ಈಶ್ವರ್ ಖಂಡ್ರೆ ಹೇಳಿಕೆ ಖಂಡಿಸುವಾಗ ಮಲ್ಲಿಕಾರ್ಜುನ ಖರ್ಗೆ ಮೈಬಣ್ಣದ ಬಗ್ಗೆ ನಾಲಿಗೆ ಹರಿಬಿಟ್ಟ ಆರಗ ಜ್ಞಾನೇಂದ್ರ
ಶಿವಮೊಗ್ಗ, ಆಗಸ್ಟ್. 02: ಕೆ.ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಕುರಿತು ಮಾಜಿ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಶಿವಮೊಗ್ಗ ಜಿಲ್ಲೆಯ ಆರಗ ಜ್ಞಾನೇಂದ್ರ ಕ್ಷೇತ್ರವಾದ ತೀರ್ಥಹಳ್ಳಿಯಲ್ಲಿ ಆಗಸ್ಟ್ 1 ರಂದು ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಬೀದರ್ ಮೂಲದ ಈಶ್ವರ ಖಂಡ್ರೆ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು ಬೀದರ್‌ನ ಜನರಿಗೆ ಮರಗಳು, ಗಿಡಗಳು ಅಥವಾ ನೆರಳಿನ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ. "ಅರಣ್ಯ ಸಚಿವರಿಗೆ ಪಶ್ಚಿಮ ಘಟ್ಟದ ಜನರ ಜೀವನಕ್ರಮ, ಗಿಡ- ಮರಗಳ ಕುರಿತು ತಿಳಿವಳಿಕೆ ಇಲ್ಲ. ಅವರಿಗೆ ಮಲೆನಾಡು ಜನರ ಜೀವನ ಅಥವಾ ಪಶ್ಚಿಮ ಘಟ್ಟಗಳ ಹತ್ತಿರ ಇರುವವರು ಎದುರಿಸುತ್ತಿರುವ ಸಮಸ್ಯೆಗಳು ತಿಳಿದಿಲ್ಲ. ಪಶ್ಚಿಮ ಘಟ್ಟಗಳ ಬಗ್ಗೆ ವರದಿ ನೀಡಿರುವ, ವಿಜ್ಞಾನಿ ಕಸ್ತೂರಿ ರಂಗನ್ ಪರಿಸರ ತಜ್ಞ ಅಲ್ಲ" ಎಂದು ಕಿಡಿಕಾರಿದ್ದಾರೆ.
"ಅವರಿಗೆ ಮರ - ಗಿಡದ ಬಗ್ಗೆ ಗೊತ್ತಿಲ್ಲ. ಮರದ ನೆರಳಿನ ಮಹತ್ವ ಗೊತ್ತಿಲ್ಲ. ಅಲ್ಲಿನವರು ನೆರಳನ್ನೇ ಕಂಡಿರೋದಿಲ್ಲ. ಆ ಪ್ರದೇಶದ ಜನರು ಸುಡುವ ಸೂರ್ಯನ ಕೆಳಗೆ ಸುಟ್ಟು ಕರಕಲಾದಂತೆ ಇರ್ತಾರೆ. ನಮ್ಮ ಖರ್ಗೆಯವರನ್ನು ನೋಡಿದ್ರೇ ಗೊತ್ತಾಗೋದಿಲ್ವಾ...? ಪಾಪ.., ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದೇ ನೆರಳು ಅವರಿಗೆ. ಮಲೆನಾಡು ಮತ್ತು ಪಶ್ಚಿಮಘಟ್ಟದ ಬದುಕು ಅವರಿಗೆ ಗೊತ್ತಿಲ್ಲ" ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪಿಸಿಯೇ ಅವರ ಬಣ್ಣದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕಸ್ತೂರಿ ರಂಗನ್ ವರದಿಯನ್ನು ಸರ್ಕಾರ ಜಾರಿಗೊಳಿಸುವುದಾಗಿ ಈಶ್ವರ್ ಖಂಡ್ರೆ ನೀಡಿದ ಹೇಳಿಕೆಗೆ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ. "ಕಸ್ತೂರಿರಂಗನ್ ಅವರು ಪರಿಸರ ಪರಿಣತರಲ್ಲ. ಸ್ಥಳೀಯ ಜನರಿಂದಾಗಿ ಪಶ್ಚಿಮ ಘಟ್ಟಗಳು ಉಳಿದುಕೊಂಡಿವೆ. ಉಪಗ್ರಹ ಚಿತ್ರಗಳನ್ನು ಆಧರಿಸಿ ವಿಜ್ಞಾನಿಗಳು ವರದಿ ಸಿದ್ಧಪಡಿಸಿದ್ದಾರೆ. ವರದಿಯನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು" ಎಂದಿದ್ದಾರೆ.












Click it and Unblock the Notifications