Get Updates
Get notified of breaking news, exclusive insights, and must-see stories!

ಶಿವಮೊಗ್ಗ: ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ, ಜೋಗದ ಸಮಗ್ರ ಅಭಿವೃದ್ಧಿಯ ಗುರಿ: ಸಿಎಂ ಬೊಮ್ಮಾಯಿ

ಶಿವಮೊಗ್ಗ, ಏಪ್ರಿಲ್ 20: ಶಿವಮೊಗ್ಗದಲ್ಲಿ ಎರಡು ಪ್ರಮುಖ ಯೋಜನೆಗಳಿವೆ. ಈ ಪೈಕಿ ವಿಮಾನ ನಿಲ್ದಾಣ ಕಾಮಗಾರಿ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ವೀಕ್ಷಣೆ ಮಾಡಲಿದ್ದೇನೆ. ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ಆಡಳಿತಾತ್ಮಕ ಮಂಜೂರಾತಿಯನ್ನು ನೀಡಲಾಗಿದೆ. ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅದನ್ನು ಪರಿವರ್ತಿಸಲು ಬಹಳ ದಿನಗಳಿಂದ ಈ ಭಾಗದ ಜನ ಇಚ್ಛೆಯಿದೆ. ಅದಕ್ಕೆ ಖಂಡಿತವಾಗಿಯೂ ಸ್ಪಂದಿಸಲಾಗುವದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬುಧವಾರ ಶಿವಮೊಗ್ಗದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳ ಸಮಸ್ಯೆಗಳಿಗೆ ಕೆಲವು ಸ್ಪಷ್ಟನೆ ನೀಡಬೇಕು. ಕೆಲವು ಕಾನೂನಾತ್ಮಕ ಬದಲಾವಣೆಗಳನ್ನು ತರಬೇಕು. ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಳ್ಳುವುದಿದೆ. ಅವೆಲ್ಲವುದಕ್ಕೂ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಅರಣ್ಯ ಇಲಾಖೆಗೆ ಸಂಬಂಧಿಸಿದ ವಿಚಾರಗಳನ್ನು ಕಾನೂನಾತ್ಮಕವಾಗಿ ಕೈಗೆತ್ತಿಕೊಳ್ಳಲು ಮೇ ಮೊದಲನೇ ವಾರದಲ್ಲಿ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು, ಅಡ್ವೋಕೇಟ್ ಜನರಲ್ ಹಾಗೂ ಅಧಿಕಾರಿಗಳೊಂದಿಗೆ ವಿಶೇಷ ಸಭೆಯನ್ನು ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆಲವು ವಿಷಯಗಳಿಗೆ ತಕ್ಷಣವೇ ಪರಿಹಾರ ನೀಡಲಾಗುವುದು. ಕೆಲವು ಸರ್ವೋಚ್ಚ ನ್ಯಾಯಾಲಯ ಹಾಗೂ ಕೇಂದ್ರ ಸರ್ಕಾರದಿಂದ ತೀರುವಳಿ ಪಡೆಯಲು ಪ್ರಯತ್ನ ಮಾಡಲಾಗುವುದು ಎಂದರು.

 ಕೈಗಾರಿಕೋದ್ಯಮಕ್ಕೆ ಆದ್ಯತೆ

ಕೈಗಾರಿಕೋದ್ಯಮಕ್ಕೆ ಆದ್ಯತೆ

ಕೈಗಾರಿಕೋದ್ಯಮಕ್ಕೆ ಶಿವಮೊಗ್ಗದಲ್ಲಿ ವಿಪುಲ ಅವಕಾಶಗಳಿದ್ದು, ಈ ಬಗ್ಗೆಯೂ ವಿಶೇಷ ಗಮನ ಹರಿಸಲಾಗುವುದು. 'ಬಿಯಾಂಡ್ ಬೆಂಗಳೂರು' ಕಾರ್ಯಕರ್ಮದಡಿ ಎಲ್ಲಾ ಮೂಲಭೂತ ಸೌಕರ್ಯಗಳು ಇಲ್ಲಿವೇ. ಹೆಚ್ಚಿನ ಸೌಲಭ್ಯಗಳನ್ನು ಸೇರಿಸಿದರೆ, ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಆಕರ್ಷಿಸಲು ಸಾಧ್ಯವಿದೆ. ಇಲ್ಲಿ ಕೌಶಲ್ಯವೂ ಇದ್ದು, ಇದರ ಸದುಪಯೋಗ ಪಡೆಯಲು ವಿಶೇಷ ಅಭಿಯಾನ ಕೈಗೊಳ್ಳಲಾಗುವುದು ಎಂದರು.

ಮುಂದಿನ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಟೆಕ್ ಸಮಿಟ್‌ನಲ್ಲಿ ಐ.ಟಿ-ಬಿ.ಟಿ ಪ್ರಮುಖರು ಆಗಮಿಸುತ್ತಾರೆ. ಅವರಿಗೆ ಬಿಯಾಂಡ್ ಬೆಂಗಳೂರು ವಿಚಾರ ತಿಳಿಸಿ, ಐಟಿಗೆ ಮೀಸಲಿಟ್ಟಿರುವ ಸ್ಥಳದ ಉಪಯೋಗ ಮಾಡಿಕೊಂಡು ಟೈಯರ್- 2 ನಗರಗಳಲ್ಲಿ ಐಟಿ ಸಂಸ್ಥೆಗಳ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

 ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರಿ ಆದೇಶ

ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರಿ ಆದೇಶ

ಸಮಗ್ರ ಕರ್ನಾಟಕ ಅಭಿವೃದ್ಧಿ ಯಾಗಬೇಕು ಎಂಬ ಚಿಂತನೆ ಇದೆ. ನಮ್ಮ ಬಜೆಟ್ ಕೂಡ ರೂಪುರೇಷೆಗಳನ್ನು ಇಟ್ಟುಕೊಂಡು ಸಿದ್ಧವಾಗಿದೆ. ಈಗಾಗಲೇ ಬಜೆಟ್‌ನ ಶೇ.75ರಷ್ಟು ಯೋಜನೆಗಳಿಗೆ ಸರ್ಕಾರಿ ಆದೇಶಗಳಾಗಿವೆ. ಇನ್ನು 20ರಷ್ಟು ಯೋಜನೆಗಳಿಗೆ ಈ ತಿಂಗಳೊಳಗೆ ಆದೇಶಗಳನ್ನು ನೀಡಲಾಗುವುದು. ಪ್ರಥಮ ಬಾರಿಗೆ ರಾಜ್ಯದಲ್ಲಿ ಬಜೆಟ್‌ನ ಘೋಷಣೆಗಳಿಗೆ ಒಂದು ತಿಂಗಳಲ್ಲಿ ಆದೇಶಗಳನ್ನು ಹೊರಡಿಸಲಾಗಿದೆ. ಇದು ಬಜೆಟ್‌ನ ಅನುಷ್ಠಾನ ಮಾಡಲು ಸರ್ಕಾಕ್ಕೆ ಇರುವ ಬದ್ಧತೆಯನ್ನು ತೋರಿಸುತ್ತದೆ. ಜನರ ಅನುಕೂಲಕ್ಕಾಗಿ ರೂಪಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

 ಗ್ರಾಮೀಣ, ಸಣ್ಣ ನಗರಗಳನ್ನು ಭೂಕಬಳಿಕೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಕ್ಕೆ

ಗ್ರಾಮೀಣ, ಸಣ್ಣ ನಗರಗಳನ್ನು ಭೂಕಬಳಿಕೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಕ್ಕೆ

ಭೂಗಳ್ಳತನಕ್ಕೆ ಸಂಬಂಧಿಸಿದಂತೆ ರೈತರು ಬೆಂಗಳೂರಿಗೆ ಓಡಾಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ವಿಷಯ ನಮ್ಮ ಗಮನಕ್ಕೆ ಬಂದಿದೆ. ವಿಧಾನಸಭೆಯಲ್ಲಿಯೂ ಚರ್ಚೆಯಾಗಿದೆ. ಸರ್ಕಾರ ಆದಷ್ಟೂ ಬೇಗನೆ ಈ ಬಗ್ಗೆ ತೀರ್ಮಾನ ಮಾಡಲಿದೆ. ಭೂಮಿ ಕಬಳಿಕೆ ಪ್ರಾರಂಭವಾಗಿದ್ದು ಬೆಂಗಳೂರಿನಲ್ಲಿ. ಕಾನೂನು ರೂಪಿಸುವಾಗ ಇಡೀ ಕರ್ನಾಟಕದ ವ್ಯಾಪ್ತಿಗೆ ರೂಪಿಸಲಾಗಿದೆ.

ಬೆಂಗಳೂರಿನಲ್ಲಿ ಭೂಗಳ್ಳತನ ಪ್ರಕರಣಗಳು ಹೆಚ್ಚಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯಕ್ಕಾಗಿ ಒಕ್ಕಲುತನ ಅಥವಾ ಸಣ್ಣ ನಿವೇಶನಗಳನ್ನು ಮಾಡಿಕೊಂಡಿರಬಹುದು. ಹೀಗಾಗಿ ಇದನ್ನು ಭೂಕಬಳಿಕೆ ಹೋಲಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಬಂದಿದ್ದರಿಂದ ಕಾನೂನನ್ನು ಇಡೀ ರಾಜ್ಯಕ್ಕೆ ರೂಪಿಸಿರುವುದು ಸರಿಯಲ್ಲ. ಜನ ಬೆಂಗಳೂರಿಗೆ ಬರಬೇಕಾಗುತ್ತದೆ, ನಿರ್ಧಾರಗಳೂ ಆಗಿಲ್ಲ. ಆದಷ್ಟು ಬೇಗ ಈ ಬಗ್ಗೆ ಆದೇಶ ಹೊರಡಿಸಲಾಗುವುದು. ಭೂಗಳ್ಳತನ ಬೆಂಗಳೂರು ಮತ್ತು ಇತರ ಮೆಟ್ರೋಪಾಲಿಟನ್ ನಗರಗಳಿಗೆ ಸೀಮಿತವಾಗಿಸಿ, ಗ್ರಾಮೀಣ ಮತ್ತು ಸಣ್ಣ ನಗರಗಳನ್ನು ಈ ಭೂಕಬಳಿಕೆ ನ್ಯಾಯಾಲಯದ ವ್ಯಾಪಿಯಿಂದ ಹೊರಗಿಟ್ಟು ಆದೇಶ ಹೊರಡಿಲಾಗುವುದು ಎಂದರು.

 ಗುರಿ ಮೀರಿ ಆದಾಯ ಸಂಗ್ರಹ

ಗುರಿ ಮೀರಿ ಆದಾಯ ಸಂಗ್ರಹ

ಆಗಸ್ಟ್ 2021ರವರೆಗೂ ನಮ್ಮ ಸಂಪನ್ಮೂಲ ಕ್ರೋಢೀಕರಣ ಕೋವಿಡ್ ಕಾರಣದಿಂದ 5 ಸಾವಿರ ಕೋಟಿ ಕಡಿಮೆಯಿತ್ತು. ಹಲವಾರು ಸಭೆಗಳನ್ನು ಕರೆದು ಸಂಪನ್ಮೂಲ ಕ್ರೋಢೀಕರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡದ ಮೇಲೆ ವಾಣಿಜ್ಯ ತೆರಿಗೆ ಒಂದರಲ್ಲೇ 11 ಸಾವಿರ ಕೋಟಿ ರೂ.ಗಳನ್ನು ಗುರಿ ಮೀರಿ ಸಂಗ್ರಹ ಮಾಡಲಾಗಿರುವುದು ದಾಖಲೆ.

ಒಟ್ಟು 15 ಸಾವಿರ ಕೋಟಿ ನಮ್ಮ ಗುರಿಗಿಂತ ಹೆಚ್ಚು ಸಂಗ್ರಹವಾಗಿದೆ. ಒಟ್ಟಾರೆ ಆರ್ಥಿಕತೆ ಹೆಚ್ಚಾಗಿದ್ದರಿಂದ ಕೇಂದ್ರ ಸರ್ಕಾರದಿಂದಲೂ ಹೆಚ್ಚು ಅನುದಾನ ಬಂದಿದೆ. ಮಾರ್ಚ್ 29ರಂದು 23 ಸಾವಿರ ಕೋಟಿ ಅಧಿಕವಾಗಿರುವ ಪೂರಕ ಆಯವ್ಯಯವನ್ನು ಮಂಡಿಸಲಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಈಗಾಗಲೇ ಬೊಕ್ಕಸಕ್ಕೆ ಬಂದಿರುವ ಹಣದಲ್ಲಿ ಇದನ್ನು ಖರ್ಚು ಮಾಡಲಾಗುವುದು.

2023ರಲ್ಲಿಯೂ ಇದೆ ಮಾದರಿಯನ್ನು ಅನುಸರಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಒಟ್ಟಾರೆ ಆರ್ಥಿಕತೆ ಉತ್ತಮವಾಗಿದೆ. ತೆರಿಗೆ ಸಂಗ್ರಹಕ್ಕೆ ಶ್ರಮ ಕೂಡ ಹೆಚ್ಚಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

 ಆರ್ಥಿಕ ಶಿಸ್ತಿಗೆ ಒತ್ತು

ಆರ್ಥಿಕ ಶಿಸ್ತಿಗೆ ಒತ್ತು

ಕಳೆದ ವರ್ಷ ಬಜೆಟ್‌ನಲ್ಲಿ 67,100 ಕೋಟಿ ರೂ. ಸಾಲ ಪಡೆಯುವುದಾಗಿ ಹೇಳಲಾಗಿತ್ತು. ಆದರೆ ಆರ್ಥಿಕತೆ ಚೇತರಿಕೆ ಕಂಡಿದ್ದರಿಂದ ನಾವು 63,100 ಕೋಟಿ ರೂ.ಗಳ ಸಾಲ ಮಾತ್ರ ಪಡೆಯಲಾಗಿದೆ. 4 ಸಾವಿರ ಕೋಟಿ ಸಾಲ ಪಡೆಯಲು ಅವಕಾಶವಿದ್ದರೂ ನಿಯಂತ್ರಣ ಮಾಡಲಾಗಿದೆ. ಈ ವರ್ಷ ಕೇಂದ್ರ ಸರ್ಕಾರ ನೀಡಿರುವ 3.5% ಗುರಿಯ ಒಳಗೆ ಶೇ.3.2ಕ್ಕೆ ನಿಯಂತ್ರಿಸಿ ನಾವು ನಮ್ಮ ಬಜೆಟ್ ಮಂಡಿಸಿದ್ದೇವೆ.

