.

ಕಲ್ಲು ತೂರಾಟದಿಂದಾಗಿ ಬಿ. ಎಸ್. ಯಡಿಯೂರಪ್ಪ ನಿವಾಸದ ಕಿಟಕಿ ಗಾಜುಗಳು ಪುಡಿಯಾಗಿವೆ. ತಾಲೂಕು ಬಿಜೆಪಿ ಕಚೇರಿಯ ಮುಂದೆಯೂ ಪ್ರತಿಭಟನಾನಿರತರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಚೇರಿ ಮೇಲಿದ್ದ ಬಾವುಟ ತೆರವುಗೊಳಿಸಿದರು, ಬಂಜಾರ ಸಮುದಾಯದ ಬಾವುಟವನ್ನು ಹಾರಿಸಿದರು. ಮೀಸಲಾತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ; ಶಿಕಾರಿಪುರದ ಬಿಜೆಪಿ ಶಾಸಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸಕ್ಕೆ ಕಲ್ಲು ತೂರಿ, ಬಿಜೆಪಿ ಬಾವುಟ ತೆರವುಗೊಳಿಸಿದ್ದು ಸೇರಿದಂತೆ ಪಟ್ಟಣದಲ್ಲಿ ಗಲಭೆ ನಡೆದ ಹಿನ್ನಲೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಿಕಾರಿಪುರದ ತಹಶೀಲ್ದಾರ್ ವಿಶ್ವನಾಥ್ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಬಿಜೆಪಿ ವಿರುದ್ಧ ಆಕ್ರೋಶ; ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಬಂಜಾರ ಸಮುದಾಯ ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿಗೊಳಿಸಿ ಬಂಜಾರ ಸಮಯದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಆರ್‌ಎಸ್‌ಎಸ್ ಕುಮ್ಮಕ್ಕಿನಿಂದ ಒಳ ಮೀಸಲಾತಿ ಜಾರಿಗೊಳಿಸಲಾಗಿದೆ. ಹಿಂದೂಗೆಳೆಲ್ಲ ಒಂದು ಎಂದು ಹೇಳುವವರು ಒಳ ಮೀಸಲಾತಿ ಜಾರಿಗೆ ತಂದು ಅಸ್ಪೃಶ್ಯ, ಸ್ಪೃಶ್ಯ ಎಂದು ಕೆಲವು ಜಾತಿಗಳಿಗೆ ಮೀಸಲಾತಿ ನೀಡಿ ಉಳಿದ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬಾರದು ಎಂದು ಪ್ರತಿ ತಾಂಡಾದಲ್ಲಿ ಪ್ರಚಾರ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications