ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟ; ಶಿಕಾರಿಪುರಕ್ಕೆ ಆರಗ ಜ್ಞಾನೇಂದ್ರ ಭೇಟಿ
ಶಿವಮೊಗ್ಗ, ಮಾರ್ಚ್ 28; "ಶಿಕಾರಿಪುರ ಪಟ್ಟಣದಲ್ಲಿ ಪರಿಸ್ಥಿತಿ ತಿಳಿಯಾಗಿದೆ. ಯಾವುದೇ ಅಹಿತಕರ ಘಟನೆ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸೋಮವಾರ ಶಿಕಾರಿಪುರ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸದ ಮೇಲೆ ಒಳ ಮೀಸಲಾತಿ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬಂಜಾರ ಸಮುದಾಯದವರು ಕಲ್ಲು ತೂರಾಟ ನಡೆಸಿದ್ದರು.
ಮಂಗಳವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಶಿಕಾರಿಪುರಕ್ಕೆ ಭೇಟಿ ನೀಡಿದರು. ಶಿವಮೊಗ್ಗ ಸಂಸದ, ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ, ಶಿವಮೊಗ್ಗ ಜಿಲ್ಲಾ ಪೋಲಿಸ್ವ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಹಲವು ಸಚಿವರ ಜೊತೆ ಇದ್ದರು. ಪೊಲೀಸರ ಜೊತೆ ಚರ್ಚೆ ನಡೆಸಿದ ಸಚಿವರು, ಶಿಕಾರಿಪುರದ ಸದ್ಯದ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿದ ಆರಗ ಜ್ಞಾನೇಂದ್ರ, "ಒಳ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರ, ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸುಗಳನ್ನು ಅನುಷ್ಟಾನ ಮಾಡಿಲ್ಲ. ಈ ಕುರಿತು ವಿರೋಧ ಪಕ್ಷದ ನಾಯಕರು ಅಪಪ್ರಚಾರ ನಡೆಸಿ, ರಾಜಕೀಯ ಬೇಳೆ ಬೇಯಿಸಲು ಹೊರಟಿದ್ದಾರೆ" ಎಂದು ಆರೋಪಿಸಿದರು.
"ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮಧ್ಯೆ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಯಾವುದೇ ಕ್ರಮಕ್ಕೆ ಮುಂದಾಗದೆ, ನ್ಯಾಯ ಒದಗಿಸಲು ವಿಫಲರಾದ ವಿರೋಧ ಪಕ್ಷದ ನಾಯಕರು ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿ ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ" ಎಂದು ದೂರಿದರು.

"ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿ ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಕ್ತವಾಗಿ ಚರ್ಚೆ ನಡೆಸಲು ಸಿದ್ದರಿದ್ದಾರೆ. ಯಾವುದೇ ಕಾರಣಕ್ಕೂ ಯಾರೇ ಆಗಲಿ, ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು" ಎಂದು ಗೃಹ ಸಚಿವರು ಮನವಿ ಮಾಡಿದರು.
"ಸೋಮವಾರ ನಡೆದ ಗಲಾಟೆ ವೇಳೆ ಪೊಲೀಸರಿಗೆ ಪೆಟ್ಟು ಬಿದ್ದಿದೆ, ರಕ್ತ ಹೆಪ್ಪುಗಟ್ಟಿದೆ. ಪೊಲೀಸರಿಗೆ ಹೊಡೆದರೆ ಬಿಡಲು ಆಗುತ್ತದೆಯೇ?. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಒಳ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಲಸು ಮುಖ್ಯಮಂತ್ರಿಗಳು ಮುಕ್ತ ಮನಸ್ಸಿನಿಂದ ಇದ್ದಾರೆ. ಇದು ಇಲ್ಲಿಗೆ ನಿಲ್ಲಬೇಕು, ಪೊಲೀಸರ ವಿಚಾರಣೆಯಲ್ಲಿ ಯಾರು, ಯಾರು ಇದ್ದಾರೆ ಎಂಬುದನ್ನು ಪರಿಶೀಲನೆ ಮಾಡುತ್ತಾರೆ" ಎಂದು ಗೃಹ ಸಚಿವರು ಹೇಳಿದರು.
ನಿಷೇಧಾಜ್ಞೆ ಜಾರಿ; ಸೋಮವಾರ ಬಂಜಾರ ಸಮುದಾಯದವರು ಒಳ ಮೀಸಲಾತಿ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಕೈ ಮೀರಿ ಹೋಗಿತ್ತು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸದ ಬಳಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಬ್ಯಾರಿಕೇಡ್‌ಗಳನ್ನು ತಳ್ಳಿ ಪೊಲೀಸರ ಮೇಲೆ ಚಪ್ಪಲಿ, ಕಲ್ಲುಗಳನ್ನು ತೂರಲಾಗಿತ್ತು. ಬಳಿಕ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿತ್ತು. ಬಳಿಕ ಶಿಕಾರಿಪುರ ತಹಶೀಲ್ದಾರ್ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದರು.
ಮಂಗಳವಾರವೂ ಬಂಜಾರ ಸಮುದಾಯದವ ಪ್ರತಿಭಟನೆ ಶಿವಮೊಗ್ಗದಲ್ಲಿ ಮುಂದುವರೆದಿದೆ. ಕುಂಚೇನಹಳ್ಳಿ ತಾಂಡಾದ ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬಗಳಲ್ಲಿದ್ದ ಬಿಜೆಪಿ ಬಾವುಟಗಳನ್ನು ಕಿತ್ತು ಹಾಕಲಾಗಿದೆ. ನೂರಾರು ಯುವಕರು ಪ್ರತಿಭಟನೆಗೆ ಇಳಿದಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಬಂಜಾರ ಸಮುದಾಯದವರು ಇಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೊತೆ ಮಾತುಕತೆ ನಡೆಸಲಿದ್ದಾರೆ.












Click it and Unblock the Notifications