ಸಾಲವನ್ನು ಕೂಡ ಕಡಿಮೆ ಮಾಡಬಹುದು. ಕಳೆದ ವರ್ಷ ವಿತ್ತೀಯ ಕೊರತೆ ಇತ್ತು. 15 ಸಾವಿರ ಕೋಟಿ ರೂ.ಗಳ ಕೊರತೆಯಾಗಬಹುದು ಎಂಬ ನಿರೀಕ್ಷೆ ಇತ್ತು. ವರ್ಷಾಂತ್ಯಕ್ಕೆ 6 ಸಾವಿರ ಕೋಟಿ ಮಾತ್ರ ಕೊರತೆಯಾಗಿದೆ. 9 ಸಾವಿರ ಕೋಟಿ ರೂ.ಗಳನ್ನು ಪಡೆಯಲು ಸಾಧ್ಯವಾಗಿದೆ. ಈ ವರ್ಷವೂ ಕೂಡ ವಿತ್ತೀಯ ಕೊರತೆ ನೀಗಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಆರ್ಥಿಕ ಶಿಸ್ತು ತರಲಾಗುತ್ತಿದೆ. ತೆರಿಗೆಯೇತರ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಕಳೆದ ವರ್ಷ ಶೇ.94 ಬದ್ಧತಾ ವೆಚ್ಚವಿತ್ತು. ಈ ವರ್ಷ ಶೇ.89ಕ್ಕೆ ಇಳಿಸಲಾಗಿದೆ. ಈ ವರ್ಷ ಇನ್ನಷ್ಟು ಇಳಿಸಿ, ಅಭಿವೃದ್ಧಿಗೆ ಹಣ ದೊರೆಯುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೇಂದ್ರ ಸರ್ಕಾರದಿಂದ ಬರಬೇಕಿರುವ ಅನುದಾನದಲ್ಲಿ ಕಳೆದ ವರ್ಷ ಸಾಲದ ರೂಪದಲ್ಲಿ 11 ಸಾವಿರ ಕೋಟಿ ರೂ.ಗಳು ಬರಬಹುದೆಂಬ ನಿರೀಕ್ಷೆ ಇತ್ತು. 10 ಸಾವಿರ ಕೋಟಿ ರೂ.ಬಂದಿದೆ. ಸುಮಾರು 18 ಸಾವಿರ ಕೋಟಿ ರೂ.ಗಳನ್ನು ಬಡ್ಡಿ ರಹಿತವಾಗಿ ಮತ್ತು ಸೆಸ್ ರೂಪದಲ್ಲಿ ಬಂದಿದೆ. ಈ ವರ್ಷ ಜೂನ್‌ನಲ್ಲಿ ಬರಬೇಕಿರುವ ಮೊತ್ತ ಬಿಡುಗಡೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವರೂ ತಿಳಿಸಿದ್ದಾರೆ ಎಂದರು.

 ಪಕ್ಷ ಸಂಘಟನೆಗೆ ಒತ್ತು

ಪಕ್ಷ ಸಂಘಟನೆಗೆ ಒತ್ತು

ಭಾ.ಜ.ಪ ಸಂಘಟನಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಲು ಶಿವಮೊಗ್ಗಕ್ಕೆ ಆಗಮಿಸಿದ್ದು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಎರಡು ಕೋರ್ ಸಮಿತಿ ಸಭೆಗಳಾಗಿವೆ. ಮೂರೂ ಜಿಲ್ಲೆಗಳ ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಶಕ್ತಿ ಕೇಂದ್ರ ಹಾಗೂ ಮೇಲ್ಪಟ್ಟ ಸಭೆಗಳು ನಡೆದಿವೆ. ಶಿವಮೊಗ್ಗದಲ್ಲಿ ಸಂಘಟನೆ ಗಟ್ಟಿಯಾಗಿದೆ. ಇನ್ನಷ್ಟು ಗಟ್ಟಿಗೊಳಿಸಲು ಹಲವಾರು ಸೂಚನೆಗಳನ್ನು ನೀಡಲಾಗಿದೆ. ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ನಿರ್ದೇಶನ ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯ ಬಗ್ಗೆಯೂ ಚರ್ಚೆಯಾಗಿದೆ. ಬಹಳಷ್ಟು ದಿನಗಳಿಂದ ಬಾಕಿ ಇರುವ ಕೆಲಸಗಳನ್ನು ಬಗೆಹರಿಸಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಚುರುಕುಗೊಳಿಸಬೇಕು ಎಂದು ಚರ್ಚೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+